Tuesday, December 20, 2011

ಎಲ್ಲಯ್ತೋ ಅಂತಃಪುರ.....?


"ರ್ರೀ  .....ರ್ರೀ.....ರ್ರೀ.......ಏಳ್ರೀ ಮೇಲೇ......, ಮನೆಹಾಳ್ ಕೆಲ್ಸ ಮಾಡಿ ಸುಖವಾಗಿ ಮಲ್ಗಿದ್ದೀರಲ್ರೀ........, ಏಳ್ರೀ ಮೇಲೆ.......,"
      ಕನಸ್ಸಿನಿಂದ ಎದ್ದು ಕಣ್ಬಿಟ್ಟ ನನ್ನ ಕಣ್ಣೆದುರು ಪತ್ನಿಯ ಚಂಡಿಕಾ ರೂಪ.....!.   ಕ್ಷಣ ಕಾಲ ಅವಾಕ್ಕಾದೆ. ಅದು ಕತ್ತಲು ಸರಿದು ಬೆಳಕು ಹುಟ್ಟುವ ಸಮಯ......,  ಭುಸುಗುಡುತ್ತಿದ್ದ ಕಾಳಿಂಗ ಸರ್ಪದಂತೆ ಕಾಣುತ್ತಿದ್ದ ಅವಳು ಕೈಯಲ್ಲಿದ್ದ ಮೊಬೈಲನ್ನು ಮುಖದ ಮುಂದೆ ಹಿಡಿದು ಯಾರ್ರೀ ಇದು....? ಅಂದ್ಲು. ಮೊಬೈಲ್ ಸ್ರೀನ್ ನೋಡಿದೆ ಏನೂ ಇರಲ್ಲಿಲ್ಲ. ನಗು ಬಂತು, ನಿದ್ದೆಯಿಂದ ಎದ್ದು ಏನೇನೋ ಮಾತಾಡ್ತಾ ಇದಾಳೆ ಅಂತಾ   '' ಲೇ ಅದು ಮೊಬೈಲ್ ಕಣೇ.., ಏನಾಯ್ತೇ ನಿನ್ಗೆ...? ಅಂತಾ ಮತ್ತೆ ಮಲಗಲು ಯತ್ನಿಸಿದೆ. ಈ ಬಾರಿ ಅವಳ ಕೋಪ ಮಳೆಗಾಲದಲ್ಲಿ ಭೋರ್ಗರೆವ ಜೋಗದ ಜಲಪಾತದಂತೆ....., ಸಂಪೂರ್ಣ ಓಪನ್ ಆದ ಕ್ರಸ್ಟ್ ಗೇಟ್ ನಿಂದ ದುಮ್ಮಿಕ್ಕಿ ಹರಿವ ಡ್ಯಾಂ ನೀರಿನಿಂತೆ...., ಇನ್ನೂ ಯಾವುದ್ಯಾವುದರಂತೆ ಕಾಣಿಸಿತು. ಸ್ವಲ್ಪ ಆತಂಕನೂ ಆಯಿತು.ಏ..ಏನೇ ಅದು ಅಂತಾ ಪೇಲವಾಗಿ ಪ್ರಶ್ನಿಸಿದೆ. ಯಾರ್ರೀ ಅವ್ಳು 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೀರಂತಲ್ಲಾ...? ನೀನ್ಯಾರೇ...? ಅಂತಾ ನನ್ನನ್ನೇ ಕೇಳ್ತಾ ಇದಾಳೆ, ಯಾರ್ರೀ ಅವ್ಳು. ಕೋಪದಲ್ಲಿ ಏದುಸಿರು ಬಿಡುತ್ತಾ ಕಿರುಚಾಡತೊಡಗಿದ್ದಳು. ಎದ್ದು ಓಡಿ ಹೋಗೋಣಾ ಅನ್ನಿಸುವಷ್ಟು ಪೀಕಲಾಟ ಶುರುವಾಯ್ತು. ಯಾಕಂದ್ರೇ ನಾನು ನಿಜವಾಗ್ಲೂ ಅಡ್ವಾನ್ಸ್ ಕೊಟ್ಟಿದ್ದೆ. ಆದ್ರೆ ಉದ್ದೇಶ ಒಳ್ಳೆಯದಾಗಿತ್ತು.
  ಅದು ಹಾಗಲ್ಲಮ್ಮಾ.., ಅಂತಾ ಮಾತಿಗೆ ಶುರುವಿಕ್ಕಿಕೊಂಡೆ. ಊಹೂಂ, ಇವಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಕಣ್ಣುಗಳು ಕೊಳಗಳಾಗಿದ್ದವು. ಕೊಡದಷ್ಟು ಕಣ್ಣಿರು ಕೂಡ ಬಸಿದು ಹೋಗತೊಡಗಿತ್ತು.
     ತಡರಾತ್ರಿಯಲ್ಲಿ ಯಡವಟ್ಟಾಗಿತ್ತು. ಹೈಟೆಕ್ ವೇಶ್ಯಾವಟಿಕೆಯ ಸ್ಟಿಂಗ್ ಆಪರೇಶನ್ ಮಾಡುವ ಉದ್ದೇಶದಿಂದ ದಂಧೆ ನಡೆಸುವ ಒಬ್ಬಾಕೆಯ ಜೊತೆ ಗಿರಾಕಿಯಂತೆ ನಟಿಸಿ ಪರಿಚಯ ಮಾಡಿಕೊಂಡು ಕೇರಳದ ಹುಡುಗೀರು ಬೇಕು ಅಂತಾ 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೆ. ಅವಳು ಹುಡುಗೀರು ಬಂದ ತಕ್ಷಣ ಪೋನ್ ಮಾಡ್ತೀನಿ ಅಂತಾ ಮೊಬೈಲ್ ನಂಬರ್ ಬರೆದುಕೊಂಡಿದ್ದಳು.  ಇದೆಲ್ಲವನ್ನೂ ನನ್ನ ಕ್ಯಾಮೆರಾಮೆನ್ ಶಿವಾಜಿ ಗೋಣಿಚೀಲದೊಳಗೆ ಕ್ಯಾಮೆರಾ ಅವಿತಿಟ್ಟು ಶೂಟ್ ಮಾಡಿಕೊಂಡಿದ್ದ
   ಯಾರಿಗ್ರೀ ಗೊತ್ತು ಈ ದಂಧೆವಾಲಿಗೆ ಅಷ್ಟೊಂದು ನಿಯತ್ತಿದೆ ಅಂತಾ....?  ಅಷ್ಟೊತ್ತಲ್ಲಿ ತನ್ನ ನಿಯತ್ತಿನ ಪ್ರದರ್ಶನ ಮಾಡೋಕೆ ನನ್ನ ಮೊಬೈಲ್ ಗೆ ಫೋನ್ ಮಾಡಿದ್ದಾಳೆ. ಪಾಪ, ಗಂಡ ಅನ್ನೋ ಪ್ರಾಣಿ ದುಡಿದು ದಣಿದು ಬಂದು ಮಲಗಿದ್ದಾನಲ್ಲಾ ಅಂತಾ ನನ್ನಾಕೆ ಪೋನ್ ರಿಸೀವ್ ಮಾಡಿದ್ದಾಳೆ.  ಅತ್ತಲ್ಲಿಂದ ಅವಳು ಅವಸರದಲ್ಲಿ ಹಾಯ್ ಚಿನ್ನಾ....., ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟೋವ್ನು ಆರಾಮಾಗೇ ಮಲ್ಕೊಂಬಿಟ್ಟಿದ್ದೀಯಲ್ಲಾ......., ನಿನ್  ಕೇರಳದ್ ಮಹಾರಾಣೀರು ಬಂದಿದಾರೆ. ಅಂತಃಪುರ ಎಲ್ಲಯ್ತೋ.......ಡಾರ್ಲಿಂಗ್ ಅಂತಾ ಕೇಳಿ ಬಿಟ್ಟಿದ್ದಾಳೆ. ಉರಿದು ಬಿದ್ದ ನನ್ನ ಧರ್ಮಪತ್ನಿ ಆಕೆಗೆ ಮಂಗಳಾರತಿ ಮಾಡಿದ್ದಾಳೆ. ಅದಕ್ಕವಳು ಕೇರಳದವರು ಬೇಕು ಅಂದೋವ್ನು ಕನ್ನಡದವಳನ್ನ ಕರ್ಕೊಂಡು ಬಂದಿದ್ದಾನಾ.....? ಅಂತಾ ಮರುಪ್ರಶ್ನೆ ಹಾಕಿದ್ದಾಳೆ.........., ಯಾಕ್ರೀ ಬೇಕಿತ್ತೂ ಗ್ರಹಾಚಾರಾ......?.
ಅವಳಿಗೆ ರೀ ಡೈಯಲ್ ಮಾಡಿ ಲೇ ಬಿಕನಾಸಿ ಇವಳು ನನ್ನ ಹೆಂಡತಿ ಅಂತಾ ಬೈದೆ.  ನಿನ್ನ ಹೈ ಟೆಕ್ ದಂಧೆ ನಾಳೆ ನಮ್ಮ ಚಾನೆಲ್ ನಲ್ಲಿ ಸುದ್ದಿಯಾಗುತ್ತೇ ನೋಡ್ತಾ ಇರು ಅಂತಾ ಗುಡುಗಿದೆ. ಬೆದರಿದ ಅವಳು ಮೊಬೈಲ್  ಸ್ವಿಚ್ ಆಪ್ ಮಾಡಿದಳು.
     ಅವತ್ತು ಬೆಳಿಗ್ಗಿನ ಟಿಫಿನ್ ಖೋತಾ. ಈ ತಕ್ಷಣ ಆಪೀಸಿಗೆ ನಡೀರಿ ನಾನು ವಿಶ್ಯವಲ್ಸ್ ನೋಡಬೇಕು ಅಂತಾ ನನ್ನ ಹೆಂಡತಿ ಒಂದೇ ಸವನೆ ಹಠ ಹಿಡಿದಿದ್ದಳು. ಸ್ನಾನ ಮಾಡ್ಕೋತೀನಿ ಬಿಡೇ ಅಂದ್ರೂ ಬಿಡದೆ ನನ್ನನ್ನು ಬಲವಂತದಿಂದ ಆಪೀಸಿಗೆ ಎಳೆದು ತಂದಿದ್ದಳು. ಆಫೀಸಿನಲ್ಲಿ ಗಡದ್ದಾಗಿ ಮಲಗಿದ್ದ ಶಿವಾಜಿ ಬಡಬಡನೇ ಎದ್ದವನೇ ಕ್ಯಾಮೆರಾ ತಂದು ಕ್ಯಾಸೆಟ್ ರಿವೈಂಡ್ ಮಾಡಿ ಪ್ಲೇ ಮಾಡಿದ. ಆದರೆ ಎಲ್.ಸಿ.ಡಿ.ಯಲ್ಲಿ ಯಾವುದೇ ವಿಶ್ಯುವಲ್ಸ್ ಮೂಡಲ್ಲಿಲ್ಲ. ತಲೆ ಕೆರೆದುಕೊಂಡು ಮತ್ತೆ ಹಿಂದೆ ಮುಂದೆ ಮಾಡಿ ಪ್ಲೇ ಮಾಡಿದ. ಊಹೂಂ ಏನೂ ಇಲ್ಲ. ಪೆದ್ದುಪೆದ್ದಾಗಿ ನಗುತ್ತಾ ತಲೆಕೆರೆದುಕೊಂಡು 'ಸರ್ ಕ್ಯಾಮರಾ ಆನ್ ಮಾಡಿದ್ದೆ, ಆದ್ರೆ ರೆಕಾರ್ಡಿಂಗ್ ಬಟನ್ ಅದುಮಿರಲ್ಲಿಲ್ಲ ಅನ್ನೋದೆ......!? ನನಗೋ ಸುನಾಮಿಯಂತ ಕೋಪ. ಹೆಂಡತಿಯ ಮುಖ ನೊಡಲಾರದಷ್ಟು ಭಯ. ಹಾಂ....! ಅಂತಾ ಬಾಯ್ಬಿಟ್ಟ ನನ್ನನ್ನು ಕಂಡು ನನ್ನ ಹೆಂಡತಿ ಹೊಟ್ಟೆ ಹಿಡಿದು ನಗಲಾರಂಬಿಸಿದಳು
ಅಯ್ಯೋ...ಬಿಡ್ರಿ, ನಾವೆಷ್ಟು ಪೆದ್ದರು ಅಂತಾ ನನ್ನ ಹೆಂಡತಿಗೆ ಅರ್ಥವಾಗಿ ಸಂಸಾರ ಸರಿಯಾಯ್ತು. ಮೊಬೈಲ್ ನಲ್ಲಿ ನನ್ನ ಬದುಕು ಬಂಗಾರ ಮಾಡಲಿದ್ದ ಆ ಹೈ ಟೆಕ್ ಹೆಣ್ಣು ಮತ್ಯಾವತ್ತೂ ನನ್ನ ಕಣ್ಣಿಗೆ ಬೀಳಲೇ ಇಲ್ಲ.

No comments: