Thursday, March 4, 2010

ಆನೆ ಮತ್ತು ನಾನು......,

ಇತ್ತೀಚೆಗೆ ತುಸು ಜಾಸ್ತೀನೇ ಅನ್ನೋವಷ್ಟು ದೇಹ ಬೆಳೆಸಿಕೊಂಡಿದ್ದೇನೆ. ನನ್ನ ಗೆಳೆಯರು ಯಾಕೋ...., ಈ ಪರಿ ಕೊಬ್ಬಿದ್ದಿಯಾ...? ಅಂತಾ ಅಂದಾಗಲ್ಲೆಲ್ಲಾ ಅದ್ಯಾವನೋ ಬೃಹನ್ನಳೆಯೊಬ್ಬ ನನ್ನ ಬಗ್ಗೆ '' ತಿಂದೂ ತಿಂದೂ ಕಾಡೆಮ್ಮೆಯಂತೆ ಕೊಬ್ಬಿದ ಜೋಸೆಫ್....,'' ಅಂತಾ ಬರೆದದ್ದು ನೆನಪಾಗುತ್ತೆ.  ಸಮೃದ್ದಿ ಅನ್ನೋದೇ ಅಲ್ಲಿ, ನಮ್ಮ ಬಗ್ಗೆ ಮತ್ತೊಬ್ಬ ಕಾಮೆಂಟ್ ಮಾಡಲಿಕ್ಕೆ ಶುರು ಮಾಡಿದ್ದಾನೆ ಅಂತಾಂದ್ರೆ ನಾವು ಗುರುತಿಸಿಕೊಳ್ಳಲಿಕ್ಕೆ ಶುರು ಮಾಡಿದ್ದೇವೆ ಅಂತಾ ಅರ್ಥ. ನಮ್ಮನ್ನು ಹೀಯಾಳಿಸಲಿಕ್ಕೆ ಶುರುವಾಯ್ತು ಅಂದ್ರೆ ನಾವು ಬೆಳೆಯುತ್ತಿದ್ದೇವೆ ಅಂದುಕೊಳ್ಳಬೇಕು. ತೀರಾ ನಮ್ಮನ್ನು ಹಿಗ್ಗಾಮುಗ್ಗಾ ತೆಗಳಿ ನಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಆಡಿಕೊಳ್ಳೋದು ಸಾಧ್ಯವಾದಷ್ಟು ನಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ ಅಂದ್ರೆ ನಾವು ಬೆಳೆದಿದ್ದೇವೆ ಎಂದು ಸಮಾಧಾನಪಟ್ಟುಕೊಳ್ಳಬೇಕು. ಇಂತಹುದ್ದೊಂದು ಸರ್ಕಲ್ ಹಾಕಿಕೊಂಡು ಕುಳಿತಿದ್ದ ನಾನು ತೀರಾ ನನ್ನನ್ನ ಕೋಣ ಅಂತಾ ಬರೆದಿದ್ದಕ್ಕೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದೆ. ಹೀಗೆ ಸಿಟ್ಟಾಗಿದ್ದ ನನ್ನನ್ನು  ನನ್ನ ಗೆಳೆಯನೊಬ್ಬ '' ನಾಯಿ ಬೊಗಳಿದ್ರೆ ಆನೆ ತೂಕಾ ಕಮ್ಮಿಯಾಗುತ್ತಾ...? ನೀನು ಆನೆ ಕಣೋ.., ಡೋಂಟ್ ವರಿ....'' ಅಂತಾ ಮತ್ತಷ್ಟು ಉರಿದುಕೊಳ್ಳುವಂತೆ ಮಾಡಿದ್ದ. ಹಾಗಂತಾ ಆನೇ ಅಂದ್ರೇ ಸಾಮಾನ್ಯನಾ....? ಭಾರೀ ಗಂಭೀರ...., ಮತ್ತೊಬ್ಬರ ಪರಿಶ್ರಮವನ್ನು ಕಿತ್ತು ತಿನ್ನದ..., ಸದಾ ಸಮೃದ್ದಿ ಹಾಗು ಸಂಘ ಜೀವಿಯಾಗಿರುವ....,ಹೀಗೇ ನಾನಾ ಒಳ್ಳೇ ಲಕ್ಷಣಗಳುಳ್ಳ ಪ್ರಾಣಿ. ಇನ್ನು ನಾನು ಈಗಿರುವ ದೇಹಸೌಂದರ್ಯಕ್ಕೆ ಸರಿಯಾದ ಅದೇ ಸರಿ  ಅನ್ನೋ ನಿರ್ಧಾರಕ್ಕೆ ಬಂದೆ. ಹಾಗಾಗಿ ಹಾಸನದ ಪತ್ರಿಕಾ ಮಿತ್ರರ ಬಳಗದಲ್ಲಿ ನಾನೊಬ್ಬ ಒಂಟಿ ಸಲಗನಾಗಿದ್ದೇನೆ. ಹಾಗಂತ ಕರೆಸಿಕೊಳ್ಳೋಕೆ  ನನಗೇನೂ ಬೇಸರವಿಲ್ಲ. ಯಾಕೆಂದ್ರೆ ಹಾಸನ ಜಿಲ್ಲೆ ಮಣ್ಣಿನ ಮಕ್ಕಳಿಗೆ ಎಷ್ಟು ಫೇಮಸ್ಸೋ ಅಷ್ಟೇ ಆನೆಗಳಿಗೂ ಫೇಮಸ್ಸಾಗಿದೆ. ರಾಜಕಾರಣವನ್ನೇ ಹಾಸು ಹೊದ್ದು ಮಲಗುವ ಹಾಸನದಲ್ಲಿ ರಾಜಕೀಯ ಮಾಡೋಕೆ ಆನೆಗಳೂ ಕೂಡ ವಸ್ತುಗಳು . ನನ್ನನ್ನು ವಿನಾಕಾರಣ ತೆಗಳಿ ರೆಡ್ ಚಿಲ್ಲಿ ಅಂದುಕೊಳ್ಳೋರ ಬಗ್ಗೆ ಒಂದು ಸಣ್ಣ ಕನಿಕರ ವ್ಯಕ್ತಪಡಿಸುತ್ತೇನೆ.
 ಇನ್ನು ಆನೆಗಳಿಗೂ ನನಗೂ ಎಲ್ಲಿಲ್ಲದ ಅವಿನಾಭಾವ ಸಂಬಂದ. ಅದಕ್ಕೆ 2 ಕಾರಣಗಳಿವೆ. 1. ಆನೆಗಳು ಎಲ್ಲೇ ದಾಳಿ ಮಾಡಿದ್ರೂ ಬಹುತೇಕ ನನಗೆ ಮೊದಲ ಕರೆ ಬರುತ್ತೆ. 2. ಹಾಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಲು ಸಿಧ್ದರಾಗುವ ನನ್ನ ಸ್ನೇಹಿತರ ಬಳಗಕ್ಕೊಂದು ವಾಹನ ಏರ್ಪಾಡು ಮಾಡುವ ಜವಾಬ್ದಾರಿ ನನ್ನ ಹೆಗಲೇರಿರುತ್ತೆ.  ಆನೆಗಳ ಹಾವಳಿ, ಆನೆಗಳ ಧಾಳಿ.., ಸಾವು ನೋವಿನ ಬಗ್ಗೆ ಬಹಳಷ್ಟು ಸುದ್ದಿ ಮಾಡಿದ್ದೇನೆ. ಈ ಎಲ್ಲದರ ಪೈಕಿ ಅತ್ಯಂತ ಭಯಾನಕ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ.
ಅಂದು ನಸುಕಿನ ವೇಳೆ ಮಾಮೂಲಿನಂತೆ ಆಲೂರಿನ ಸುಳುಗೋಡು ಗ್ರಾಮದಿಂದ ಗೆಳೆಯರೊಬ್ಬರು ಆನೆಗಳು ಗ್ರಾಮಕ್ಕೆ ದಾಳಿಯಿಟ್ಟು ಹಾವಳಿ ನಡೆಸುತ್ತಿರುವ ಬಗ್ಗೆ ವಿಷಯ ತಿಳಿಸಿದ್ದರು. ಡೆಸ್ಕ್ ಗೆ ಪೋನ್ ಮಾಡಿ ಮಾಮೂಲಿ ಪ್ಲಾಷ್ ನ್ಯೂಸ್ ಕೊಟ್ಟ ನಾನು ಮತ್ತೆ ನಿದ್ರೆಗೆ ಜಾರಿದ್ದೆ. ಅದ್ಯಾರೋ ಪುಣ್ಯಾತ್ಮ ಪದೇ ಪದೇ ಫೋನ್ ಮಾಡಿ ''ಸಾರ್, ಆನೆಗಳು ಗ್ರಾಮದ ಒಳಗೇ ಬಂದಿವೆ ಸಾರ್..., ದಯವಿಟ್ಟು ಬನ್ನಿ ಸರ್, ನಾವು ಬಡವ್ರು ಈ ಸರ್ಕಾರ ನಮ್ ಕಷ್ಟಕ್ಕೆ ಆಗಲ್ಲ ಸಾರ್ ಅಂತಾ ಗೋಗರೆಯೋಕ್ಕೆ ಶುರು ಮಾಡಿದ್ದ.  ಆದ್ರೆ ಸುಳುಗೋಡು ಗ್ರಾಮಕ್ಕೆ ಬೆಳ್ಳಂಬೆಳಗ್ಗಿನ ಛಳಿಯಲ್ಲಿ ಆನೆಗಳಿಗೆ ಇದಿರಾಗಿ ಹೋಗಲು ಮನಸ್ಸು ಒಪ್ಪದ ಕಾರಣ ಏನೇನೋ ಸಬೂಬು ಹೇಳಿ ಜಾರಿಕೊಂಡೆ. ಆದರೆ ಅಂದು ನಮ್ಮ ಅದೃಷ್ಟ ನೆಟ್ಟಗಿರಲ್ಲಿಲ್ಲ. ಆ ಗ್ರಾಮದಲ್ಲಿ ಕೇವಲ ಪುಂಡಾಟಿಕೆಯಲ್ಲಿ ತೊಡಗಿದ್ದ ಆನೆಗಳು ಸಂಜೆಯವೇಳೆಗೆ ಅಮಾಯಕ ರೈತನೊಬ್ಬರನ್ನು ತುಳಿದು ಕೊಂದು ಹಾಕಿದ್ದವು. ಅನಿವಾರ್ಯವಾಗಿ ಹೊರಡುವ ಸ್ಥಿತಿ ನಿರ್ಮಾಣವಾಯಿತು. ಮಾಮೂಲಿನಂತೆ ಗೆಳೆಯ ಸತೀಶ್ ಪಟೇಲ್ ನ ಸುಮೋ ಏರಿದ ನಾವು ಸುಳುಗೋಡಿನತ್ತ ಪ್ರಯಾಣ ಬೆಳೆಸಿದೆವು.  ಸುಪ್ತ ಮನಸ್ಸಿನ ಮೂಲೆಯಲ್ಲೊಂದು ರೆಡ್ ಲೈಟ್ ಆನ್ ಆಗಿ ಆಗಲೇ ಸೈರನ್ ಮೊಳಗತೊಡಗಿತ್ತು. ಮುಂದೇನೋ ಕಾದಿದೆ ಅನ್ನೋ ಆತಂಕ ಮನಸ್ಸಿನಲ್ಲಿ ಮನೆ ಮಾಡಿತ್ತು. ಹೇಗಾದರೂ ಆಗಲಿ ಸ್ವಲ್ಪ ಅಲರ್ಟ್ ಆಗಿರ್ರಪ್ಪಾ ಅಂತಾ ಕ್ಯಾಮೆರಾಮೆನ್ ಗಳಿಗೆ ಎಚ್ಚರಿಕೆ ನೀಡಿದ್ದೆ. ಸುಳುಗೋಡು ಗ್ರಾಮದ ಹತ್ತಿರ ಬಂದಾಗ ಅಲ್ಲಿದ್ದ ಜನಸಂಖ್ಯೆ ಹಾಗು ತರಾತುರಿ ನೋಡಿ ಭಯ ಮತ್ತಷ್ಟು ಹೆಚ್ಚಾಯಿತು. ನಾವಿದ್ದ ಕೆಲವೇ ಮೀಟರ್ ಅಂತರದಲ್ಲಿ ನಾಲ್ಕು ಆನೆಗಳು ಮರಿಯಾನೆಯ ಜೊತೆಗೆ ನಿಂತಿದ್ದವು. ರೇಂಜರ್ ಮಂದಣ್ಣ ಹಾಗು ಅವರ ಸಿಬ್ಬಂದಿ ಆನೆಗಳನ್ನು ಓಡಿಸಲು ಪ್ರಯತ್ನ ಮಾಡುತ್ತಿದ್ದರು. ಅರಣ್ಯ ಇಲಾಖೆಯ ಜೀಪ್ ನಲ್ಲಿ ಮೃತ ರೈತನ ಶವವಿದ್ದ ಕಾರಣ ಗಾಡಿಯಿಂದ ಇಳಿದ ನಮ್ಮ ಕ್ಯಾಮೆರಾಮೆನ್ ಗಳು ಆ ಗುಂಪಿನತ್ತ ಓಡತೊಡಗಿದರು. ಅಲ್ಲಿದ್ದವವರು ಆನೆ...ಆನೆ...ಆನೆ ಇದೆ ಅಂತಾ ಕೂಗುತ್ತಲೇ ಇದ್ದರೂ ಲೆಕ್ಕಿಸದೇ ಶವವಿದ್ದ ಜೀಪ್ ಬಳಿ ತೆರಳಿದ ಕ್ಯಾಮೆರಾಮೆನ್ ಗಳು ಇನ್ನೇನು ಕ್ಯಾಮೆರಾ ಆನ್  ಮಾಡಬೇಕು ಅಲ್ಲಿದ್ದವರ ಪೈಕಿ ತೀರಾ ಪೊರ್ಕಿಯ ರೀತಿ ಇದ್ದ ಒಬ್ಬ ಇವರೆಲ್ಲರಿಗೂ ಅಡ್ಡಿ ಮಾಡಲಾರಂಬಿಸಿದ. '' ಕರೆದ ತಕ್ಷಣ ಬಾರದ ನೀವು ಈಗ ಸತ್ತಾಗ ಬಂದಿದ್ದೀರಾ....? ಇವರ ಸಾವಿಗೆ ನೀವೇ ಕಾರಣ, ಫೋಟೋ ಅಥ್ವಾ ವಿಡಿಯೋ ತೆಗೆದ್ರೆ ಕ್ಯಾಮೆರಾ ಪುಡಿ ಮಾಡ್ತೀನಿ ಎಂದು ಎಗರಾಡಲಾರಂಬಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಎಗರಾಡುತ್ತಿದ್ದ ಇವನನ್ನು ಸಮಾಧಾನ ಪಡಿಸಿ  ನಾನು ನಿಂತಿದ್ದ ಸ್ಥಳಕ್ಕೆ ಕರೆದುಕೊಂಡು ಬಂದವನೇ " ನಿಕ್ಕು ತರೆ ಸಮಾ ಇಜ್ಜಾ...? ಮುಲ್ಪ ದಾಯೆ ಬೊಬ್ಬೆ ಪಾಡುವಾ.., ಅಕ್ಲೇನ್ ಮಾತೆರೆನ್ಲಾ ಉಪಾಯಡ್ ಊರುದ ಉಲಯ್ ಲೆತೋ ಪೋಯಿ, ಬುಕ್ಕಾ ಏತ್ ಬೋಡ್ ಆತ್ ಬೊಟ್ಟುಗಾ..'' ಅನ್ನೋದೆ. ( ನಿನಗೆ ತಲೆ ಸರಿ ಇಲ್ವಾ...? ಯಾಕೆ ಅಲ್ಲಿ ಕಿರುಚಾಡುತ್ತೀ.., ಅವರೆಲ್ಲರನ್ನಾ ಉಪಾಯವಾಗಿ ಊರಿನ ಒಳಗೆ ಕರೆದುಕೊಂಡು ಹೋಗುವ. ನಂತರ ಎಷ್ಟು ಬೇಕು ಅಷ್ಟು ಒದೆ ಬಿಡುವ). ಸಧ್ಯ ತುಳು ಚೆನ್ನಾಗಿ ಗೊತ್ತಿದ್ದ ನನಗೆ ಇವರ ಸಂಭಾಷಣೆ ಅರ್ಥವಾದರೂ ಏನೂ ತಿಳಿಯವದವನಂತೆ ನಿಂತಿದ್ದೆ. ಅವರಿಬ್ಬರೂ '' ಸಾರ್ ಇಲ್ಲಿ ಪೋಟೋ ತೆಗೆಯುವುದಕ್ಕಿಂತ ಊರೊಳಗೆ ಅವರ ಮನೆಯ ಎದುರಿಗೇ ತೆಗೆಯೋಣ ಬನ್ನಿ ಅಂತಾ ಮೊದಲು ನನಗೇ ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಮುನ್ನುಡಿ ಹಾಡತೊಡಗಿದ್ದರು. ಅಷ್ಟರಲ್ಲಿ ಅಲ್ಲಿ ಊರಾಚೆ ಇದ್ದ ಆನೆಗಳು ಇದ್ದಕ್ಕಿದ್ದಂತೆ ಎಸ್ಟೇಟ್ ಬಳಿ ಧಾವಿಸತೊಡಗಿದವು. ನಿಂತಿದ್ದ ಜನರೆಲ್ಲಾ ಚೆಲ್ಲಾಪಿಲ್ಲಿಯಾದರು. ಸತ್ಯ ಹೇಳುತ್ತೇನೆ,  ಪ್ರಾಣಭೀತಿ ಅನ್ನೋ ಪದದ ನಿಜವಾದ ಅರ್ಥ ನನಗಾದದ್ದೇ ಅಲ್ಲಿ. ನನ್ನಿಂದ ಕೇವಲ ಐವತ್ತು ಹೆಜ್ಜೆ ಅಂತರದಲ್ಲಿ ಆನೆಗಳು.........., ನನಗಾಗ ಗುಂಡುಗುಂಡಾಗಿದ್ದ ನನ್ನ ದೇಹದ ಬಗ್ಗೆ ನೆನಪಾಗಲ್ಲಿಲ್ಲ. ಓಡಲೇಬೇಕೆನ್ನೋ ಅನಿವಾರ್ಯತೆಗೆ ಸಿಲುಕಿ ಓಡತೊಡಗಿದೆ. ಪಕ್ಕದಲ್ಲಿ ಜೋರಾಗಿ ಯಾರೋ ಕಿರುಚುತ್ತಿದ್ದರು. ಕರೆಂಟ್ ಇದೆ..ಜಾಗೃತೆ ಅನ್ನುತ್ತಲೇ ಇದ್ದರು. ಊಹುಂ, ನೋಡಲ್ಲಿಲ್ಲ. ಎದುರಿಗಿದ್ದ ತೋಟದ ಬೇಲಿಯ ತಂತಿಯನ್ನು ಅದುಮಿದವನೇ ಚಂಗನೇ ತೋಟದೊಳಕ್ಕೆ ಜಿಗಿದವ ಆಯತಪ್ಪಿ ನೆಲಕ್ಕೆ ಬಿದ್ದೆ. ಮತ್ತೆ ಸಾವರಿಸಿಕೊಂಡು ಎಸ್ಟೇಟ್ ನೊಳಕ್ಕೆ ಓಡತೊಡಗಿದೆ. ಅಷ್ಟರಲ್ಲಿ  ನನ್ನ ಹಿಂದೆ ಬರುತ್ತಿದ್ದ ಗ್ರಾಮಸ್ಥನೊಬ್ಬ ನಿಲ್ಲಿ, ನಿಲ್ಲಿ ಸಾರ್ ಈ ಎಸ್ಟೇಟ್ ಒಳಕ್ಕೆ ಆನೆ ಬರೋದಿಲ್ಲ. ಓಡಿ ಸುಸ್ತು ಮಾಡಿಕೊಳ್ಳಬೇಡಿ ಎಂದು ತಡೆದ. ಸ್ವಲ್ಪ ಸುಧಾರಿಸಿಕೊಂಡು ಓಡಿ ಬಂದ ದಿಕ್ಕಿನತ್ತ ಕಣ್ಣು ಹಾಯಿಸಿದೆ. ಆನೆಗಳು ದೂರದಲ್ಲಿದ್ದವು. ನನ್ನನ್ನು ನಿಲ್ಲಿ ಎಂದು ಹೇಳಿದ್ದ ಗ್ರಾಮಸ್ಥ ಮೆಲ್ಲನೆ ನನ್ನ ಬಳಿ ಬಂದು '' ಸಾರ್ ಬೇಲಿ ದಾಟುವಾಗ ಎರಡನೇ ವೈರ್ ಅದುಮಿ ತಾನೆ ನೀವು ಒಳಕ್ಕೆ ಬಂದಿದ್ದು...? ಎಂದ ಹೌದೂ.., ಯಾಕೆ ಎಂದೆ. ಸಾರ್ ಅದ್ರಲ್ಲಿ ಸೋಲಾರ್ ಕರೆಂಟ್ ಇತ್ತು, ನಿಮ್ಗೆ ಏನೂ ಆಗ್ಲಿಲ್ವಾ..? ಅಂದ. ನನಗೆ ಆಗ ಶಾಕ್ ಹೊಡೀತು. ಯಾಕಂದ್ರೆ ಸೋಲಾರ್ ಫೆನ್ಸ್  ದಾಟುವಾಗ ವೈರ್ ಹಿಡಿದ ತಕ್ಷಣ ಮೈಯೆಲ್ಲಾ ಜುಮ್ ಅನ್ನೋ ಅನುಭವವಾಗಿತ್ತು. ಕಣ್ಣ ತುಂಬಾ ನಕ್ಷತ್ರಗಳು ಮಿಂಚು ಮರೆಯಾಗಿದ್ದವು. ಬಹುಷಃ ದಾಟುವಾಗ ಅಲ್ಲಿದ್ದ  ಒಣಗಿದ ಮರದ ಮೇಲೆ ಕಾಲಿಟ್ಟ ಕಾರಣಕ್ಕೋ ಏನೋ ಶಾಕ್ ನ ತೀವ್ರ ಅನುಭವವಾಗಿರಲ್ಲಿಲ್ಲ. ಸಧ್ಯ ಏನೂ ಆಗಲ್ಲಿಲ್ಲ ಎಂಬ ಸಮಾಧಾನದೊಂದಿಗೆ ಎಸ್ಟೇಟ್ ನ ಗೇಟ್ ನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನಗಾಗಿ ಕಾಯುತ್ತಿದ್ದ ನನ್ನ ಗೆಳೆಯರ ಜೊತೆ ಸುಮೋ ಏರಿ ಮತ್ತೆ  ಗೂಡು ಸೇರಿದೆ. ಅಂದೇ ಕೊನೆ ಅವತ್ತಿಂದ ಇವತ್ತನಿನವರೆಗೆ ಮತ್ತೆ ಸುಳುಗೋಡಿನ ಕಡೆ ನಾನು ಸುಳಿಯಲೇ ಇಲ್ಲ.