Monday, January 23, 2012

ಮಕ್ಳು ಕಳ್ರು........,

        ಇವ್ರುನ್ನ ಯಾವತ್ತೂ ಇಲ್ಲಿ ನೋಡೇ ಇಲ್ಲ......, ನಮ್ಮೂರಿನ್ ನೆಂಟ್ರು ಕೂಡಾ ಅಲ್ಲಾ.....,!!ಗುಂಪು ಕಟ್ಕೊಂಡ್ ಬಂದಿರೋ ಇವ್ರೆಲ್ಲಾ ಅದೇನ್ ಹುಡುಕ್ತಾ ಆವ್ರೋ ಗೊತ್ತಿಲ್ಲ....,?!! ಇದ್ದಕ್ಕಿದ್ದಂತೆ ಊರಿನೊಳಗೆ ಬಂದಿದ್ದ ಐವರು ಅಗಂತುಕರನ್ನು ಕಂಡು ಶಂಕ್ರ ತಲೆಕೆರೆದುಕೊಂಡ. ಅವರು ಅವನ ಕಣ್ಣೆದುರೇ ಸುಳಿದಾಡುತ್ತಿದ್ದರು. ಅಷ್ಟೊತ್ತಿಗೇ ಅಲ್ಲಿ ಶಾಲೆ ಸಮೀಪ ಯಾರೋ ಹೆಂಗಸರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದುದು ಶಂಕ್ರನ ಕಿವಿಗೆ ಬಿತ್ತು.
 ಬಾರೇ ಮ್ಯಾಕೇ ಯಾರೋ ಗೊತ್ತುಗುರಿ ಇಲ್ದೋರೂ ಚಂದ್ರೇಗೌಡ್ರು  ಹಿರಿಮಗ್ಳಾವ್ಳಲ್ಲಾ....., ಜಾನಕಿ....., ಅದೇ ಜಾನಿ ಜಾನಿ ಅಂತಾರಲ್ಲಾ.... ಅವ್ಳು ಕೈ ಹಿಡಿದು ಎಳುದ್ರಂತೇ....., ಅವ್ಳು ಕೊಸರಾಡ್ಕೊಂಡು ಒಂದೇ ಸವ್ನೇ ಬಡ್ಕೊಂಡು ಓಡ್  ಬಂದ್ಲಂತೇ...., ಯಾರೊ ಕಳ್ರ್ ಇದ್ದಂಗೆ ಇದ್ರಂತೆ ಕಣ್ರೀ.........!!!! ಸಖೇದಾಶ್ಚರ್ಯಗಳಿಂದ ಹೇಳುತ್ತಿದ್ದ ಅವಳ ಮಾತಲ್ಲಿ ಕಳ್ರೂ ಅನ್ನೋ ಪದ ಶಂಕ್ರನಿಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರ ಕಿವಿ ನಿಮಿರುವಂತೆ ಮಾಡಿತು. ಯಾಕಂದ್ರೆ ಹೊಳೆನರಸೀಪುರ ಪೊಲೀಸರು ಮೊನ್ನೆ ಮೊನ್ನೆಯಷ್ಟೇ ಈ ರೀತಿ ಅನುಮಾನ ಬರೋ ಜನ ಕಂಡ್ರೆ ಮಾಹಿತಿ ನೀಡಿ ಅಂತಾ ದೊಡ್ಡ ಚೀಟಿ ಬರೆದು ಊರ ಹೆಬ್ಬಾಗಿಲಿಗೆ ಅಂಟಿಸಿ ಹೋಗಿದ್ದರು.  ಅಲ್ಲಿ ದುಸುರಾ ಮಾತೇ ಇಲ್ಲ. ಊರೊಳಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಇಲ್ಲಿ ಮಕ್ಕಳನ್ನು ಕದ್ದು ಉತ್ತರ ಕರ್ನಾಟಕದಲ್ಲಿ ನಿಧಿಗಾಗಿ ಬಲಿ ಕೊಡ್ತಾರೆ........., ಮತ್ತೆ ಕೆಲವರು ಕಣ್ಣು ಕಿತ್ತು ಬಿಕ್ಷೆ ಬೇಡಿಸ್ತಾರೆ..........., ಅನ್ನೋ ತೀರ್ಮಾನವೇ ಆಗಿ ಹೋಯ್ತು. ಅದು ಕಾಳ್ಗಿಚ್ಚಿನಂತೆ ಮನೆಯಿಂದ ಮನೆಗೆ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡ ಸುದ್ದಿಯೇ ಆಗಿ ಹೋಯ್ತು.
     ಹಾಗೇ ಸುದ್ದಿ ಹರವುತ್ತಿದ್ದ ಮಂಜೇಗೌಡನಿಗೆ ಊರಿನ ಅಂಗನವಾಡಿ ಬಳಿ ಆ ಐವರ ತಂಡ ಇರೋದು ಕಂಡೇ ಬಿಡ್ತು. ಏ.,,,,,,, ಇಲ್ಲೇ ಇದಾರೇ ಕಣುರ್ಲಾ...., ಬಲ್ಲಿ ಬಲ್ಲಿ ಬಲ್ಲಿ ಅಂತ ಜೋರಾಗಿ ಕೂಗಿಯೇ ಬಿಟ್ಟ.
      ಮಂಜೇಗೌಡನ ಧನಿಗೆ ಅಲ್ಲಿ ಹೆಂಗಸರು ಮಕ್ಕಳು ಸೇರಿದಂತೆ ನೂರಾರು ಮಂದಿಯ ದಂಡೇ ಸೇರಿತ್ತು. ಅವರಲ್ಲಿದ್ದ ಯಾರೋ ಒಬ್ಬ ಏನ್ ನೋಡ್ತಿದ್ದೀರ್ಲಾ ...? ಇಕ್ಕುರ್ಲಾ......, ಅಂತ ಆದೇಶ ಮಾಡಿ ಶುರುವಿಕ್ಕಿಕೊಂಡ. ಪೊರಕೆ, ಚಪ್ಪಲಿ, ದೊಣ್ಣೆ ಎಲ್ಲಾ ಸೇರಿದಂತೆ ಕೈಗೆ ಸಿಕ್ಕಿದರಲ್ಲಿ ಬಡಿದದ್ದೇ ಬಡಿದದ್ದು.
    ಹಾಗೇ ಒದೆ ತಿನ್ನುತ್ತಿದ್ದವನ ಪೈಕಿ ಒಬ್ಬಾತ ನಿಲ್ಸಿ...ನಿಲ್ಸೀ..., ನಾವು ಕಳ್ಳರಲ್ಲ..., ಕಳ್ಳರನ್ನ ಹಿಡಿಯೋಕೆ ಬಂದಿರೋ ಪೋಲಿಸ್ರು...ಅಂತ ಅರಚಾಡಲಾರಂಭಿಸಿದ. ಹೊಡೆಯುತ್ತಿದ್ದುದನ್ನು ನಿಲ್ಲಿಸಿದ ಅವರು ಏನೈತ್ಲಾ ಪ್ರೂಫೂ.....? ಅಂತಾ ವಿಚಾರಣೆಗೆ ಶುರುವಿಕ್ಕಿಕೊಂಡರು. ಗ್ರಹಚಾರಕ್ಕೆ ಅವರ ಪೈಕಿ ಒಬ್ಬನಲ್ಲಿ ಮಾತ್ರ ಐ.ಡಿ ಕಾರ್ಡ್ ಇತ್ತು. ಆದ್ರೆ ಗ್ರಾಮಸ್ಥರಿಗೆ ಇದರಿಂದ ನಂಬಿಕೆ ಬರಲ್ಲಿಲ್ಲ. ಡೂಪ್ಲಿಕೇಟು ಇರ್ಬೋದು........!? ಅನ್ನೋ ಅನುಮಾನ.
 '' ದಯವಿಟ್ಟು ಹೊಡೀಬೇಡಿ ಅನುಮಾನ ಇದ್ರೆ ನೀವು ಪೊಲೀಸರಿಗೆ ಪೋನ್ ಮಾಡಿ ಕರೆಸಿಕೊಳ್ಳಿ, ಎಲ್ಲಾ ಕ್ಲಿಯರ್ ಆಗುತ್ತೆ.'' ಸುಧಾರಿಸಿಕೊಳ್ಳುತ್ತಿದ್ದ ಒಬ್ಬಾತ ಕೈ ಮುಗಿದ.
        ಗ್ರಾಮಸ್ಥರಿಗೆ ಇದು ಸರಿ ಎನಿಸಿತು. ಕೂಡ್ಲೆ ಡಿ.ವೈ.ಎಸ್.ಪಿ ಪರಶುರಾಮ್ ಸಾಹೇಬರಿಗೆ ಪೋನ್ ಮಾಡಿದ್ರು. ಅದೇ ರೀತಿ ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಹಾಗು ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಗೂ ಮಾಹಿತಿ ರವಾನೆ ಮಾಡಿದ್ರು.
ಯಾವುದಕ್ಕೂ ಇರಲಿ ಅಂತಾ ಒಂದೆರೆಡು ಟಿ.ವಿ ಚಾನೆಲ್ ಗೂ  ವಿಷಯ ತಿಳಿಸಿದ್ದರು. ಅಷ್ಟೊತ್ತಿಗಾಗಲೇ ವಿಷಯ ಹಳ್ಳಿಯಿಂದ ಹಳ್ಳಗೆ ಹರಡಿದ್ದ ಕಾರಣ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಆ ಐವರು ಅಗಂತುಕರನ್ನು ಊರಿನ ಸಮುದಾಯ ಭವನದ ಬಳಿ ಕಟ್ಟಿ ಹಾಕಲಾಗಿತ್ತು.
   ಅರ್ಧ ಘಂಟೆಯ ಒಳಗೆ ಅತ್ತೀಚೌಡೇನಹಳ್ಳಿ ಗ್ರಾಮಕ್ಕೆ ಪೊಲೀಸರ ಸೈನ್ಯವೇ ಧಾಳಿಯಿಟ್ಟಿತ್ತು. ಹಾಗೇ ತನಿಖೆ ನಡೆಸಿದ ಪೊಲೀಸರಿಗೆ ಆ ಐವರು ಕೂಡ ಪೊಲೀಸ್ ಪೇದೆಗಳು, ಸಕ್ಕರೆ ಲಾರಿಯೊಂದನ್ನು ಕದ್ದು ಈ ಗ್ರಾಮಕ್ಕೆ ತಂದಿರುವ ಖಚಿತ ಮಾಹಿತಿ ಆಧರಿಸಿ ಕಳ್ಳನನ್ನು ಹುಡುಕಿಕೊಂಡು ಬಂದಿದ್ದಾರೆ ಅನ್ನೋ ವಾಸ್ತವ ಸ್ಥಿತಿ ಅರಿವಾಗಿತ್ತು.
     ಸಿ.ಪಿ.ಐ ಗೋಪಾಲ್ ನಾಯಕ್ ಸಾಹೇಬರಿಗೆ ಕೆಂಡದಂತ ಕೋಪ. ಪೊಲೀಸರನ್ನೇ ಕಟ್ಟಿ ಹಾಕಿ ಥಳಿಸೋದು ಅಂದ್ರೇ ಸಾಮಾನ್ಯಾನಾ......?! ಯಾರಯ್ಯಾ ಹೊಡೆದೋವ್ರೂ....? ಅಂತ ಎಗರಾಡ ತೊಡಗಿದರು. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಗಲಾಟೆ ಜೋರಾಗತೊಡಗಿತು. ಯಾರೋ ಕಿಡಿಗೇಡಿಗಳು ಕಲ್ಲು ತೂರಾಡತೊಡಗಿದರು. ಇದರಿಂದ ಪೊಲೀಸರ ಜೀಪ್ ಗಳು, ಕ್ಯಾಮೆರಾಗಳು ಪುಡಿಯಾದವು. ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು.
      ಇವೆಲ್ಲಾ ಗಲಾಟೆಗಳ ನಡುವೆ ಆ ಊರಿನ ಆಕೃತಿಯೊಂದು ಕತ್ತಲಲ್ಲಿ ಮರೆಯಾಗಿ ಹೋಯ್ತು. ಆತ ದಾವಣಗೆರೆಯಿಂದ ಸಕ್ಕರೆ ಲಾರಿ ಕದ್ದು ತಂದಿದ್ದ ಕಳ್ಳ.............,
     ಈಗ ಪೊಲೀಸರು ಆ ರಾತ್ರಿ ಗಲಾಟೆ ಸಮಯದಲ್ಲಿ ತೆಗೆದ ಪೋಟೋಗಳನ್ನು ಹಿಡಿದು ಕಲ್ಲು ತೂರಿದ ಕಿಡಿಗೇಡಿಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಈಗಾಗಲೇ ಊರು ಬಿಟ್ಟಿದ್ದಾರೆ.

No comments: