Saturday, November 5, 2011

ಹುಚ್ಚು ನಾಯಿ............,!!??

ಈ ಮೊಬೈಲ್ ಅನ್ನೋದು ಇದ್ಯಲ್ಲಾ..., ಅದು ಎಷ್ಟು  ಆಪ್ತವೋ ಒಮ್ಮೊಮ್ಮೆ ಅಷ್ಟೇ ದುರಾತ್ಮ ಅಂತಾ ಅನ್ನಿಸೋಕೆ ಶುರವಾಗಿ ಬಿಡುತ್ತೆ. ಜುಳು ಜುಳು ಮಂಜುಳ ನೀನಾದದಿಂದ ಹಿಡಿದು ಕಿವಿಯ ತಮಟೆ ಒಡೆಯುವಂತಹ ಕರ್ಕಶವನ್ನೂ ಕೇಳಿಸಿ  ಕರ್ಣಾನಂದ ಅನುಭವಿಸುವಂತೆ ಮಾಡಿ ಬಿಡುತ್ತೆ. ಅದ್ರಲ್ಲಿ ನನ್ನ ಮೊಬೈಲ್ ಅಂತೂ ತುಂಬಾನೆ ಸ್ಪೆಷಲ್ ಬಿಡಿ. ಯಾರದ್ದೋ ಕರೆ ಹೊತ್ತಲ್ಲದ ಹೊತ್ತಲ್ಲಿ ನನಗೆ ಬಂದು ನನ್ನ ಹೆಂಡತಿ ಅದನ್ನು ಸ್ವೀಕರಿಸಿ ತಪ್ಪಾಗಿ ಅರ್ಥೈಸಿ ಅದೇ ರಾತ್ರಿ ಗಂಟು ಮೂಟೆ ಕಟ್ಟಿ ನನ್ನನ್ನು ಹೊರಕ್ಕೆ ದಬ್ಬುವಂತೆ ಮಾಡಿದ್ದ ಕುಖ್ಯಾತಿ ಅದ್ಕಕಿದೆ...............,  ಜೊತೆ ಜೊತೆಗೆ ಅದು ತಪ್ಪು ಅಂತ ಅರ್ಥ ಮಾಡಿಸಿ ಮತ್ತೆ ಮನೆ ಬಾಗಿಲು ತೆಗೆಸಿದ ಪ್ರೀತಿ ಕೂಡ ಅದರ ಮೇಲಿದೆ.........,
  ಆ ಕಥೆ ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೀನಿ. ಅದಕ್ಕೂ ಮುನ್ನ ಈ ಮೊಬೈಲ್ ನಿಂದ ಮುಜುಗರ ಅನುಭವಿಸಿದ ಪ್ರಸಂಗವೊಂದನ್ನ ನಿಮ್ಮ ಮುಂದೆ ಇಡುತ್ತೇನೆ.
   ಅವತ್ತು ಭಾನುವಾರ.  ನನ್ನ ಪಾಲಿಗೆ ಇಡೀ ವಾರದ ಜಂಜಾಟಗಳಿಗೆ ಬ್ರೇಕ್ ಹಾಕಿ ವೀಕೆಂಡ್  ಅನ್ನೋ ಮೋಜು ಅನುಭವಿಸುವ ದಿನ.  ಆದ್ರೆ ಅದು ಯಾವತ್ತೂ ಕಂಪ್ಲೀಟ್ ಆದ ಮೋಜು ಆಗಲ್ಲ.., ಯಾಕಂದ್ರೆ ನನ್ನ ಮಕ್ಕಳ ಜೊತೆ ನನ್ನ ಕೈ ಹಿಡಿದ ದೇವತಾಮಣಿ ಇರ್ತಾಳಲ್ಲ....., ಹಾಗಾಗಿ ಆಗಾಗ  ಆಚೀಚೆ ಅಥ್ವಾ ಮೇಲೆ ಕೆಳಗೆ ಕತ್ತನ್ನು ಆಡಿಸೋದು....ಕಿವಿ ಮುಚ್ಚಿಕೊಳ್ಳೋದು ಈ ರೀತಿಯ ಶಿಕ್ಷೆಗಳು ಇದ್ದೇ ಇರುತ್ವೆ.
     ಹೀಗೆ ಭಾನುವಾದ ಜಾಲಿ ಟ್ರಿಪ್ ಗೆ ರೆಡಿಯಾಗ್ತಾ ಇದ್ದ ನನಗೆ ಒಂದು ಪೋನ್ ಕರೆ ಬಂತು.  '' ಸಾರ್ ನಿಮಗೊಂದು ಎಕ್ಸ್ ಕ್ಲೂಸಿವ್ ನ್ಯೂಸ್ ಸಾರ್...'' ಇಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನ ಜೆ.ಸಿ.ಬಿ ಗಳಲ್ಲಿ ಮಾಡ್ತಾ ಇದಾರೆ. ಈ ಜಾಗದಲ್ಲಿ ಜಿಲ್ಲಾ ಪಂಚಾಯ್ತಿ ಮೆಂಬರ್ರು ಆ ಗೌಡ್ರು ಇದಾರೆ ಸಾ...., ನಾವೆಲ್ಲಾ ಊರೋವ್ರು ಒಗ್ಗಟ್ಟಾಗಿ ಅವ್ರುನ್ನ ತಡೀತೀವಿ ನೀವು ಬಂದ್ ಬಿಡಿ ಸಾ..., ಅಂದ
ಇದೊಳ್ಳೇ ಗ್ರಹಾಚಾರ ಬಂತಲ್ಲಪ್ಪಾ ಎಂದು ಗೊಣಗಿಕೊಂಡ ನಾನು   '' ಇವ್ರೇ..., ನಾನು ಈಗ ಹೊರಗಡೆ ಇದೀನಿ ಸ್ವಲ್ಪ ಲೇಟಾಗುತ್ತೆ. ಮದ್ಯಾಹ್ನದ ಮೇಲೆ ಬರ್ಲಾ ಎಂದೆ.    ಅದ್ಕಕೊಪ್ಪದ ಆತ '' ಯಾಕ್ಸಾ ಇಂಗಂತೀರಾ....? ಆಯ್ಕಿಲ್ಲಾ ಅಂದ್ರೆ ಯೋಳಿ ನಮ್ಗೆ ನಿಮ್ ಜೊತೆ ಇರೋವ್ರೆಲ್ಲಾ ಗೊತ್ತು.., ನಿಮ್ ಯೆಡ್ ಆಪೀಸ್ ಗೇ ಪೋನಾಕ್ತೀವಿ...., ಅಂತಾ ಧಮ್ಕಿ ಬೇರೆ ಹಾಕಲಾರಂಬಿಸಿದ.  ಆ ಮಾತಿಗೆ ನಾನು ಕ್ಯಾರೇ ಅನ್ನದ ಕಾರಣಕ್ಕೆ ಮೇಲಿಂದ ಮೇಲೆ ಹತ್ತಾರು ಬಾರಿ ರಿಂಗ್ ಮಾಡಿ ಹಿಂಸೆ ಕೊಡಲಾರಂಬಿಸಿದ. ಕಟ್ಟಕಡೆಗೆ ಈತನ ಕಾಟ ತಡೆಯಲಾರದ ನಾನು ಪಟೇಲನ ಸುಮೋ ಹತ್ತಿ ಅವ ಹೇಳಿದ ದಿಕ್ಕಿನತ್ತ ಪ್ರಯಾಣ ಬೆಳೆಸಿದೆ.
   ಆಗ ಸಮಯ ಬೆಳಗ್ಗಿನ ಹನ್ನೊಂದು ಘಂಟೆ. ಆ ಅಡ್ರೆಸ್ ನಲ್ಲಿ ಅವನಾಗಲೀ, ಜಿಲ್ಲಾ ಪಂಚಾಯತ್ ಮೆಂಬರ್ ಗೌಡನಾಗಲೀ ಅಥ್ವಾ ಜೆ.ಸಿ.ಬಿ.ಗಳಾಗಲೀ ಇರಲ್ಲಿಲ್ಲ. ಅಲ್ಲೊಂದು ಕೆರೆಯಂಗಳದಲ್ಲಿ ರಾಶೀ ರಾಶೀ ಮಣ್ಣು ಮಾತ್ರ ಕಣ್ಣಿಗೆ ರಾಚುವಂತಿತ್ತು. ಮದ್ಯಾಹ್ನ 2 ಘಂಟೆಯವರೆಗೆ ಕಾದೂ ಕಾದೂ ಸುಸ್ತಾದ ನಮಗೆ ಆತನ ಸುಳಿವೇ ಸಿಗಲ್ಲಿಲ್ಲ. ಈ ನಡುವೆ ಅವ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದ. ಕೋಪದಿಂದ ನಖಶಿಖಾಂತ ಉರಿದು ಹೋಗಿದ್ದ ನಾನು ಅವನ ನಂಬರನ್ನು ನನ್ನ ಮೊಬೈಲ್ ನಲ್ಲಿ ಹುಚ್ಚುನಾಯಿ ಅಂತಾ ಫೀಡ್ ಮಾಡಿಕೊಂಡೆ.
ಈ ಘಟನೆ ಕಳೆದು ಸುಮಾರು ಆರೇಳು ತಿಂಗಳಾಗಿತ್ತು. ಅದೊಂದು ದಿನ ಬೆಳಿಗ್ಗೆ  ಒಂಬತ್ತು ಘಂಟೆ ಸುಮಾರಿನಲ್ಲಿ ವ್ಯಕ್ತಿಯೊಬ್ಬರು ನಮ್ಮ ಕಛೇರಿಗೆ ಬಂದಿದ್ದರು. ಎತ್ತರದ ನಿಲುವು..., ವೈಟ್ ಆಂಡ್ ವೈಟ್ ಡ್ರೆಸ್..., ಕೈಯ್ಲಲಿ ಉಂಗುರ ಕೊರಳಲ್ಲಿ ಸರ...., ಹಣೆಯಲ್ಲಿ ಕುಂಕುಮ...., ಒಂದೇ ಮಾತಲ್ಲಿ ಹೇಳೋದಾದ್ರೆ ಆತನೊಬ್ಬ ು ಉದಯೋನ್ಮುಖ ಯುವ ನಾಯಕ.......................,
ಸೂಜಿಗಲ್ಲಿನಂತೆ ಗಮನ ಸೆಳೆದ ಆತ ಅತ್ಯಂತ ವಿನಮ್ರನಾಗಿ ನಮಸ್ಕಾರ ಸಾರ್ ಅಂದ. ಕಪ್ಪು ಮೊಗದಲ್ಲಿ ಬೆಳ್ಳ ಬೆಳ್ಳನೆ ದಂತ ಪಂಕ್ತಿಗಳು......,  ನಾನು ಕೂಡ ಅಷ್ಟೇ ವಿನಯದಿಂದ ನಮಸ್ಕಾರ ಕುಳಿತುಕೊಳ್ಳಿ ಎಂದೆ. ಇಬ್ಬರೂ ಬಹಳ ಹೊತ್ತು ಸಾಕಷ್ಟು ಮಾತನಾಡಿದೆವು. ಗ್ರಾಮೀಣ ಪ್ರತಿಭೆಯಾಗಿದ್ದರೂ ಆತನ ವಿಚಾರಧಾರೆ...ಉದ್ದೇಶಗಳು ನನಗೆ ತುಂಬಾ ಇಷ್ಟವಾಯ್ತು. ಆತ ಹೊರಡುವಾಗ ಸಾರ್ ನಿಮ್ಮ ನಂಬರ್ ಕೊಡಿ ಅಗತ್ಯ ಬಿದ್ದಾಗ ಫೋನ್ ಮಾಡ್ತೀನಿ ಎಂದೆ. ಆತ ಕೂಡ ಅಷ್ಟೇ ಖುಷಿಯಾಗಿ ನಿಮ್ಮ ನಂಬರ್ ನನ್ನ ಬಳಿ ಇದೆ. ಮಿಸ್ ಕಾಲ್ ಕೊಡ್ತೀನಿ ನೋಟ್ ಮಾಡಿಕೊಳ್ಳಿ ಎಂದು ಮಿಸ್ಡ್ ಕಾಲ್ ಕೊಟ್ಟ.....................,
ದಾಯೆ ಬೋಡಿತ್ತುಂಡು ಮಾರಾಯ್ರೇ............., ಆತನ ಕಣೆದುರೇ ನನ್ನ ಮೊಬೈಲ್ ನಲ್ಲಿ ಆ ನಂಬರ್ ಹುಚ್ಚುನಾಯಿ ಎಂಬ ಹೆಸರಿನಲ್ಲಿ ಡಿಸ್ ಪ್ಲೇ ಆಗಿಬಿಡೋದೇ....? . ಆತನಿಗೆ ತಕ್ಷಣ  ಅದು ಅರ್ಥ  ಆಗ್ಲಲಿಲ್ಲ. ತಕ್ಷಣ ಎಚ್ಚೆತ್ತ ನಾನು   '' ಸಾರ್ ನಿಮ್ಮ ಹೆಸರು ಹೂವಣ್ಣನಾ....? ಎಂದೆ. ಇಲ್ಲಾ....ಇಲ್ಲಾ ನನ್ನ ಹೆಸರು ಅದಲ್ಲ ಎಂದುಬಿಟ್ಟ.  '' ಓಹ್, ಕ್ಷಮಿಸಿ ಇದು ನಿಮ್ಮ ಮಿಸ್ ಕಾಲ್ ಅಲ್ಲ ಅನ್ನಿಸುತ್ತೆ ...ಯಾವನೋ ಒಬ್ಬ ಹೂವಣ್ಣ ಅಂತಾ ಸುಳ್ ಸುಳ್ಳೇ ಪೋನ್ ಮಾಡಿ ತಲೆ ತಿನ್ತಾ ಇರ್ತಾನೆ. ಇದು ಅವನದ್ದು ಮಿಸ್ಡ್ ಕಾಲ್ ಇರ್ಬೇಕು.... ಅವನ ಗ್ರಹಾಚಾರ ಬಿಡಿಸ್ತೀನಿ ಇರಿ.... , ಹಾಗೆನ್ನುತ್ತಲೇ ಆ ನಂಬರನ್ನು ಡಿಲೀಟ್ ಮಾಡಿ '' ನೀವು ಮಿಸ್ ಕಾಲ್ ಕೊಡಿ ಸಾರ್ ಎಂದೆ. ಆದ್ರೆ ಅವ ಮಾತ್ರ  '' ಇ...ಇ...ಈ ನಂಬರ್ ಬೇಡ ಇನ್ನೊಂದು ನಂಬರ್ ಇದೆ ಅದ್ರಿಂದ ಮಿಸ್ ಕಾಲ್ ಕೊಡ್ತೀನಿ ಅಂತ ಬೇರೆ ನಂಬರ್ ನಿಂದ ರಿಂಗ್ ಮಾಡಿದ.  I am extreamly sorry..,  ಆ ನಂಬರ್ ಕೂಡ ತರಲೆ ಅನ್ನೋ ಹೆಸರಲ್ಲಿ ಫೀಡಾಗಿತ್ತು. ಆದ್ರೆ ಈ ಬಾರಿ Display ಅವನಿಗೆ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದೆ.

No comments: