Saturday, November 5, 2011

ಬೈಕ್ ಇನ್ ಸ್ನೇಕ್.......!!!

ಅದು ಕತ್ತಲನ್ನು ಬೆಳಕು ಚುಂಬಿಸುವ ಮೋಹಕ ಸಮಯ. ಕೋಟಿ ಕೊಟ್ಟರೂ ಏಳಲಾರೆ ಎಂಬ ದೇಹಾಲಾಸ್ಯದ ಜೊತೆಗೆ ಸುಖನಿದ್ರೆ. ಸಾವಿರ ಸೊಳ್ಳೆಗಳ ಸದ್ದನ್ನಾದ್ರೂ ಸಹಿಸಿಕೊಳ್ಳಬಹುದು ಹೆಂಡತಿ ಅನ್ನೋ ಮೈಕ್ ಅಷ್ಟೊತ್ತಿನಲ್ಲಿ ರ್ರೀ..., ಅಂತಾ ಎಷ್ಟೇ ಮೆಲ್ಲಗೆ ಕರೆದ್ರೂ ಅದು ಗುಡುಗಿನ ಸದ್ದಿನಂತೇ ಕೇಳಿಸುತ್ತೆ. ದಡಬಡಿಸಿ ಎದ್ದು ಕುಳಿತು ಅಂಗೈ ಉಜ್ಜಿಕೊಂಡು ಮುಖ ಮುಚ್ಚುತ್ತಾ ಏನೇ ಅದು.....? ಅಂದೆ. ಅವಾಗ್ಲಿಂದ ಪೋನ್ ಬಡ್ಕೊಂತಾ ಇದೆ  ಆನೆ ಬಿದ್ದಂಗೆ ಬಿದ್ದೀದೀರಲ್ರೀ....., ಅದೇನ್ ನೋಡ್ರೀ.... ಅಂತ ಅಂದವಳೇ ರಗ್ ಹೊದ್ದು ಮಲಗಿಕೊಂಡ್ಳು.  ಹೌದು, ಪೋನ್ ರಿಂಗಾಗ್ತಾನೇ ಇತ್ತು.  ''ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದರನೀಗಾ......, ಅಲ್ಲೊಂದು ಚೂರು ಇಲ್ಲೊಂದು ಚೂರು...., ಅನ್ನೋ ಹಾಡು.  ಅದು ನಮ್ಮ  ಇಂಗ್ಲೀಷ್ ಚಾನೆಲ್ ನಿಂದ ತುರ್ತುಕರೆ.  ಬೆಳ್ಳಂಬೆಳಗ್ಗೇ  ಕೋಕಿಲ ಧ್ವನಿ
ಹಲೋ ಸಾರ್....... ಹಾಸನ್  ಸ್ನೇಕ್ ದು ವಿಶ್ಯುವಲ್ಸ್ ಬಂದಿಲ್ಲ. ಬೇಗ ಅಪ್ ಲೋಡ್ ಮಾಡಿ ಪ್ಲೀಸ್....... ಅಂತಾ ರಾಗ ತೆಗೆದಳು. ಗಾಬರಿ ಬಿದ್ದ ನಾನು ಸ್ನೇಕಾ......? ಯಾವ ಸ್ನೇಕು....ಉ...? ಎಂದೆ.
ಅದೇ ಸಾರ್......., ಬೈಕು...., ಸ್ನೇಕೂ...., ಅಂತಾ ಆಕೆ ನನ್ನ ನಿದ್ದೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ಲು.
 ಈಗ ನನಗೆ ನಿಜವಾಗ್ಲೂ ನೆನಪಾಯ್ತು. ಹಾಸನದಲ್ಲಿ ಅವತ್ತು ಭಾರೀ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಚರಂಡಿಯಲ್ಲಿ ತೇಲಿ ಬಂದ ಚಿಕ್ಕ  ಹಾವೊಂದು ದೊಡ್ಡಿ ರಸ್ತೆಯಲ್ಲಿರೋ ಮೆಡಿಕಲ್ ಶಾಪ್ ವೊಂದರ ಒಳಕ್ಕೆ ಸೇರಿಕೊಂಡು ಬಿಟ್ಟಿತ್ತು.  ನಂತರ ಅಲ್ಲಿಂದ ಹೊರಬಂದ ಹಾವು ಶಾಪ್ ಎದುರು ನಿಲ್ಲಿಸಿದ್ದ ಬೈಕ್ ನ ಚೈನ್ ಸ್ಪಾಕೆಟ್ ಒಳ ಹೊಕ್ಕಿ ಹೊರ ಬರಲಾರದೆ ತಾಯಿಸಲಾರಂಬಿಸಿತು. ಕಡೆಗೆ ಅಲ್ಲೊಬ್ಬ ಯುವಕ ಚೈನ್ ಸ್ಪಾಕೆಟ್ ಹಾಗು ಮಾಸ್ಕನ್ನು ಬಿಚ್ಚಿ ಹಾವನ್ನು ಹೊರಕ್ಕೆ ತೆಗೆದಿದ್ದ. ಅಲ್ಲಿದ್ದ ನನ್ನ ಗೆಳೆಯರು ನನಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಅದನ್ನು ರಂಗುರಂಗಾಗಿ ವರದಿ ಮಾಡಿದ್ದೆ.
 ಆದ್ರೆ ಘಟನೆ ನಡೆದಿದ್ದು ರಾತ್ರಿ 8 ಘಂಟೆಯಲ್ಲಿ..., ಈ ಚೆಲುವೆ ಪೋನ್  ಮಾಡ್ತಾ  ಇರೋದು ಬೆಳಗ್ಗಿನ ಮೂರು ಘಂಟೆಯಲ್ಲಿ. ನನಗೆ ನನ್ನ ಕ್ಯಾಮೆರಾಮೆನ್ ಬಗ್ಗೆ ಭಾರೀ ಬೇಸರವಾಯ್ತು. ನಾನು ಸ್ಕ್ರಿಪ್ಟ್ ಹಾಕಿದ್ದರೂ ಅವ ವಿಶ್ಯುವಲ್ಸ್ ಹಾಕಿಲ್ಲ ಅಂತಾ ಕೋಪಗೊಂಡ ನಾನು ತಕ್ಷಣ ಪೋನ್ ಮಾಡಿ ಈ ಬಗ್ಗೆ ವಿಚಾರಿಸಿದೆ. ಆದ್ರೆ ಆತ  ಇದ್ದಬದ್ದ ದೇವರ ಹೆಸರನ್ನೆಲ್ಲಾ ಹೇಳಿ ವಿಶ್ಯವಲ್ಸ್ ಅಪ್ ಲೋಡ್ ಆಗಿದೆ ಎಂದು ಉತ್ತರ ಕೊಟ್ಟ.
    ಸರಿ, ವಿಧಿಯಿಲ್ಲದೆ ಆಕೆಗೆ ಪೋನ್ ಮಾಡಿ ವಿಶ್ಯುವಲ್ಸ್ ರಾತ್ರಿ 8.30 ಕ್ಕೇ ಬಂದಿದೆ ಚೆಕ್ ಮಾಡಿ ಎಂದೆ.  ಅದಕ್ಕೆ ಅವಳು ಹೌದು ಸಾರ್, ವಿಶ್ಯುವಲ್ಸ್ ಬಂದಿದೆ. ಅದ್ರಲ್ಲಿ ಬೈಕ್ ಮಾತ್ರ  ಇದೆ.., ಸ್ನೇಕ್ ಇಲ್ಲ ......., ಅಂತಾ ಹೇಳಿದ್ಲು.
  ಅಯ್ಯಯ್ಯೋ.., ರಾಮ ರಾಮ, ಬೈಕ್ ನಲ್ಲೇ  ಇದ್ದ ಹಾವಿನ ವಿಶ್ಯುವಲ್ಸ್ ನಾಪತ್ತೆಯಾಯ್ತಾ....? ಅಂತಾ ತಲೆ ಕೆರೆದುಕೊಂಡು... '' ಮೇಡಂ ಬೈಕ್ ನ ಚೈನ್ ಸ್ಪಾಕೆಟ್ ಹತ್ರ ಒಬ್ಬ  ಯುವಕ ಹಾವನ್ನು ಕೋಲಿನಿಂದ ಹೊರಕ್ಕೆ ತೆಗೆಯೋ ವಿಶ್ಯುವಲ್ಸ್ ಇಲ್ವಾ.....? ಅಂತ ಮರುಪ್ರಶ್ನೆ ಮಾಡಿದೆ.
 ಸ್ವಲ್ಪ ಸಮಯ ವಿಶ್ಯುವಲ್ಸ್  ನೋಡಿದ ಅವಳು...ಯು ಮೀನ್ ಆ ಸ್ಟಿಕ್ ನಲ್ಲಿ ಇರೋದು ಸ್ನೇಕಾ..........!!!!!????? ಅಂತಾ ಸಖೇದಾಶ್ಚರ್ಯದಿಂದ ಕೇಳೋದೇ.....?
ನನಗೆ ಇದ್ಯಾಕೋ ಅತಿಯಾಯ್ತು ಅನ್ನಿಸ್ತು. ಹೂಂ...ಹೂಂ..., ನಮ್ ಕಡೆ ಅದನ್ನ ಹಾವು ಅಂತಾರೆ.....  ಅಂತ ಸ್ವಲ್ಪ ಗಡುಸಾಗೇ ಹೇಳ್ದೆ. ಆದ್ರೆ ಅದನ್ನ ಗಂಭೀರವಾಗಿ ಪರಿಗಣಿಸದ ಆಕೆ ಇಟ್ ಮೀನ್ಸ್ ಸ್ನೇಕ್ ಇನ್ ಬೈಕ್....?! ಈ ಬಾರಿ ನನ್ನ ಕೋಪ ನೆತ್ತಿಗೇರಿತ್ತು.........ಹೌದ್ರೀ.., ಸ್ನೇಕ್ಕೇ ಅದು..., ನಿಮ್ಗೆ ಆ ಥರಾ ಅನ್ನಿಸ್ತಾ ಇಲ್ವಾ ಅಂತಾ ಎಗರಾಡಿದೆ.
ಅರೆ ಬಾಬ.., ಗುಸ್ಸಾ ಮತ್ ಕರೋ ನಿಮ್ಮ ಪೈಲ್ ನಲ್ಲಿ ಬೈಕ್ ಇನ್ ಸ್ನೇಕ್ ಅಂತಾ ಇದೆ......, ಅದಕ್ಕೆ ನಾನು ಸ್ನೇಕ್ ಬೈಕನ್ನ ನುಂಗಿರಬೇಕು ಅಂತಾ ಅಂದ್ಕೊಂಡೆ....., ಕಿತ್ ನಾ ಬಡಾ ಸ್ಟೋರಿ ನಾ.....?
ನಿಜ, ಆಕೆ ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ. ನಾನು ನನ್ನ ಕ್ಯಾಮೆರಾಮೆನ್ ಬಳಿ ವಿಶ್ಯುವಲ್ಸ್ ಪೈಲ್ ಗೆ ಸ್ನೇಕ್ ಇನ್ ಬೈಕ್ ಅಂತಾ ಹೆಸರು ಕೊಡು ಅಂತಾ ಹೇಳಿದ್ದೆ. ಅವನು ಅದನ್ನು ಜಸ್ಟ್ ಉಲ್ಟಾ ಮಾಡಿದ್ದ. ಅದು ಬೈಕ್ ಇನ್ ಸ್ನೇಕ್ ಆಗಿತ್ತು. ಪಾಪ ನಮ್ಮ ಮಲೆನಾಡು ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳದ  ಉತ್ತರ ಭಾರತದ ಚೆಲುವೆ ಹಾವಿನೊಳಗೆ ಬೈಕ್ ಹುಡುಕುವ ಕೆಲಸ ಮಾಡಿದ್ದಾಳೆ.  ಅಂದ್ರೆ ನಾವು ಕಳುಹಿಸಿದ್ದ ಸ್ಟೋರಿ ಹಾವು ಬೈಕ್ ನುಂಗಿದೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ. ಅಂತ ನಾನು ಅಂದ್ಕೊಂಡೆ
ಆದ್ರೆ ಆ ಕಿಲಾಡಿ ಹುಡುಗಿ ಬೆಳ್ಳಂಬೆಳಗ್ಗೆ ಹಾವಿನ ಕಥೆ ಹೇಳಿ ನನಗೆ ಹುಳ ಬಿಟ್ಟಿದ್ದಳು.  ನಂತರ ಆಕೆ ಮತ್ತು ಆಕೆಯ ಸ್ನೇಹಿತೆಯರು ನನ್ನ ಪೆದ್ದುತನಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಹಾವು ಬೈಕ್ ನುಂಗ್ತೋ ಇಲ್ವೋ ಹಾಳಾಗಿ ಹೋಗ್ಲಿ. ನನ್ನ ಸುಂದರ ಮುಂಜಾವು...., ಸವಿಯಾದ ನಿದ್ರೆ....., ಸಿಹಿ ಸಿಹಿ ಕನಸುಗಳು ಹಾಳಾಗಿ ಹೋಗಿದ್ದು ಮಾತ್ರ ಖಂಡಿತ ಸತ್ಯ.

No comments: