Tuesday, January 10, 2012

ಮನೆಯಂಗಳದ ಬೆಳಕು ಆರಬಾರದು......

ರಾಗಿ, ಜೋಳ, ಭತ್ತ,  ಅಡಿಕೆ ಜೊತೆಗೆ ಅವೆಲ್ಲವನ್ನೂ ಬೆಳೆಯುತ್ತಿದ್ದ ಮೂರೆಕರೆ ಹೊಲವನ್ನು ಮಾರಿದ ದುಡ್ಡು.......,
    ಕಣ್ಣೆದುರು ಬೆಳೆದು ನಿಂತ ಮಗಳು.......,
      ಅವಳ ಮದುವೆಗೆ ರಾಜ್ಯದ ಸಾವಂತರಾಜ ರೇವುಸಿದ್ದಣ್ಣೇಶ್ವರರನ್ನು ಕರೆಯಬೇಕು. ಊರ ಮಂದಿಗೆಲ್ಲಾ ಮೂರು ದಿನ ಮದುವೆ  ಹೆಸರಿನಲ್ಲಿ ಹಬ್ಬದೂಟ ಬಡಿಸಬೇಕು. ಮದುವೆಗೆ ಬಂದ ಎಲ್ಲರಿಗೂ ತಾಂಬೂಲದ ಜೊತೆಗೆ ಕಾಣಿಕೆ ಕೊಟ್ಟು ಕಳುಹಿಸಬೇಕು. ಬಂದ ಎಲ್ಲರೂ '' ಮಾದೇಗೌಡ..., ಇದು ಮದ್ವೆ ಅಲ್ಲ ಕಣೋ...., ಉತ್ಸವ,  ಉತ್ಸವ......'' ಅಂತಾ ಬಾಯ್ತುಂಬಾ ಹೊಗಳಬೇಕು.
ಮಾದೇಗೌಡ ತನ್ನಷ್ಟಕ್ಕೆ ತಾನೇ ಉಬ್ಬಿ ಹೋದ. ಮನೆಯೊಳಗೆ ಮಡದಿ ಮೀನಾಕ್ಷಿ ಮಗಳು ತನುಜಾ ಜೊತೆ ಮಲಗಿದ್ದಾಳೆ. ಈಗಲೂ ಆಕೆ ಪುಟ್ಟ ಮಕ್ಕಳಂತೆ ತಾಯಿಯ ತೋಳಿನ ಮೇಲೆ ತಲೆಯಿಟ್ಟು ಮುದುರಿ ಮಲಗಿಕೊಳ್ಳುತ್ತಾಳೆ. ಭಾರೀ ಅದೃಷ್ಟವಂತೆ ಅವಳು. ಅವಳ ಕಾಲ್ಗುಣವೋ ಏನೋ ಆಕೆ ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಗಿದೆ.  ದುಡಿದದ್ದೆಲ್ಲಾ ಬಂಗಾರವಾಗಿ ಅಪ್ಪ ಕೊಟ್ಟ ಒಂದೆಕರೆ ಹೊಲ ಈಗ ನಾಲ್ಕೆಕರೆ ಬೆಳೆದು ಬಿಟ್ಟಿದೆ. ಮುದ್ದಿನ ಮಗಳ ಸೊಬಗಿಗೆ ಬೆರಗಾದ ಪಕ್ಕದೂರಿನ ಜಮೀನ್ದಾರನ ಮಗ ಅವಳನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದಿದ್ದಾನೆ. ಶ್ರೀಮಂತರಲ್ಲಿ ಶ್ರೀಮಂತ.., ಚೆಲುವರಲ್ಲಿ ಚೆಲುವ. ಮಾದೇಗೌಡನಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ತನ್ನಪ್ಪ ತನಗೆ ಕೊಟಿದ್ದ ಹೊಲವನ್ನು ಉಳಿಸಿಕೊಂಡು ತಾನು   ಕಷ್ಟ ಪಟ್ಟು ಸಂಪಾದಿಸಿದ್ದ ಮೂರೆಕೆರೆ ಹೊಲವನ್ನು ಮಾರಿಬಿಟ್ಟ. ಈ ಬಾರಿ ಉತ್ತಮ ಇಳುವರಿ ಇದ್ದ ಕಾರಣ ದಾಸ್ತಾನು ಮಾಡಿದ್ದ ದವಸ ಧಾನ್ಯಗಳನ್ನೆಲ್ಲಾ ಮಾರುಕಟ್ಟೆಗೆ ಸಾಗಿಸಿದ್ದ. ಮಾದೇಗೌಡ ಬೆಳಕಾಗುವುದನ್ನೇ ಬೆರಗುಗಣ್ಣಿನಿಂದ ಕಾಯತೊಡಗಿದ.
    ಮುಂಜಾನೆ ಲಗುಬಗನೆ ಎದ್ದ ಮಾದೇಗೌಡ ಮನೆಯೆದುರೇ ಇದ್ದ ಹೊಲದತ್ತ ಹೊರಟ. ಅಲ್ಲಿ ಮಾವಿನ ಮರಗಳ ನಡುವೆ ಇದ್ದ ಎರಡು ಬಾಳೇಗಿಡಗಳ ಎದುರು ಸಮಾನಾಂತರವಾಗಿ ದೊಡ್ಡ ದೊಂದಿಯೊಂದನ್ನು ನೆಟ್ಟು ಅದಕ್ಕೆ ಎಣ್ಣೆ ಸುರಿದ. ಪತಿಯ ಜೊತೆ ತಾನೂ ಹೊಲಕ್ಕೆ ಬಂದಿದ್ದ ಮಡದಿ ಮೀನಾಕ್ಷಿ ಅಚ್ಚರಿಯಿಂದ ಏನ್ರೀ ಇದು.........? ಅಂತಾ ಹುಬ್ಬೇರಿಸಿದಳು.
    ಮೀನಾಕ್ಷೀ ನಾನು ಈಗ ಪೇಟೆಗೆ ಹೋಗ್ತಾ ಇದೀನಿ. ಅಲ್ಲಿ ತೋಟ ಹಾಗು ಧಾನ್ಯ ಮಾರಿದಕ್ಕೆ  ಶೆಟ್ಟಿ ಮುನ್ನೂರು ಬಂಗಾರದ ನಾಣ್ಯ ಕೊಡ್ತಾನೆ. ಅದ್ರಿಂದ ತನುಜಾಗೆ ಒಡವೆ ವಸ್ತ್ರ, ಬಟ್ಟೆ-ಬರೆ ಎಲ್ಲಾ ತರ್ತೀನಿ........, ಗೌಡನ ಮೊಗದಲ್ಲಿ ಸಂಭ್ರಮ ಲಾಸ್ಯವಾಡುತ್ತಿತ್ತು. ಅದೇನೋ ಸರೀರೀ....ಇದೇನಿದೂ ಇಷ್ಟು ದೊಡ್ಡ ದೊಂದಿ...? ಅದೂ ಹಗಲು ಹೊತ್ತಲ್ಲೀ......?!! ಮೀನಾಕ್ಷಿ ಯ ಮರುಪ್ರಶ್ನೆಗೆ ನಸುನಕ್ಕ ಮಾದೇಗೌಡ '' ಅದೂ ನನ್ನ ಪಾಲಿನ ಅದೃಷ್ಟದ ಬೆಳಕು. ಪೇಟೆಯಿಂದ ಗಾಡಿಕಟ್ಟಿಕೊಂಡು ಬರುವಾಗ ಕತ್ತಲಾಗುತ್ತೆ.  ನೀನು ಕತ್ತಲು ಹತ್ತುವ ಮುನ್ನವೇ ಈ ದೊಂದಿಯನ್ನು ಹತ್ತಿಸಿಡು. ಇವೊತ್ತಿನಿಂದ ತನುಜಾಳ ಮದುವೆ ಮುಗಿಯೋವರೆಗೂ ಈ ದೊಡ್ಡದೊಂದಿಗೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕು......,  ಮೆನೆಯಂಗಳಕ್ಕೆ ಬೀಳುವ ಈ ಬೆಳಕು ಮದುವೆ ಮುಗಿಯೋವರೆಗೂ ಆರಬಾರದು....., ಗಂಡನ ಕಾಳಜಿಗೆ ಮೀನಾಕ್ಷಿಯ ಕಣ್ಣಾಲಿಗಳಲ್ಲಿ ನೀರಾಡತೊಡಗಿತ್ತು.
