Sunday, November 20, 2011

ಡ್ರಾಪ್ ಕೊಡ್ತೀರಾ ಪ್ಲೀಸ್.......?

ಏನೇ ಹೇಳಿ....., ಜೇಬಲ್ಲಿ ಪರ್ಸ್ ಇಡೋದೇ ಒಂದು ರೀತಿಯ ಸ್ಟಾಂಡರ್ಡ್.  ಅದರಲ್ಲಿ ಕಾಸಿರ್ಲಿ ಅಥ್ವಾ ಹಳೇಯ ಪೇಪರ್ ಚೂರುಗಳಿರ್ಲಿ  ಪ್ಯಾಂಟ್ ಹಿಂಬಾಗದ ಪಾಕೆಟ್ ನಲ್ಲಿ ಅದು ಇದ್ದು ದಪ್ಪದಪ್ಪಾಗಿ ಎದ್ದು ಕಂಡ್ರೆ ಅದೊಂಥರಾ ಖುಷಿ. ಐದು ರುಪಾಯಿ ಆದ್ರೂ ಸರೀನೇ....., ದಪ್ಪದಪ್ಪದಾಗಿರೋ ಪರ್ಸನ್ನ ಕಿಸೆಯಿಂದ ಕಸಕ್ಕನೆ ಎಳೆದು, ಎರಡೆಳೆಯಾಗಿ ತೆರೆದು, ನೋಟನ್ನು ಎಳೆದು ಕೊಡ್ತಾ ಇದ್ರೆ........! ಸುತ್ತ ಮುತ್ತಲ ಜನರೆಲ್ಲಾ ಯಾವನೋ ಶ್ರೀಮಂತ ಅಂತಾ ಅಂದ್ಕೋತಾರೆ ಅನ್ನೋ ಕಲ್ಪನೆ.
     ಇಷ್ಟೆಲ್ಲಾ ತಿಳಿದುಕೊಂಡಿದ್ದ ನನಗೆ ನಾನಿಡುವ ಪರ್ಸ್ ಕೂಡ ಅಷ್ಟೇ ಸ್ಟಾಂಡರ್ಡ್  ಆಗಿರಬೇಕು ಅಂತ ಅನ್ನಿಸಿತ್ತು. ಅದಕ್ಕೆ ಪೂರಕ ಎಂಬಂತೆ ನನ್ನ ಗೆಳೆಯ ರಫಿಕ್ ಒಂದು ಪರ್ಸನ್ನು ನನಗೆ ಗಿಪ್ಟ್ ಕೊಟ್ಟಿದ್ದ. ಸೊಂಟದ ಅಳತೆಗೆ ಸರಿದೂಗುವ ಪ್ಯಾಂಟ್ ಇದ್ದರೂ ಸೊಂಟವೇ ಇಲ್ಲದಂತೆ ಜಾರಿ ಹೋಗುವ ಪ್ಯಾಂಟ್ ಹಾಕಿಕೊಳ್ಳುವಂತಹ ಸ್ಟೈಲ್ ಮಾಡೋದ್ರಲ್ಲಿ..., ನ್ಯೂ ಜನರೇಶನ್ ಅನ್ನೋ ಹೆಸರಲ್ಲಿ ಚಿತ್ರವಿಚಿತ್ರ ವೇಷ ಹಾಕಿಸೋದರಲ್ಲಿ ಅವ ಭಯಂಕರ ರುಸ್ತುಮ ಬಿಡಿ.
ಎಷ್ಟೇ ಆದ್ರೂ ಗೆಳೆಯ ಕೊಟ್ಟ ಪರ್ಸ್..., ಹಾಗಂತ ಅದನ್ನು ಖಾಲಿ ಬಿಡೋಕಾಗುತ್ಯೇ.....?  ತಿಂಗಳ ಮೊದಲ ವಾರದಲ್ಲಿ ನನ್ನ ಸಂಬಳ ತನ್ನ ಕೈ ಸೇರುವವರೆಗೆ ಪ್ರೀತಿಯ ನಯಾಗರವಾಗಿ ನಂತರ ರಣಭಯಂಕರವಾಗುವ ನನ್ನ ಮನದನ್ನೆ ಎದುರು ಮೂರು ನೂರರ ನೋಟಿಗಾಗಿ ಕೈ ಒಡ್ಡಿದೆ.
