Friday, December 9, 2011

ಸಂತೇ ಸೇರುವ ಮುನ್ನಾ.....!!!???

   ಸರ್,  ದೇವ್ರಾಣೆಗೂ  ಹೇಳ್ತೀನಿ..., ನಿಮ್ ಚಾನೆಲ್ ನಂಬರ್ ಒನ್ ಸರ್,  ನನ್ಗಂತೂ ಬೆಳಿಗ್ಗೆ ಎದ್ದ್ ತಕ್ಷಣ ಅದನ್ನ ನೋಡ್ನಿಲ್ಲಾಂದ್ರೆ ಸಮಾಧಾನನೇ ಆಗಲ್ಲಾ....., ನೀವ್ ಬಿಡಿ ಸಾರ್ ನಿಮ್ಮಂಗೆ  ಬೇರೆ ಯಾವ ಟೀವಿನೋರು ಸುದ್ದಿ ಮಾಡಲ್ಲ....., 
                  ಆತ ಬೆಳ್ಳಬೆಳಗ್ಗೇನೇ ನನ್ನನ್ನು ಎಬ್ಬಿಸಿ ವಾಯಲಿನ್ ಥರ ಕೊಯ್ಯತೊಡಗಿದ್ದ. ಆ ವರಸೇಲೇ ಆತ ಒಬ್ಬ ಪುಡಾರಿ ಅನ್ನೋದು ನನಗೆ ಅರ್ಥವಾಗಿತ್ತು. ಕಷ್ಟ ಪಟ್ಟು ಮಾತನ್ನು ಅರ್ಧಕ್ಕೆ ತುಂಡರಿಸಿ   ಸರಿ, ನನ್ನಿಂದ ನಿಮಗೆ ಏನಾಗ್ಬೇಕು ಅಂತಾ ಹೇಳಿ ಪ್ಲೀಸ್........., ಅಂದೆ. ನನ್ನ ಅವಸರದಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಗುರುತಿಸಿದ ಆತ ಕೊಂಚ ಸಾವರಿಸಿಕೊಂಡು   ಏ..ಏನಿಲ್ಲಾ ನಮ್ ಊರಲ್ಲಿ ಒಬ್ಬ ಟ್ರ್ಯಾಕ್ಟರ್ ಡ್ರೈವರ್ ಅಪ್ಪ ಅಮ್ಮ  ಇಲ್ಲದ ಬಡಪಾಯಿ ಹೆಣ್ಣು ಮಗಳಿಗೆ ಮದ್ವೆ ಆಗ್ತೀನಿ ಅಂತಾ ನಂಬ್ಸಿ ಮೋಸ ಮಾಡವ್ನೆ.  ಪಾಪ ಅವ್ಳು ಹೊಳೆಗ್ ಬೀಳಾಕ್ ಓಯ್ತಾ ಇದ್ಲು....., ನಾವ್ ಊರ್ ಹಿರಿಕ್ರು ಎಲ್ಲಾ ಸೇರಿ ಅವ್ನುನ್ನ ಹಿಡಿದ್  ಕೂರ್ಸೀವಿ. ಈಗ ಮಾವಿನ್ ಕೆರೆ ಬೆಟ್ದಾಗೆ ಮದ್ವೆ ಮಾಡೋಕ್ ಓಯ್ತಾ ಇದೀವಿ ಬತ್ತೀರಾ ಸಾ....? ಅಂತ ಅವನ ಅಗತ್ಯವನ್ನು ತೆರೆದಿಟ್ಟ.  ಅದರ ಜೊತೆಗೆ ನಿಮ್ಮುನ್ನ ಬುಟ್ರೆ ಬೇರೆ ಯಾರಿಗೂ ವಿಷ್ಯ ಹೇಳಿಲ್ಲಾ..........., ಅನ್ನೋ Extra ಡೈಲಾಗ್ ಬೇರೆ ಸೇರಿಸಿ ಬಿಟ್ಟ.        
  ಈ ದಿನದ ಸೂಪರ್ ಓಪನಿಂಗ್ ಅಂದ್ಕೊಂಡ ನಾನು ನನ್ನ ಕ್ಯಾಮೆರಾಮೆನ್ ಜೊತೆ ಮಾವಿನಕೆರೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆ.  ಆ ಕೊರೆಯುವ ಚಳಿಯಲ್ಲೂ Exclusive ನ್ಯೂಸ್ ಬಾರಿಸುವ ಉತ್ಸಾಹ ನಮ್ಮದಾಗಿತ್ತು.                                                          ಹಾಗೋ ಹೀಗೋ ಬೆಟ್ಟ ಸೇರಿದ ನಮಗೆ ಪರಮಾಶ್ಚರ್ಯ ಕಾದಿತ್ತು. ಯಾಕೇಂದ್ರೆ ಅಲ್ಲಿ ಮದುವೆ ಜೋಡಿ ಅಥ್ವಾ ಅವರ ಪಟಾಲಂ ನ ಸುಳಿವೇ ಇರಲ್ಲಿಲ್ಲ.  ಅನುಮಾನಗೊಂಡ ನಾನು ಆ ಮಹಾಶಯನಿಗೆ ಫೋನಾಯಿಸಿದೆ. '' ಬತ್ತಾ ಇದೀವಿ ಸಾ......, ಅಲ್ಲೇ ಇರಿ ಐದು ನಿಮ್ಶ....ಬಂದೇ ಬುಟ್ವೀ....ಅಂದ.
  ಸಧ್ಯ ಸ್ಟೋರಿ ಮಿಸ್ ಆಗ್ಲಿಲ್ವಲ್ಲಾ ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟೆ.  ಆದ್ರೆ ಆ ಕ್ಷಣದ ದುರಂತ ಅನ್ನೋ ಥರ ಅಲ್ಲಿ ಇದ್ದಕ್ಕಿದ್ದಂತೇ ಸುವರ್ಣ ಚಾನೆಲ್ ನ ವರದಿಗಾರ ವೇಣುಕುಮಾರ ಭಯಾನಕ ಸ್ಪೀಡ್ ನಲ್ಲಿ ಬೆಟ್ಟ ಏರಿ ಬಂದೇ ಬಿಡೋದೇ.......? ನನಗೆ Exclusive ಅಂತಾ ಹೇಳಿದ್ದ ಆ ಮಹಾಶಯನ ಮೇಲೆ ಇನ್ನಿಲ್ಲದ ಕೋಪ. ವೇಣು ನನಗೆ ಸ್ನೇಹಿತನಾಗಿದ್ದರೂ ಸುದ್ದಿ ವಿಚಾರದಲ್ಲಿ ಮಾತ್ರ ದುಶ್ಮನ್ ಆಗಿದ್ದ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಪೇಲವ ನಗೆ ನಕ್ಕೆವು. ಪಕ್ಕದಲ್ಲೇ ಬಂದು ಕುಳಿತ ವೇಣು ಕೊಸರಾಡಿಕೊಂಡು '' ಅಣ್ಣಾ ನಿನ್ ಗೆ ಹೆಂಗೋ ಗೊತ್ತಾಯ್ತು. ಅಂತ  ಕೇಳೇ ಬಿಟ್ಟ. ಕೋಪದಿಂದ ನಾನು '' ಯಾಕೇ....? ನಿಮ್ ಚಾನಲ್ ಗೆ ಮಾತ್ರ ಹೇಳ್ಬೇಕು ಅಂತಾ ಬಾಂಡ್ ಏನಾದ್ರೂ ಇದ್ಯಾ......? ಅಂತ ಮರುಪ್ರಶ್ನೆ ಹಾಕಿದೆ.   '' ಹಂಗಲ್ವೋ ನನ್ಗೆ ಇನ್ ಪಾರ್ಮ್ ಮಾಡಿದವ ನನ್ನೊಬ್ಬನಿಗೆ ಬಿಟ್ಟು ಯಾರಿಗೂ ವಿಷಯ ಹೇಳಿಲ್ಲ ಅಂದಿದ್ದ.........., ಅಂತ ವಿವರಿಸತೊಡಗಿದ. ಯಾರವನು ಅಂತಾ ಕೇಳಿದ್ರೆ ಆ ಮಹಾಶಯನ ಹೆಸರು ಹೇಳೋದೇ.......? ಎಲಲಾ ಮಹಾಶಯಾ........, ಚೆನ್ನಾಗೇ ಗೇಮ್ ಹಾಕಿದ್ದೀ....ಅಂತ ಮನಸಾರೆ ಅವನನ್ನ ಬೈದುಕೊಳ್ಳತೊಡಗಿದೆವು.   ಅಷ್ಟರಲ್ಲಿ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ಬಂಡೆಯೊಂದರ ಮರೆಯಿಂದ  ಕಸ್ತೂರಿ ಚಾನಲ್ ನ ಕ್ಯಾಮೆರಾಮೆನ್ ಬಿಳಿಗಿರಿ ಶ್ರೀನಿವಾಸ್ ರಿಪೋರ್ಟರ್ ಸುರೇಶ್ ನಗ್ತಾ ನಗ್ತಾ ಹೊರ ಬಂದು ಬಿಟ್ರು. ದೇವಸ್ಥಾನದ ಅದ್ಯಾವುದೋ ಮೂಲೆಯಿಂದ ಉದಯ ಟಿವಿ ಅತಿಖ್ ಕೂಡ ಎಂಟ್ರಿ ಕೊಟ್ರು. ಅಲ್ಲಿಗೆ ಎಲ್ಲಾ ಮುಗಿದೇ ಹೋಗಿತ್ತು. ಆ ಮಹಾಶಯ ಆ Extra ಡೈಲಾಗನ್ನು ಎಲ್ಲರಿಗೂ ಹೇಳಿ ಎಲ್ಲರೂ ಬೆಳ್ಳಗ್ಗೇನೇ ಬೆಟ್ಟ ಹತ್ತುವಂತೆ ಮಾಡಿದ್ದ. ಇನ್ನೇನು ಮಾಡೋದು.., ವೃತ್ತಿ ಬಾಂಧವರು ತಾನೇ.....? ಎಲ್ಲರೂ ಒಂದಾಗಿ ಕಲೆತು ಹರಟೆ ತಮಾಷೆ ಇತ್ಯಾದಿ ಶುರು ಮಾಡಿದ್ವು....., ನನಗೆ ಅಲ್ಲೊಂದು ಕೊರತೆ ಎದ್ದು ಕಾಣತೊಡಗಿತು. ಅದು ಈ ಟಿವಿಯ ಅಂಬಿಕಾ ಪ್ರಸಾದ್.......,  ಛೇ ಅವರೊಬ್ಬರು ಮಾತ್ರ ಇಲ್ವಲ್ಲಾ ಅಂತ ಕನವರಿಸಿದೆ ಅಷ್ಟೇ........, ಕ್ಯಾಮೇರಾನ ಕೈ ಯಲ್ಲಿ ಹಿಡಿದುಕೊಂಡೇ ನಮ್ಮ ಹಿಂಬದಿಯ ಬಂಡೆ ಮರೆಯಿಂದ ಹೊರಬಂದ ಪ್ರಸಾದ್ '' ಹೌದು ಸ್ವಾಮಿ.., ನಾನು ಇದೀನಿ....ಸಂತೆ ಸೇರೋ ಮುಂಚೆ ಗಂಟು ಕಳ್ಳರು ಸೇರ್ಕೊಂಡ್ರು ಅನ್ನೋ ಹಾಗೇ..........., ಅನ್ನೋದೆ....? ನಮ್ಮ ನಗುವಿಗೆ ಪಾರವೇ ಇರಲ್ಲಿಲ್ಲ. ಯಾಕಂದ್ರೇ ನಾವು ನಿಜವಾಗ್ಲೂ ಕಳ್ಳರ ರೀತಿ ಒಬ್ಬರಿಗೊಬ್ಬರು ವಿಷಯ ತಿಳಿಸದೇ ಬೆಟ್ಟಕ್ಕೆ ಬಂದಿದ್ದೆವು. ಎಲ್ಲರಿಗೂ Exclusive ನ್ಯೂಸ್ ಮಾಡುವ ತವಕ. ಯಾವನೋ ಒಬ್ಬ ಹಳ್ಳೀ ಲೀಡರ್ ನಿಂದ ನಾವೆಲ್ಲಾ ಮೂರ್ಕರಾಗಿದ್ದೆವು. ಸುಮಾರು ಒಂದು ಘಂಟೆ ತಡವಾಗಿ ಬಂದ ಆ ಮಹಾಶಯ ಬಂದು ನಮ್ಮನ್ನು ನೋಡಿ ನಕ್ಕನಾದ್ರೂ ನಾವ್ಯಾರೂ ನಗಲ್ಲಿಲ್ಲ. ಮದುವೆ ಮನೆಯಲ್ಲಿ ಅವನಿಗೆ ಬಾಯಿಗೆ ಬಂದಂತೆ ಜಾಡಿಸುವ ಮನಸ್ಸಿತ್ತಾದ್ರೂ ಯಾರೂ ಕೂಡ ಆ ದೈರ್ಯ ಮಾಡಲ್ಲಿಲ್ಲ.  ಅನಾಥ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಿದ ಆತ್ಮತೃಪ್ತಿಯ ಜೊತೆಗೆ ಮರಳಿ ಗೂಡಿಗೆ ಸೇರಿದೆವು.

No comments: