Sunday, May 24, 2009

ಹೆಜ್ಜೆ

ಇವತ್ತು ಜೀವನದ ಒಂದಷ್ಟು ನೆಮ್ಮದಿಯ ಕ್ಷಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದೇನೆ. ಈ ಹಿಂದೆ ಇದ್ದ ನೋವು, ಅಸಹನೆ, ಸೆಡವು ಕೊಂಚ ಮಟ್ಟಿಗೆ ತಗ್ಗಿದೆ. ನನ್ನೆದುರು ನನ್ನ 3 ವರ್ಷದ ಮಗಳು ಅಭಿಜ್ಞಾಳ ನಗು, ತೊದಲ್ನುಡಿ, ತುಂಟಾಟ, ಚಿನ್ನಾಟ ಇತ್ಯಾದಿಗಳಿವೆ. ಅಮ್ಮ ಜೊತೆಗಿದ್ದಾರೆ, ನನ್ನ ಪ್ರೀತಿಯ ಪತ್ನಿ ಕೂಡ ನನ್ನ ಹೆಜ್ಜೆಗಳ ಹಿಂದಿದ್ದಾಳೆ. ನೆಚ್ಚಿದ ನೌಕರಿ ಕೈ ಹಿಡಿದಿದೆ ಅದೇ ರೀತಿ ಸ್ನೇಹಿತರ ಹಾಗು ಹಿತೈಷಿಗಳ ಬಳಗ ಬೆಳೆದಿದೆ. ಆದರೂ ಅದ್ಯಾಕೋ ನಡೆದು ಬಂದ ಹಾದಿಯಲ್ಲಿ ಮುಡಿದ ಹೆಜ್ಜೆಗಳನ್ನು ತಿರುಗಿ ನೊಡುತ್ತೇನೆ, ಅಲ್ಲಿ ಬಹಳಷ್ಟು ಮಂದಿ ನೆನಪಾಗುತ್ತಾರೆ. ಬರವಣಿಗೆಗೆ ಹಾದಿ ತೋರಿದ ತಂದೆ ರೋಜಾ, ವೃತ್ತಿ ಜೀವನ ಗುರು ಕೆ.ಎಂ ಮಂಜುನಾಥ್, ನಿಂತ ನಿಲುವಲ್ಲೇ ನಗುನಗುತ್ತಾ ನನ್ನನ್ನು ಹಾಗು ನನ್ನ ಬದುಕನ್ನು ಧೂಳಿಪಟ ಮಾಡಲು ಹೊರಟಿದ್ದ ಒಬ್ಬ ಮಹಾನ್ ಲೆಪ್ಟಿಸ್ಟ್ ಬರಹಗಾರ....
ಅದೇ ಹೆಜ್ಜೆಗಳು....., ಅಲ್ಲೆಲ್ಲೋ ಒಂದು ಸ್ವಲ್ಪ ಭಾರ..., ಒಂದಷ್ಟು ಹಗುರ.
ಆದರೂ ನನ್ನ ನೆನಪಿನ ಪುಟಗಳಲ್ಲಿ, ಎಡವಿದ ಹೆಜ್ಜೆಗಳ ಗುರುತುಗಳಲ್ಲಿ, ಸೋತು ಕುಳಿತಾಗ ಬಿಟ್ಟ ನಿಟ್ಟುಸಿರಿನಲ್ಲಿ ಅದೇ ಬರಹಗಾರ ನೆನಪಾಗುತ್ತಾನೆ. ಮತ್ತೆ ಎದ್ದು ನಡೆ ಅನ್ನೊವಷ್ಟರ ಮಟ್ಟಿಗೆ ಪ್ರೇರಣೆಯಾಗುತ್ತಾನೆ.
ಇಲ್ಲಿ ನಾನು ಹಂಚಿಕೊಳ್ಳಲು ಇಚ್ಚಿಸುವ ವಿಷಯಗಳು ಸಾಕಷ್ಟಿವೆ. ಇಂದಿನಿಂದ ಬರೆಯಲು ಆರಂಬಿಸುತ್ತಿದ್ದೇನೆ.
ಹಾಂ.., ಎಲ್ಲಕ್ಕೂ ಮುನ್ನ ಭಯೋತ್ಪಾದಕರನ್ನು ಪ್ರಿತಿಸು ಅಂತಾ ಬುದ್ದಿವಾದ ಹೇಳುತ್ತಿದ್ದ ನನ್ನೊಬ್ಬ ಗೆಳೆಯನಿಗೂ ಹಾಗು ತನ್ನನ್ನು ತಾನೇ ವೇದಾಂತಿ ಎಂದುಕೊಳ್ಳುವ ಮೂಲಕ ಬೇರೆಯವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದ ಮಹಾನ್ ಬರಹಗಾರನಿಗೂ ನೀವೇ ನನ್ನ ಪ್ರೇರಣೆ ಅನ್ನೋ ಮಾತನ್ನ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ.

1 comment:

ಅರಕಲಗೂಡುಜಯಕುಮಾರ್ said...

ಬರಹ ಚೆನ್ನಾಗಿದೆ, ಆದರೆ ನಿಮ್ಮ ಲೆಪ್ಟ್ಟಿಸ್ಟ್ ಬರಹಗಾರ ಮತ್ತು ಆ ಶಿಷ್ಯ ಯಾರು ಎಂದು ತಿಳಿಯಲಿಲ್ಲ. ಜೀವನದ ಹಾದಿಯಲ್ಲಿ ಹತ್ತು ಹಲವು ಸಂಗತಿಗಳು ನಮ್ಮನ್ನು ತಾಕುತ್ತವೆ, ಆದರೆ ತಟ್ಟುವಂತಹ ಸಂಗತಿಗಳು ಮಾತ್ರ ಕೆಲವು, ಅಂತಹ ತಟ್ಟುವ, ಕಾಡುವ ಬರಹಗಳು ನಿಮ್ಮ ಬ್ಲಾಗ್ ನಲ್ಲಿ ಮೂಡಿಬರಲಿ.
ಸಿ. ಜಯಕುಮಾರ್., ಪತ್ರಕರ್ತರು, ಹಾಸನ .