        ಗಾಡಿ ಕಟ್ಟಿ ಹೊರಟ ಗೌಡನಿಗೆ ಖುಷಿಯೋ ಖುಷಿ. ಅಡುಗೆಯವರಿಂದ ಹಿಡಿದು ಪ್ರತಿಯೊಬ್ಬರಿಗೂ ಹಣ ಕೊಟ್ಟಿದ್ದಾಗಿದೆ. ನಿರೀಕ್ಷೆಯನ್ನೂ ಮೀರಿ ಒಡವೆ,ವಸ್ತ್ರ ಇತ್ಯಾದಿ ಕೊಂಡಿದ್ದಾಗಿದೆ. ಎಲ್ಲಾ ಕಳೆದು ನೂರೈವತ್ತು ಚಿನ್ನದ ನಾಣ್ಯ ಇನ್ನೂ ಮಿಕ್ಕಿದೆ. ಮಗಳ ಮದುವೆ ನಾನಂದುಕೊಂಡದ್ದಕ್ಕಿಂತ ಜೋರಾಗಿಯೇ ನಡೆಯುತ್ತೆ.
     ದಢ್...ಧಡ್..ಧಡಾರ್............, ಇದ್ದಕ್ಕಿದ್ದಂತೆ ರಸ್ತೆಯ ಮಾದೇಗೌಡನ ಎತ್ತಿನ ಗಾಡಿ ರಸ್ತೆಯ ಪಕ್ಕದ ಹೊಂಡಕ್ಕೆ ಉರುಳಿ ಬಿತ್ತು. ಗಾಡಿ ಓಡಿಸುತ್ತಿದ್ದ  ಆಳು ಸಣ್ಣನನ್ನು ಅದ್ಯಾರೋ ಮಾರಣಾಂತಿಕವಾಗಿ ಥಳಿಸುತ್ತಿದ್ದಾರೆ. ಗೌಡನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ಒಬ್ಬ ಚೀರಾಡುತ್ತಿದ್ದ ಅವನ ಹೆಡೆಮುರಿ ಕಟ್ಟಿದ್ದಾನೆ.  ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗೌಡನ ಬಳಿಯಿದ್ದ ಚಿನ್ನದ ನಾಣ್ಯ,  ಒಡವೆ, ವಸ್ತ್ರ ಇತ್ಯಾದಿ ದರೋಡೆಕೋರರ ಪಾಲಾಗಿ ಹೋಗಿತ್ತು. ಆ ತಡರಾತ್ರಿಯಲ್ಲಿ ದಟ್ಟಕಾಡಿನ ನಡುವೆ ಗೌಡ ಹಾಗು ಆತನ ಕೆಲಸದಾಳಿನ ಚೀರಾಟ ಅಕ್ಷರಷಃ ಅರಣ್ಯ ರೋಧನವಾಗಿತ್ತು.
      ಬೆಳಕು ಹರಿಯುತ್ತಲೇ ದಾರಿಹೋಕರ ನೆರವಿನಿಂದ ಕಟ್ಟುಗಳನ್ನು ಬಿಚ್ಚಿಸಿಕೊಂಡ ಮಾದೇಗೌಡ ಏದುಸಿರು ಬಿಡುತ್ತಾ ಸೇನಾಧಿಪತಿ ಬಾಣಚಂದ್ರನ ಬಳಿ ಡೌಢಾಯಿಸಿದ. ಆತನ ರೋಧನವನ್ನು ಕಂಡ ಬಾಣಚಂದ್ರ ಒಡನೆಯೇ ತನ್ನ ಮುಖ್ಯ ಸೈನಿಕ ಪಾರ್ವತೀಶ ಹಾಗು ಆತನ ಸಹಾಯಕ ರಘುವೇಂದ್ರನನ್ನು ಕರೆಯಿಸಿ ದರೊಡೆಕೋರರನ್ನು ಹಿಡಿಯುವಂತೆ ಅಪ್ಪಣೆ ಮಾಡಿ ಕಳುಹಿಸಿ ಕೊಟ್ಟ.
      ಹಾಗೇ ಅಲ್ಲಿಂದ ಹೊರಟ ಮಾದೇಗೌಡನಿಗೆ ಬರಿಗೈಯಲ್ಲಿ ಮನೆಗೆ ತೆರಳಲು ಮನಸ್ಸಿರಲ್ಲಿಲ್ಲ. ಬಾಣಚಂದ್ರನ ಬಗ್ಗೆ ಅಪಾರ ನಂಬಿಕೆ ಇದ್ದ ಆತ ಅಂದು ಪೇಟೆಯಲ್ಲಿದ್ದ ಅಪೂರ್ವ ಛತ್ರದಲ್ಲಿ ತಂಗಲು ನಿರ್ಧರಿಸಿದ. ಹಾಗೇ ಅಲ್ಲಿಗೆ ತೆರಳಿದ ಆತನಿಗೆ ಆಘಾತವೊಂದು ಕಾದಿತ್ತು. ಛತ್ರದ ಕೋಣೆಯೊಂದರಲ್ಲಿ ಬಾಣಚಂದ್ರನ ಸೇನಾಧಿಪತಿ ಪರ್ವತೇಶ ಹಾಗು ಆತನ ಸಹಾಯಕ ರಘುವೇಂದ್ರ ಕಂಡರು. ಅವರ ಎದುರು ಆತನನ್ನು ದೋಚಿದ ದರೊಡೆಕೋರರು.......!. ಏನಾಗುತ್ತಿದೆ ಎಂದು ತಿಳಿಯಲು ಮಾದೇ ಗೌಡ ಅಲ್ಲೇ ಮರೆಯಲ್ಲಿ ಅವಿತು ಕುಳಿತ.
      ಅಟ್ಟಹಾಸ ಮಾಡುತ್ತಿದ್ದ ಪರ್ವತೇಶ ಹಾಗು ರಘುವೇಂದ್ರ  ಆ ದರೋಡೆಕೋರರಿಗೆ ''ಶಹಭಾಷ್ ಕಣ್ರೋ ಶಹಭಾಷ್..., ಒಳ್ಳೇ ಬೇಟೇನೇ ಆಡಿದ್ದೀರಾ......, ಈ ಸಲ ನಿಮ್ಮ ಪಾಲು ನೂರರಲ್ಲಿ ಇಪ್ಪತ್ತು..., ತಗೊಳ್ಳಿ.., ಹಂಚ್ಕೊಳ್ಳಿ....ಎನ್ನುತ್ತಿದ್ದರು.
      ಕೊತಕೊತನೆ ಕುದ್ದು ಹೋದ ಮಾದೇಗೌಡ ಕೋಣೆಯ ಒಳನುಗ್ಗಿದವನೇ ನೇರವಾಗಿ ಪರ್ವತೇಶನ ಕುತ್ತಿಗೆ ಪಟ್ಟಿ ಹಿಡಿದು ತನ್ನ ಎಡಗಾಲಿನ ಚಪ್ಪಲಿಯಿಂದ ರಪರಪನೆ ಬಾರಿಸಿದ. ಅದೇ ರೀತಿ ರಘುನಂದನನ್ನೂ ಕೂಡ ಅಟ್ಟಾಡಿಸಿ ಬಡಿದ. ಆದರೆ ದರೊಡೆಕೋರರು ಹಾಗು ಸೈನಿಕದ್ವೈಯರ ಶಕ್ತಿಯೆದುರು ಮಾದೇಗೌಡ ಸೋಲಲೇ ಬೇಕಾಯ್ತು. ಆತನನ್ನು ಸಾಯುವಂತೆ ಥಳಿಸಿದ ಅವರು ಊರಿನಿಂದ ಹೊರಗೆ ಕಾಡಿನೊಳಗೆ ಎಸೆದು ಬಂದರು. ಬಾಯ್ಬಿಟ್ಟರೆ ನಿನ್ನ ಇಡೀ ಕುಟುಂಬವನ್ನೇ ನಾಶ ಮಾಡುತ್ತೇ ವೆ ಅನ್ನೋ ಎಚ್ಚರಿಕೆ ನೀಡಿದ್ದರು.
                    ಮಾದೇಗೌಡನ ಕನಸಿನ ಗೋಪುರ ಕುಸಿದು ಹೋಗಿತ್ತು. ಮನೆಗೆ  ತೆರಳಿ 3 ದಿನಗಳಾಗಿವೆ. ಮಡದಿ ಹಾಗು ಮಗಳು ಕಾಯುತ್ತಿದ್ದಾರೆ. ಹಸಿದು, ಹಲ್ಲೆಗೊಳಗಾಗಿ ದಣಿದು ಹೋಗಿದ್ದ ಮಾದೇಗೌಡನಿಗೆ ಉಸಿರಾಡಲೂ ಬಲವಿಲ್ಲ. ಅದು ಹೇಗೇಗೋ ಕಷ್ಟ ಪಟ್ಟು  ಮನೆಯೆದುರಿಗೆ ಇದ್ದ ತನ್ನ ಹೊಲವನ್ನು ತಲುಪಿದ. ಮೀನಾಕ್ಷಿ ಮರೆತಿರಲ್ಲಿಲ್ಲ. ದೊಂದಿ ಹಚ್ಚಿದ್ದ ಕಾರಣ ಅದರ ಬೆಳಕು ಅಂಗಳದ ತುಂಬಾ ಕಾಣುತ್ತಿತ್ತು. ದೂರದಲ್ಲಿ ಅದರ ಇರಿವನ್ನು ಕಂಡ ಮಾದೇಗೌಡನಿಗೆ ಆ ಬೆಳಕಲ್ಲಿ ಮೀನಾಕ್ಷಿ ಹಾಗು ತನುಜಾಳ ಅಸ್ಪಷ್ಟ ರೂಪ ಕಾಣುತ್ತಿತ್ತು.
             ಅಂದಿನ ರಾತ್ರಿ ಅತ್ಯಂತ ಭಾರವಾಗಿ.....ನಿರೀಕ್ಷೆಗಳ ಜೊತೆ ಕಳೆದು ಹೋಯಿತು. ಮರುದಿನ  ಊರ ಮುಂದಿನ ಮರವೊಂದರಲ್ಲಿ ಮಾದೇಗೌಡನ ಶವ ಜೋತಾಡುತ್ತಿತ್ತು. ಇತ್ತ ಅವನ ಹೊಲದಲ್ಲಿ ಮೀನಾಕ್ಷಿ ಹೊತ್ತಿಸಿಟ್ಟ ದೊಂದಿ ಆರಿ ಹೊಗಿತ್ತು. ಆದರೆ ಕಟ್ಟೇಪುರ ವೇಶ್ಯಾಗಾರದಲ್ಲಿ ನರ್ತಕಿಯರ ಗೆಜ್ಜೆ ಸದ್ದು, ಮದಿರಿಯ ಮೋಜು ಹಾಗು ಜೂಜಿನ ಖುಷಿ ಮುಗಿದಿರಲ್ಲಿಲ್ಲ. ಪರ್ವತೇಶ ಹಾಗು ರಘುವೇಂದ್ರ ಮತ್ತಿನಲ್ಲಿ ತೂರಾಡುತ್ತಿದ್ದರು.
        ಇತ್ತ ಮಾದೇಗೌಡನ ಮನೆಯಲ್ಲಿ ರಣರೋಧನ. ಆತನ ಶವದ ಮೇಲೆ ಬಿದ್ದ ಆತನ ಮಡದಿ ಹಾಗು ಮಗಳು ಗೋಳಾಡುತ್ತಿದ್ದರು. ವಿಷಾದದ ಸಂಖೇತ ಎಂಬಂತೆ ಬಾಣಭಟ್ಟ ತಲೆಯಿಂದ ಪೇಟ ತೆಗೆದು ಕಂಕುಳಿಗೆ ಸಿಲುಕಿಸಿಕೊಂಡು ಮೌನವಾಗಿ ತಲೆ ತಗ್ಗಿಸಿ ನಿಂತಿದ್ದ.
     

No comments: