Monday, August 9, 2010

ಥತ್ತೇರೀ......,!

ಒಮ್ಮೊಮ್ಮೆ ನಾವು ನಮಗೆ ತಿಳಿಯದಂತೆ ನಮ್ಮಿಂದಲೇ ಅವಮಾನಿರಾಗಿ ಬಿಡುತ್ತೇವೆ....., ಮೊನ್ನೆ ಇಂತಹುದ್ದೊಂದು ಘಟನೆ ಜರುಗಿತು. ಒಂದಷ್ಟು ಅಪ್ ಗ್ರೇಡ್ ಆಗೋಣ ಅಂತಾ ನನ್ನ ಇಂಡಿಕಾ ಕಾರನ್ನು ಮಾರಿ ಸೆಕೆಂಡ್ ಹ್ಯಾಂಡ್ ಸ್ಯಾಂಟ್ರೋ ಕಾರನ್ನು ಕೊಂಡುಕೊಂಡೆ. ಇನ್ನು ಬೇರೆ ಕಾರು ಅಂದಾಕ್ಷಣ ಮನೆಮಂದಿಗೆಲ್ಲಾ ಒಂದು ರೌಂಡ್ ಹೊಡಿಸಲೇಬೇಕಲ್ವೇ...?. ನಿತ್ಯ ವಟಗುಟ್ಟುವ ಪತ್ನಿಯ ಮಂಗಳಾರತಿಯನ್ನೇ ಬೆಳಗಿನ ಶುಭಶಕುನ ಎಂದುಕೊಂಡು ನನ್ನ ಮಗಳು ಅಭಿಜ್ಞ ಹಾಗು ಒಂದಿಬ್ಬರು ಸ್ನೇಹಿತರ ಜೊತೆ ಸಕಲೇಶಪುರಕ್ಕೊಂದು ಜಾಲಿ ಟೂರ್ ಹೊರಟೆ. ಹೊರಡುವಾಗಲೇ ನನ್ನಾಕೆ " ನಿಮ್ದೊಂದು...., ಯಾವಾಗ್ ನೋಡಿದ್ರೂ ಸಕ್ಲೇಶ್ ಪುರ. ಅದು ಬಿಟ್ರೆ ಬೇಲೂರು ಹಳೇಬೀಡು.., " ಅಂತಾ ದೀಪಕರಾಗ ಹಾಡೋಕೆ ಶುರು ಮಾಡಿದ್ಲು. ಏನ್ಮಾಡ್ಲಿ ಈಗಿರೋ ಪೆಟ್ರೋಲ್ ರೇಟ್ ನಲ್ಲಿ ಅದೂ ಒಂದೇ ದಿನದಲ್ಲಿ ಊಟಿ ಕೊಡೈಕೆನಲ್ ಗೆ ಹೋಗೋಕ್ಕಾಗುತ್ತಾ...? ಅವಳ ಗುಡುಗುಡು ವದನವನ್ನೇ ಮಂಗಳವಾಧ್ಯ ಅಂತಾ ಸಮಾಧಾನ ಮಾಡಿಕೊಂಡೆ. ಅಂತೂ ಅದೊಂದು ದಿನ ನನ್ನ ಹುಟ್ಟೂರು.., ನ್ನನ ಭಾವನೆಗಳಿಗೆ.., ನನ್ನ ವ್ಯಕ್ತಿತ್ವಕ್ಕೆ ರೂಪ ಕೊಟ್ಟ ನನ್ನೂರು...., ನನ್ನ ಪ್ರೀತಿಯ ಸಕಲೇಶಪುರದಲ್ಲಿ  ತನ್ಮಯನಾಗಿ ಕಾಲ ಕಳೆದೆ. ನನ್ನ ಗೆಳೆಯರಾದ ಅಶ್ವಥ್, ರೋಶನ್, ರವಿ ಇತ್ಯಾದಿಗಳೆಲ್ಲಾ ಅವತ್ತು ನನ್ನೊಂದಿಗೆ ಬಾಲ್ಯಕ್ಕೆ ಜಾರಿದ್ದರು. ಆ ಅನುಭವ ವರ್ಣಿಸೋಕೆ ಹೋದ್ರೆ ಬಹಳಷ್ಟು ಸಮಯ ಬೇಕು ಇರ್ಲಿ ಬಿಡಿ. ಹಾಗೂ ಹೀಗೂ ಮಡದಿಯ ಕಿರಿಕಿರಿಯ ನಡುವೆ ಒಂದು ಸುಂದರ ದಿನವನ್ನು ನನ್ನದಾಗಿಸಿಕೊಂಡ ನಾನು ಹಾಸನಕ್ಕೆ ಮರಳುತ್ತಿದ್ದೆ. ಇನ್ನೇನು ಸಿಟಿ ಎಂಟರ್ ಆಗಬೇಕು, ಗಾಂಧಿ ಬಜಾರ್ ಸರ್ಕಲ್ ಬಳಿ ಹುಡುಕಿಕೊಂಡು ಬಂದಂತೆ ಕುಡುಕನೋರ್ವ ನನ್ನ ಗಾಡಿಗೆ ಇದ್ದಕ್ಕಿದ್ದಂತೆ ಅಡ್ಡ ಬಂದು ಬಿಡೋದೇ.....?. ಒಂದೊಂದು ಇಂಚು...,! ತಕ್ಷಣ ಗಾಡಿ ನಿಯಂತ್ರಿಸದಿದ್ದರೆ ಅವನು ಅಲ್ಲಿಂದ ಕನಿಷ್ಟ ಹತ್ತಾರು ಅಡಿ ದೂರಕ್ಕೆ ಎಗರಿ ಬೀಳುತ್ತಿದ್ದ. ಕಾರಿನಲ್ಲಿ ಕುಳಿತಿದ್ದವರೆಲ್ಲರೂ ಭಯದಿಂದ ಥರಗುಟ್ಟಿದ್ದರು. ಕೋಪದಿಂದ ನಾನು ಅವನಿಗೆ ಏಯ್ ಚಪ್ಪರ್ ಕಾರಿಗೆ ಯಾಕೋ ಅಡ್ಡ ಬರ್ತೀಯಾ....? ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಬರ್ತಾ ಇದೆ.., ಅದಕ್ಕೆ ಅಡ್ಡ ಹೋಗು., ಭೂಮಿ ಭಾರನಾದ್ರೂ ಕಮ್ಮಿ ಆಗುತ್ತೆ ಅಂದೆ. ಅದ್ಯಾಕೋ ಏನೋ ನಾ ಬೈದಿದನ್ನು ಕೇಳಿಸಿಕೊಂಡು ಸುಮ್ಮನೇ ತೂರಾಡಿಕೊಂಡು ಹೋಗುತ್ತಿದ್ದ ಅವ ಮತ್ತೆ ನನ್ನ ಕಾರಿನತ್ತ ವಾಪಾಸ್ ಬಂದು ಬಿಡೋದೆ....? ಪಿತ್ತ ನೆತ್ತಿಗೇರಿದ ನಾನು ಕಾರಿನಿಂದ ಕೆಳಗಿಳಿಯುವ ಪ್ರಯತ್ನದಲ್ಲಿದ್ದೆ. ಆದರೆ ಆತ ತನ್ನ ತುಟಿಗಳ ಮೇಲೆ ಬೆರಳಿಟ್ಟು ಅದೇ ಜಾಕಿ ಸ್ಟೈಲ್ ನಲ್ಲಿ ನನ್ನ ಬಳಿ ಬಂದವನೇ  ತೊದಲುತ್ತಾ '' ಡೋಂಟ್ ವರಿ ಬ್ರದರ್, ಆ ಬಸ್ಸ್ ಡ್ರೈವರ್ ನನ್ ನೆಂಟ್ ನೇಯಾ...., ನೀನೀಗ ರೈಟ್ಹೇಳು..., ಇಲ್ದಿದ್ರೆ ಅವ್ನು  ಈ ಲ್ಯಾಂಡ್ ಮೇಲೆ ನಿನ್ದು ಮತ್ತೆ ನನ್ದು ಇಬ್ರುದೂ ತೂಕ ಕಮ್ಮಿ ಮಾಡ್ಬುತ್ತಾನೆ ಅಂದ. ಥತ್ತೇರಿ ಕಾರ್ ನಲ್ಲಿದ್ದ ನನ್ನ ಮನದನ್ನೆ ಆಕೆಯ ಸ್ನೇಹಿತರು ಎಲ್ಲರಿಗೂ ನಗು. ದುಸ್ರಾ ಮಾತಾಡದೇ ನಾನು ಮನೆಯ ಹಾದಿಯತ್ತ ಚಿತ್ತ ನೆಟ್ಟೆ. ಆಗ ನನಗೆ ನೆನಪಾಗಿದ್ದು ಕೊಚ್ಚೆಯ ಮೇಲೆ ಕಲ್ಲು ಹೊಡಬೇಡ ಅನ್ನೋ ಅನುಭವೀಗಳ ಮಾತು.