    ಅಯ್ಯೋ ,,, ಇದ್ದಿದ್ದೇ ಬಿಡ್ರಿ,   ಸಾವಿರ ಸಾವಿರ ಹಣವನ್ನು ನನ್ನ ಅಕೌಂಟ್ ನಿಂದ ಪೀಕುವ ನನ್ನ ರಾಜರಾಜೇಶ್ವರಿ ನೂರರ ಮೂರು ನೋಟು ಕೊಡೋಕೆ ಮುನ್ನೂರು ಪ್ರಶ್ನೆ ಕೇಳಿ ಅಷ್ಟ ಸಹಸ್ರನಾಮಾರ್ಚನೆ ಮಾಡೀ.........., ಕೊಡುವಷ್ಟರಲ್ಲಿ ಬೆಳಗ್ಗಿನ 10 ಘಂಟೆಯಾಗಿತ್ತು. ಎಷ್ಟೇ ಆಗ್ಲೀ ಅವಳ ಸಿಡಿ ಸಿಡಿ ವಧನವೇ ನನಗೆ ಶುಭ ಶಕುನ ಅಲ್ವೇ....?  ಬೈಕನ್ನೇರಿ ಆಪೀಸ್ ನತ್ತ ಹೊರಟೆ. ಶಾಂತಿನಗರದಿಂದ  ಸಾಲಗಾಮೆ ರಸ್ತೆಯಲ್ಲಿ ಸಾಗುವ ಮಾರ್ಗ ಮಧ್ಯ  ನಂದು ವರ್ಕ್ ಶಾಪ್ ಎದುರು ಒಬ್ಬ ಸುಂದರಾಂಗಿ ನನ್ನ ಬೈಕ್ ಗೆ ಕೈ ತೋರಿಸಿದಳು. ಕಕ್ಕಾಬಿಕ್ಕಿಯಾದ ನಾನು ಹಿಂದೆ ತಿರುಗಿ ನೋಡಿದೆ....., ಯಾರೂ ಇಲ್ಲಾ....!!!?. ಅಚ್ಚರಿಯಾಯಿತು. ಟೈಟ್ ಜೀನ್ಸ್,  ಟೀ ಶರ್ಟ್......, ಹವಳದಂತಹ ತುಟಿಗೆ ಮೆತ್ತಿರುವ ಕೆಂಬಣ್ಣ...., ಆಹಾ.., ಮೋಹನಾಂಗಿ ಅನ್ನೋದ್ರಲ್ಲಿ  ಎರಡು ಮಾತೇ ಇಲ್ಲ. ಅದ್ಯಾಕೋ ಸಣ್ಣ ನಡುಕ ಹುಟ್ಟಿದ್ರೂ ಸಾವರಿಸಿಕೊಂಡು ಬೈಕ್ ನಿಲ್ಲಿಸಿದೆ. ಅವಳೆಷ್ಟು ಚೆಲುವೆಯೋ ಅವಳ ನಗು ಅದರ ನೂರರಷ್ಟು ಚೆಲುವು. ಒಂದೇ ಬಾರಿ ಸಾವಿರ ಸಾವಿರ ವೋಲ್ಟ್ ನಷ್ಟು ವಿದ್ಯುತ್ ಪ್ರವಹಿಸಿದ ಅನುಭವ. .....,
       ಡ್ರಾಪ್ ಕೊಡ್ತೀರಾ....ಪ್ಲೀಸ್.....? ಅವಳ ಧ್ವನಿ.., ಅದು ಧ್ವನಿಯಲ್ಲ......., ವೀಣಾನಾಧ. ಕಳೆದು ಹೋಗುತ್ತಿದ್ದ ನನ್ನನ್ನು ಅವಳು ಸರ್, ಬಸ್ ಸ್ಟ್ಯಾಂಡ್ ತನಕ ಡ್ರಾಪ್ ಕೊಡ್ತೀರಾ ಅಂತ ಕೇಳಿದಳು. ರಂಭೆಯೋರ್ವಳು ಬೈಕನ್ನೇರುವಾಗ ನಾನೇಕೆ ಬೇಡಾ ಎನ್ನಲಿ...? ಆ ಕ್ಷಣಕ್ಕೆ ನನ್ನ ಪತ್ನಿಯ ನೆನಪಾದರೂ ದೈರ್ಯ ತಂದುಕೊಂಡು ವೈ ನಾಟ್.....ಪ್ಲೀಸ್ ಅಂತ ಒಂದಷ್ಟು ಮುಂದೆ ಜರುಗಿ ಕುಳಿತೆ. ಹಾಗೇ ನನ್ನ ಬೈಕ್ ಎಡಕಲ್ಲು ಗುಡ್ಡದ ಮೇಲೆ ಸ್ಟೈಲ್ ನಲ್ಲಿ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿತ್ತು. ಅವಳು ತುಂಬಾ ಮಾತನಾಡಿದಳು... ಎಲ್ಲದಕ್ಕೂ ಹೂಂ...ಹೂಂ ಅಂದೆ. ಬೈಕ್ ನಿಂದ ಕೆಳಗಿಳಿದ ನಂತರ ಟಾಟಾ ಮಾಡಿದಳು. ಸಾಧ್ಯವಾದಷ್ಟು ಮಾದಕವಾಗಿ ನಕ್ಕು ನಾನೂ ಕೂಡ ಹಾಗೇ ಮಾಡಿದೆ. ಅದೊಂದು ರಸಮಯ ಅನುಭವ ನೀಡಿದ ಗಾಡ್ ಗೆ ಥ್ಯಾಂಕ್ಸ್ ಹೇಳಿ  ಪೆಟ್ರೋಲ್ ಹಾಕಿಸಿಕೊಂಡು ಬರಲು ಬಂಕ್ ನತ್ತ ಹೊರಟೆ.
      ನೂರು ರುಪಾಯಿಯ ಪೆಟ್ರೋಲ್ ಹಾಕಿಸಿದ ನಾನು ಹೊಸ ಪರ್ಸ್ ನೊಳಗೆ ಬೆರಳು ತೂರಿಸಿ ಸ್ಠೈಲ್ ಆಗಿ ನೋಟು ತೆಗೆದು ಕೊಡಲು ಜೇಬಿಗೆ ಕೈ ಹಾಕಿದೆ. ಪರ್ಸ್ ಇರಲ್ಲಿಲ್ಲ. ಗಾಬರಿ ಬಿದ್ದು ಎಲ್ಲಾ ಜೇಬುಗಳನ್ನು ತಡಕಾಡಿದೆ....ಊಹೂಂ ಪರ್ಸ್ ಇಲ್ಲ. ಆಗ ನನಗೆ ಸಹ್ಯಾದ್ರಿ ಥಿಯೇಟರ್ ಬಳಿ ಬೈಕ್ ನಲ್ಲಿ ಹಂಪ್ ಅವೈಡ್ ಮಾಡಲು ಬ್ರೇಕ್ ಹಾಕಿದ್ದು.....ಆ ಹುಡುಗಿ ನನ್ನ ಬೆನ್ನಿಗೆ ಅಂಟಿ ನಂತರ ಸೊಂಟ ಹಿಡಿದು ಹಿಂದೆ ಜರುಗಿದ್ದು ನೆನಪಾಯ್ತು.
          ಥತ್..., ಊರವರ ಪೆದ್ದುತನ ಸುದ್ದಿ ಮಾಡೋ ನಾನು ಪೆದ್ದುಪೆದ್ದಾಗಿ ಪರ್ಸ್ ಕಳೆದುಕೊಂಡಿದ್ದೆ. ಬಂಕ್ ನವ ಪರಿಚಯ ಇದ್ದ ಕಾರಣ ಆ ತಕ್ಷಣಕ್ಕೆ ಹಣ ಕೊಡಲೇಬೇಕಾದ ಅಗತ್ಯ ಬರಲ್ಲಿಲ್ಲ. ಅವೊತ್ತಿನಿಂದ ನಾನು ಪರಿಚಯ ಇಲ್ಲದ ಯಾವುದೇ ಹೆಣ್ಣು ಮಗಳನ್ನ ನನ್ನ ಬೈಕ್ ಹತ್ತಿಸುತ್ತಿಲ್ಲ...., ಜೊತೆಗೆ ಪರ್ಸ್ ಇಡುವ ಧೈರ್ಯವನ್ನೂ ಮಾಡಿಲ್ಲ.

No comments: