Tuesday, November 15, 2011

ಆಪರೇಶನ್ ಗೋ ಮಾತೆ.....,

ಅದು Exact message..........,
   ಹಾಸನದ ಎ.ಪಿ.ಎಂ.ಸಿ ಯಾರ್ಡ್ ಹಿಂಭಾಗದ ಗೇಟ್ ಬಳಿ ಐದು ಲಾರಿಗಳಲ್ಲಿ ಗೋವುಗಳನ್ನು ಲೋಡ್ ಮಾಡಿದ್ದಾರೆ. ರಾತ್ರಿ 10 ಘಂಟೆ ಸುಮಾರಿಗೆ ಅವುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತೆ. ಹಾಸನ ಪೆನ್ ಶನ್ ಮೊಹಲ್ಲಾ ನಿವಾಸಿ ಸಾಬು      ( ಹೆಸರು ಬದಲಾಯಿಸಿದೆ) ಅನ್ನೋವ್ನು ಅವುಗಳನ್ನ ಸಕಲೇಶಪುರದ ಶಿರಾಡಿ ಗಡಿಯವರೆಗೆ ಪಾಸ್ ಮಾಡುತ್ತಾನೆ. ಅಲ್ಲಿಂದ ಮಂಗಳೂರಿನ ಟೀಮ್ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೆ..........,
     ನನಗೆ ಇದರ ಅಸಲೀಯತ್ತನ್ನು ಅರಿಯುವ ಹಾಗು ಅಷ್ಟೇ ರೋಚಕವಾಗಿ ಈ ಸುದ್ದಿ ಚಿತ್ರೀಕರಿಸುವ ಮನಸ್ಸಾಯ್ತು. ನನ್ನ ಆಗಿನ ಕ್ಯಾಮೆರಾಮೆನ್ ಶಿವಾಜಿಗೆ ಇದೆಲ್ಲವನ್ನೂ ವಿವರಿಸಿದೆ.  ಶಿವಾಜಿ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಲೇಬೇಕು.  ಹೊಟ್ಟೆ ತುಂಬಾ ಊಟ ಇದ್ದರೆ ಸಾಕು, ಅವನದು ಮಗುವಿನಂತ ಮನಸ್ಸು.  ಅದೆಂತಹ  ಕಷ್ಟಕರ ಕೆಲಸವೇ ಇರಲಿ, ಸಾಕ್ಷಾತ್ ಛತ್ರಪತಿ ಶಿವಾಜಿಯಂತೆ ನುಗ್ಗುವ ಅಪ್ರತಿಮ ದೈರ್ಯಶಾಲಿ. ಅವನಂತಹ ಕ್ಯಾಮೆರಾಮೆನ್ ಬಲು ಅಪರೂಪ ಬಿಡಿ.
     ಆಗ ನನ್ನ ಬಳಿ ಕಾರು ಇರಲ್ಲಿಲ್ಲ. ಹಾಗಾಗಿ ನನ್ನ  ನನ್ನ ಸ್ನೇಹಿತ ಬಾಲಿಯಣ್ಣನ ಬಳಿ ಕಾರು ಕೇಳಿದೆ.  ಅದೇನೋ ಒಳ್ಳೇ ಜೋಶ್ ನಲ್ಲಿದ್ದ ಅವರೂ ಕೂಡ ನಮ್ಮ ಜೊತೆ  ಹೊರಟೇ ಬಿಟ್ರು.  ಇದೇ ವೇಳೆ ಸಕಲೇಶಪುರದ್ಲಲಿದ್ದ ನನ್ನ ಗೆಳೆಯ ಧ್ಯಾನ್ ಪೂಣಚ್ಚನಿಗೆ ಮಾಹಿತಿ ನೀಡಿದ್ದೆ. ಅವ  ಈಗ ಜನಶ್ರೀ ಚಾನೆಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.
            ನಮ್ಮ ಪ್ಲಾನ್ ನಂತೆ ಆಪರೇಶನ್ ಸ್ಟಾರ್ಟ್  ಆಯ್ತು.  ಅಲ್ಲಿ ಎ.ಪಿ.ಎಂ.ಸಿ ಯಾರ್ಡ್ ನ ಹಿಂಬಾಗದ ಗೇಟ್ ಬಳಿ ಗೋವುಗಳನ್ನು ಅಮಾನವೀಯವಾಗಿ ಲಾರಿಗಳಿಗೆ ಲೋಡ್  ಮಾಡುತ್ತಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡೆವು. ರಾತ್ರಿ 10.30 ರ ಸುಮಾರಿಗೆ ಆ ಐದು ಲಾರಿಗಳು ಒಂದೋದಾಗಿ ಸಕಲೇಶಪುರದತ್ತ ಹೊರಟವು.
     ನಿಜವಾಗ್ಲೂ ಅದು ರಣ ಸ್ಪೀಡ್....., ನೀವು ನಂಬಲಿಕ್ಕಿಲ್ಲ. ಆ ಕತ್ತಲ ಹಾದಿಯಲ್ಲಿ ಎಲ್ಲಾ ಲಾರಿಗಳು ಸರಿಸುಮಾರು 100 ಕಿಲೋಮೀಟರ್ ವೇಗದಲ್ಲಿ ಹೊರಟಿದ್ದವು. ಅವುಗಳನ್ನ  ಛೇಸ್ ಮಾಡೋದಿರ್ಲಿ.., ಧೂಳು ಕೂಡ ಹಿಡಿಯೋಕೆ ನಮ್ಮಿಂದ ಸಾಧ್ಯವಾಗಲ್ಲಿಲ್ಲ. ನಾನು ತಕ್ಷಣ ಧ್ಯಾನ್ ಗೆ  ಯಾವುದಾದ್ರೂ ಕಾಯಿನ್ ಬೂತ್ ನಿಂದ ಸಕಲೇಶಪುರ ನಗರ ಠಾಣೆಗೆ ಪೋನ್ ಮಾಡಿ ಮಾಹಿತಿ ನೀಡುವಂತೆ ಹೇಳಿದೆ. ಸೇಫರ್ ಸೈಡ್ ಅಂತ ಅವ ನಾವು ಹೇಳಿದಂತೆ ಮಾಡಿದ್ದ.
     ಸಕಲೇಶಪುರ ತಲುಪಿದ ನಮಗೆ ನಿಜವಾಗ್ಲೂ ಖುಷಿಯಾಯ್ತು ಯಾಕೆಂದ್ರೆ ಆ ಎಲ್ಲಾ ಲಾರಿಗಳು ನಗರ ಠಾಣೆ ಎದುರು ಸಾಲಾಗಿ ನಿಂತಿದ್ದವು.  ಪೊಲೀಸರ ಕಾರ್ಯ ದಕ್ಷತೆಗೆ ಮೆಚ್ಚಿದ ನಾವು ಕಾರ್ ನಿಂದ ಕೆಳಗಿಳಿದು ಲಾರಿಗಳ ವಿಶ್ಯುವಲ್ಸ್ ಮಾಡತೊಡಗಿದೆವು. ಆದ್ರೆ ಏನಾಶ್ಚರ್ಯ.....?  ಸ್ಟೇಷನ್ ನಿಂದ  ಇದ್ದಕ್ಕಿದ್ದಂತೆ ಓಡಿ ಬಂದ ಲಾರಿ ಚಾಲಕರು ಲಾರಿ ಹತ್ತಿ  ಹೊರಟೇ ಬಿಟ್ರು...,
    ನಮಗೆ ಅದನ್ನು ಪ್ರಶ್ನೆ ಮಾಡುವಷ್ಟು ಸಮಯ  ಇರಲ್ಲಿಲ್ಲ. ನಾವು ಕೂಡ  ಎಲ್ಲಾ ಲಾರಿಗಳನ್ನು ಹಿಂದಿಕ್ಕಿ ಕಪ್ಪಳ್ಳಿ ಗ್ರಾಮದ ಬಳಿ ನಮ್ಮ ವ್ಯಾನ್ ನಿಲ್ಲಿಸಿದೆವು.
           ಸರಿಯಾಗಿ ಐದು ನಿಮಿಷಕ್ಕೆ ಎಲ್ಲಾ ಲಾರಿಗಳು ಕಪ್ಪಳ್ಳಿ ಸಮೀಪ ಬಂದವು.  ಬಾಲಿಯಣ್ಣ ಹಾಗು ಧ್ಯಾನ್ ರಸ್ತೆಯಲ್ಲಿ ಲಾರಿ ನಿಲ್ಲಿಸುವಂತೆ ಅಡ್ಡ ನಿಂತರು. ನಿಲ್ಲಿಸಬಹುದು ಎಂಬ  ಆತ್ಮವಿಶ್ವಾಸ ಕೂಡ ಅವರಲ್ಲಿತ್ತು. ಇನ್ನೇನು ಹತ್ತಿರ.......ಹತ್ತಿರಾ...,   ಆ ಲಾರಿಗಳು ನಿಲ್ಲುವುದಿರಲಿ..., ಯಾವ ಸ್ಪೀಡ್ ನಲ್ಲಿ ಬಂದವೋ ಅದೇ ಸ್ಪೀಡ್ ನಲ್ಲಿ ಇವರ ಮೇಲೆ ಬಂದೇ ಬಿಟ್ವು.
     ಕ್ಷಣ ಮಾತ್ರದಲ್ಲಿ ಅಪಾಯವನ್ನು ಗ್ರಹಿಸಿದ ಧ್ಯಾನ್  ಹಾಗು ಬಾಲಿಯಣ್ಣ ಅಲ್ಲಿಂದ ಪಕ್ಕಕ್ಕೆ ಜಿಗಿದು ಪ್ರಾಣ  ಉಳಿಸಿಕೊಂಡ್ರು.  ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ನಾವೆಲ್ಲರೂ ಗಾಬರಿಯಾಗಿದ್ದೆವು. ಗೋವುಗಳನ್ನು ಸಾಗಿಸುವ ಕಟುಕರು ಮನುಷ್ಯರ ಪ್ರಾಣವನ್ನೂ ತೆಗೆಯಲು ಹೇಸೋದಿಲ್ಲ ಅನ್ನೋ ಸತ್ಯವನ್ನು ಸ್ವತಃ ಅನುಭವಿಸಿದೆವು.
ಎಲ್ಲವೂ ನಮ್ಮ ಸ್ಪೀಡನ್ನು ಮೀರಿ ಹೋಗಿದ್ದವು. ಆದ್ರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಯುವಕರ ಗುಂಪೊಂದು ಆ ಎಲ್ಲಾ ಲಾರಿಗಳ ಮೇಲೆ ಕಲ್ಲು ತೂರುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು. ಕುತೂಹಲ ತಡೆಯದ ನಾನು ಅವರ ಬಳಿ ಹೋಗಿ ಯಾಕೆ ಕಲ್ಲು ತೂರುತ್ತಾ ಇದ್ದೀರಾ.....? ಅಂತ ಕೇಳಿದೆ.
       ಅವರಲ್ಲೊಬ್ಬ  " ಸಾರ್...., ಈ ರಸ್ತೇಲಿ ಐದು ಲಾರೀಲಿ ದನಗಳನ್ನ ಕೇರಳಕ್ಕೆ ತಗೊಂಡು ಹೋದ್ರು ಸಾರ್...., ನಾನು ಇದುನ್ನ ಟಿವಿ ನೋರಿಗೆ ಹೇಳಿದ್ದೆ. ಅವ್ರು  ಬರ್ಲಿಲ್ಲ..,ಯಾವ್ದುಕ್ಕೂ ತಾಕತ್  ಬೇಕು ಸಾರ್...,  ನಮ್ ಕೈಲಿ ಗೋಮಾತೇನಾ ಕಾಪಾಡೋಕೆ ಆಗ್ಲಿಲ್ಲ.  ಆದ್ರೆ ಸಾಗಿಸ್ತಾ ಇದ್ದ  ಎಲ್ಲಾ ಲಾರಿಗಳ ಗಾಜು ಪುಡಿ ಪುಡಿ ಮಾಡಿದ್ವೀ....., " ಎಂದ.
   ಅವನು ಕುಡಿದಿದ್ದ.  ಆದ್ರೆ  ಆತನ ಕಳಕಳಿಗೆ ನಶೆ ಏರಿರಲ್ಲಿಲ್ಲ.  ಅಲ್ಲಿ ನಾವು ಯಾರು ಅಂತ ಅವನಿಗೆ ನಮ್ಮಿಂದ ಹೇಳೋಕೆ ಸಾಧ್ಯ ಆಗ್ಲಿಲ್ಲ.  ಮತ್ತದೇ ಬೇಸರ...ವ್ಯವಸ್ಥೆಯ ವಿರುದ್ದ ಅಸಹನೆಯನ್ನು ಹಂಚಿಕೊಂಡು ಹಾಸನದ ಹಾದಿ ಹಿಡಿದೆವು. ಸಕಲೇಶಪುರದ ಟೋಲ್ ಗೇಟ್ ನ ಬಳಿ ಅಂದಿನ ನಗರ ಠಾಣಾ ಇನ್ಸ್ ಪೆಕ್ಟರ್ ಜೀಪ್ ನಿಂತಿತ್ತು. ಡ್ರೈವರ್ ಹೊರಗೆ ನಿಂತು ಸಿಗರೇಟು ಸೇದುತ್ತಾ ಬಂದ ಬಂದ ವಾಹನಗಳಿಗೆ ಕೈ ತೋರಿಸುತ್ತಿದ್ದ.

No comments: