Wednesday, November 10, 2010

ಬ್ರೇಕಿಂಗ್ ನ್ಯೂಸ್......,

ಹಲೋ...., ಇಸ್ ಇಟ್ ಟಿವಿ 9....?,
ಹೌದು ಹೇಳಿ.....,
ಸರ್, ಇಲ್ಲೊಂದು ಮರ್ಡರ್ ಆಗಿದೆ..., ಯಾರೋ ಇಲ್ಲಿ ಒಬ್ಬನ್ನ ಶೂಟೌಟ್ ಮಾಡಿ ಬಿಸಾಕಿ ಹೋಗಿದ್ದಾರೆ.
ಹಾಂ...! ಹೌದಾ....? ಎಲ್ಲಿ.....? ಯಾವೂರಲ್ಲಿ.....!!!??
ಸರ್, ಇಲ್ಲೇ ಚಿಕ್ಕ್ ಬಾಣಾವರ ಹತ್ರ, ಅಲ್ಲಿ ಪಂಚಾಯ್ತಿ ಆಫೀಸ್ ಇದೆ ಅಲ್ವಾ.., ಅಲ್ಲಿ........,
ಬೆಳಗ್ಗಿನ ಆ ಚುಮುಚುಮು ಛಳಿಗೆ ಇಡೀ ಹಾಸನವನ್ನೇ ಮಂಜಿನ ಮೋಡ ಕವುಕಿಕೊಂಡು ಬಿಟ್ಟಿತ್ತು. ಆ ಛಳಿಗೆ ಸವಿಗನಸು ಕಾಣುವ ಸಮಯದಲ್ಲಿ..,  ಆ ಸುಂದರ ಮುಂಜಾವಲ್ಲಿ..., ಅದ್ಯಾರೋ ಕೋಗಿಲೆ ಕಂಠದ ಹುಡುಗಿಯ ಧನಿ ನನ್ನ ಜವಾಬ್ದಾರಿಯನ್ನು ಬಡಿದೆಬ್ಬಿಸಿತ್ತು. ಆಕೆ ಪೋನ್ ಕಟ್ ಮಾಡಿದ್ದಳು.
ಸರಿ, ಈಗ ಶುರುವಾಯ್ತು ನನ್ನ ಡ್ಯೂಟಿ. ದಡಬಡನೆ ಎದ್ದವನೇ ಟಿವಿ ಆನ್ ಮಾಡಿ ಬೇರೆ ಎಲ್ಲಾ ಕನ್ನಡ ಚಾನಲ್ ಗಳನ್ನು ತಡಕಾಡಿದೆ. ಸಧ್ಯ ಯಾವುದರಲ್ಲೂ ಬ್ರೇಕಿಂಗ್ ನ್ಯೂಸ್ ಬರ್ತಾ ಇಲ್ಲ. ತಕ್ಷಣ ಡೆಸ್ಕ್ ಗೆ ಫೋನ್ ಮಾಡಿ ವಿಷಯ ಹೇಳುವ ತವಕ. ಆದ್ರೂ ಡೀಟೈಲ್ಸ್ ಮಿಸ್ ಆಗ್ಬಾರ್ದು ಅಲ್ವಾ...? ಭಾಣಾವರ ಸ್ಟೆಷನ್ ಅರಸೀಕೆರೆ ತಾಲೂಕಿಗೆ ಸೇರುತ್ತೆ. ಅಲ್ಲಿನ ಡಿ.ವೈ.ಎಸ್.ಪಿ ರಶ್ಮಿ ಮೈಸೂರಿನಲ್ಲಿ ಟ್ರೈನಿಂಗ್ ಅಂತಾ ಹೋಗಿದಾರೆ. ಆದ್ರೂ ಇರ್ಲಿ, ಇದು ಮೇಜರ್ ಇಶ್ಯೂ, ಅವರನ್ನೇ ಕೇಳೋಣ ಅಂತಾ ಫೋನ್ ಮಾಡಿದೆ. ಪಾಪ, ರಶ್ಮಿ ಮೇಡಂ ತಕ್ಷಣ ಪೋನ್ ರಿಸಿವ್ ಮಾಡಿದ್ರು, ಆದ್ರೆ ಮರ್ಡರ್ ಬಗ್ಗೆ ನನಗೇನೂ ಗೊತ್ತಿಲ್ಲ, ಬಾಣಾವರ ಪಿ.ಎಸ್.ಐ ಗೆ ಮೆಸೇಜ್ ಕೊಡ್ತೀನಿ,  ಥ್ಯಾಂಕ್ಯೂ ಜೋಸೆಫ್ ಅಂದವ್ರೇ ಪೋನ್ ಕಟ್ ಮಾಡಿದ್ರು. ಇನ್ನು ಭಾಣಾವರ ಸಬ್ ಇನ್ಸ್ ಪೆಕ್ಟರ್ ನಂಬರ್ ಇರಲ್ಲಿಲ್ಲ. ಅಲ್ಲಿ ನನ್ನ ಹೈಸ್ಕೂಲ್ ಗೆಳೆಯ ಹೀರಾಸಿಂಗ್ ಈಗ ಪೊಲೀಸ್ ಪೇದೆ ಆಗಿದ್ದಾನೆ. ತಕ್ಷಣ ಅವನಿಗೆ ಪೋನ್ ಮಾಡಿ ವಿಷಯ ತಿಳಿಸಿ ಬಾಣಾವರ ಸಬ್ ಇನ್ಸ್ ಪೆಕ್ಡರ್ ನಂಬರ್ ಬರೆದುಕೊಂಡೆ. ಬ್ರಷ್ ಗೆ ಪೇಸ್ಟ್ ಹಾಕಿಕೊಂಡು ಪರಪರ ಹಲ್ಲುಜ್ಜುತ್ತಲೇ ರಿಂಗ್ ಮಾಡಿದೆ. ಪುಣ್ಯಾತ್ಮ ಸರಿಯಾಗಿ ಹನ್ನೊಂದನೇ ರಿಂಗ್ ಗೆ ಪೋನ್ ರಿಸೀವ್ ಮಾಡಿ ತುಸು ಕೋಪದಿಂದಲೇ  ಹಲ್ಲೋ...., ಅಂದ್ರು.
ಹಲೋ.....ಹಲೋ...ಸಾರ್, ಇದು ಬಾಣಾವಾರ ಸಬ್ ಇನ್ಸ್ ಪೆಕ್ಟರ್ರಾ....?
ಹೂಂ ಹೌದ್ರೀ..., ನೀವ್ಯಾರ್ ಮಾತಾಡೋದು.
ನಾನು ಟಿವಿ9 ರಿಪೋರ್ಟರ್ ಜೋಸೆಪ್ ಅಂತಾ ಸರ್....,
ಹೂಂ..., ಹೇಳ್ರೀ ಜೋಸೆಪ್ ಸಾಹೆಬ್ರೇ...., ಏನ್ ಇಷ್ಟೊತ್ತಲ್ಲಿ....?
ಸಾಹೆಬ್ರೇ ಅದೇನೋ ಶೂಟೌಟ್ ಆಗಿದ್ಯಲ್ಲಾ..., ಅದ್ರುದು ಸ್ವಲ್ಪ ಡೀಟೈಲ್ಸ್ ಬೇಕಿತ್ತು....,
 ಆ ಹೊತ್ತಲ್ಲಿ ಸಿಡಿಲು ಬಡಿದಂತೆ ಗಾಬರಿಗೊಂಡ ಸಬ್ ಇನ್ಸ್ ಪೆಕ್ಟರ್, ಶೂಟೌಟಾ...? ಎಲ್ಲಿ..ಎಲ್ಲಿ...ಎಲ್ಲಿ....??!! ಅನ್ನೋದೆ...?
ಈ ಪೊಲೀಸರೇ ಹಾಗೆ. ಎಲ್ಲದ್ರಲ್ಲೂ ಲೇಟು, ಮೀಡಿಯಾಕ್ಕೆ ವಿಷಯ ಗೊತ್ತಾಗುತ್ತೆ ಇವ್ರಿಗೆ ಗೊತ್ತಿರೋಲ್ಲ ಅಂತಾ ಗೊಣಗಿಕೊಂಡು '' ಅದೇ ಆ ಚಿಕ್ಕ್ ಬಾಣಾವರ ಪಂಚಾಯ್ತಿ ಆಪೀಸ್ ಇದೆಯಲ್ವಾ..., ಅಲ್ಲಿ ಯಾರೋ ಕೂರ್ಗಿ ಉಮೇಶ ಅನ್ನೋವ್ನ ಶೂಟ್ ಮಾಡಿ ಎಸೆದು ಹೋಗಿದಾರಂತೆ. ಬಾಡಿ ಪಕ್ಕದಲ್ಲೇ ರಿವಾಲ್ವರ್ ಬಿದ್ದಿದೆಯಂತೆ ಸ್ವಲ್ಪ ಚೆಕ್ ಮಾಡಿ ಗುರುಗಳೆ..., ಹಂಗೇ ನಂಗೊಂದಿಷ್ಟು ಮಾಹಿತಿ ಕೊಡಿ ಎಂದೆ
ತುಂಬಾ ಥ್ಯಾಂಕ್ಸ್ ಜೋಸೆಪ್ ಸರ್, ಈಗ್ಲೇ ಹೊರಡ್ತೀನಿ ಎಂದು ಆತ ಕರ್ತವ್ಯಕ್ಕೆ ಅಣಿಯಾದ.
ಆ ಕ್ಷಣ ಐ ಆಮ್ ಗ್ರೆಟ್ ಅನ್ನಿಸಿಬಿಟ್ಟಿತ್ತು. ಹೇಗಾದ್ರೂ ಆಗ್ಲಿ ಆ ಹೆಂಗಸಿಗೆ ಮತ್ತೊಮ್ಮೆ ಪೋನ್ ಮಾಡಿ ಡೀಟೈಲ್ಸ್ ತಗೊಳೋಣ ಅಂತಾ ಪೋನಾಯಿಸಿದೆ. 
ಹಲೋ....,  ಹೇಳಿ ಸಾರ್, ಸ್ಪಾಟಿಗೆ ಬರ್ತಾ ಇದೀರಾ....?
ಹಾಂ, ಹಾಂ, ಬರ್ತೀನಿ ಮೇಡಂ, ಆದ್ರೆ ನನಗೊಂದಿಷ್ಟು ಮಾಹಿತಿ ಬೇಕಿತ್ತು....
ಕೇಳಿ ಸಾರ್.....,
ಅದೂ ಆತ ಯಾವ ಊರು ಮತ್ತೆ ಅವನ ಕಡೆವ್ರಿಗೆ ವಿಷಯ ಗೊತ್ತಾಗಿದ್ಯಾ....?
ಅವ್ನು ಇಲ್ಲೇ ಎಲ್ಲೋ ಪ್ಯಾಕ್ಟರಿ ಇಟ್ಕೊಂಡಿದಾನಂತೆ. ಮೂಲತಃ ಕೊಡಗಿನ ವಿರಾಜಪೇಟೆವ್ನು ಅಂತಾ ಪೊಲೀಸ್ರು ಹೇಳ್ತಾ ಇದ್ರು.
ಹಾಂ....., ಪೋಲಿಸ್ರಾ....? ಯಾವ್ ಪೊಲೀಸು....? ನಮ್ಗೇನು ಗೊತ್ತಿಲ್ಲಾ ಅಂತಿದ್ರಲ್ಲಾ....?
ಹೌದಾ ಸರ್, ಮತ್ತೇ ಪಿ.ಸಿ. ಸುಬ್ರಹ್ಮಣೀ ಔಟ್ ಪೋಸ್ಟ್ ನಿಂದ ಆಗ್ಲೇ ಬಂದಿದಾನಲ್ಲಾ.....?
ಔಟ್ ಪೋಸ್ಟಾ....! ಅಲ್ಯಾವುದಿದೆ ಔಟ್ ಪೋಸ್ಟು....?
ಸರ್, ಹೆಸರಘಟ್ಟ ಸ್ಟೇಷನ್ ಗೆ ಸಂಬಂದಪಡೋ ಔಟ್ ಪೋಸ್ಟ್ ಸರ್..................,,,,,
ನನಗೆ ಆ ಛಳಿಯಲ್ಲೂ ತಣ್ಣನೇ ಬೆವರುತ್ತಿರುವ ಅನುಭವವಾಯ್ತು. ಯಾಕೆಂದ್ರೆ  ಈ ಮಹಾತಾಯಿ ಹೇಳ್ತಾ ಇರೋದು ಬೆಂಗಳೂರಿನ ಹೆಸರಘಟ್ಟ ಠಾಣಾ ವ್ಯಾಪ್ತಿಗೆ ಸಂಬಂದಪಟ್ಟ ಕ್ರೈಂ ರಿಪೋರ್ಟ್. ನಾನು ಹಾಸನ ಜಿಲ್ಲಾ ವರದಿಗಾರ. ನಮ್ಮ ಜಿಲ್ಲೆಯ ಅರಸೀಕೆರೆಯಲ್ಲಿ ಭಾಣಾವರ ಹಾಗು ಚಿಕ್ಕಭಾಣಾವರ ಅನ್ನೋ ಊರುಗಳಿವೆ. ಮರ್ಡರ್ ಬಗ್ಗೆ ಬೆಂಗಳೂರಿನ ನಮ್ಮ ಕೇಂದ್ರ ಕಛೇರಿಗೆ ಫೋನ್ ಮಾಡಿದ್ರೆ ಅಲ್ಲಿರೋ ಯಾರೋ ಪುಣ್ಯಪುರುಷರು ನನ್ನ ನಂಬರ್ ಕೊಟ್ಟು ನನ್ನ ಸವಿಯಾದ ಬೆಳಗನ್ನು..............,? ಛೆ, ಹೋಗ್ಲಿ ಬಿಡ್ರಿ, ನಾನು ಕರ್ತವ್ಯ ಮರೆಯಲ್ಲಿಲ್ಲ. ಕೊಲೆಯ ಜಾಡು ಹುಡುಕಿ ಹೊರಟಿದ್ದ ನಮ್ಮ ಭಾಣಾವರ ಸಬ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಸಾರಿ ಸರ್, ಅದು ರಾಂಗ್ ಮೆಸೇಜು ಎಂದೆ. ಪಾಪ ನಡುವಯಸ್ಸಿನ  ಆ ಮನುಷ್ಯ ಉತ್ತರಿಸಲಾಗದೇ ಪೇಚಾಡಿಕೊಂಡು ಬಿಟ್ರು
ಒಂದಂತೂ ನೆಮ್ಮದಿ...., ಬ್ರೇಕಿಂಗ್ ನ್ಯೂಸ್ ಕೊಟ್ಟಿರಲ್ಲಿಲ್ಲ.