Monday, February 13, 2012

ಸೆರೆ.......,

ನೀ ಅಂದುಕೊಂಡಂತೇ ಯಾವುದೂ ಆಗಲಾರದು. ಬೇಡದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದೀಯಾ...., ಸುಮ್ಮನೆ ನಮ್ಮ ಜೊತೆ ಹೊರಡು ಅಪಾಯ ಹತ್ತಿರದಲ್ಲಿದೆ.....,
       ದೊಡ್ಡನ ಮಾತು ಕೇಳಿದರೂ ಕೇಳದವನಂತೆ ಗುಂಡ ಮೊರದಗಲದ ಕಿವಿಯಲುಗಾಡಿಸತೊಡಗಿದ.  ಅವನಿಗೆ ದೊಡ್ಡನ ಸಹವಾಸದಿಂದ ಹೊರಬಂದರೆ ಸಾಕು ಎಂಬಂತಾಗಿತ್ತು. ಯಾವಾಗಲೂ ಉಪದೇಶ ಮಾಡುತ್ತಾನೆ.., ಒಕ್ಕಣ್ಣ   ಇವನು. ಹೆಜ್ಜೆ ಇಡಬೇಕಾದರೂ ಬಗ್ಗಿ ನೆಲ ನೋಡಿ ನಡೆಯುತ್ತಾನೆ. ಇರುವೆಗಳನ್ನೂ ಕೊಲ್ಲದ ಪರಮ ಸಾಧು. ಆದರೂ ಜನ  ಇವನತ್ತ ಅನುಮಾನದ ನೋಟ ಬೀರುತ್ತಾರೆ.  ದೇಹದ ಗಾತ್ರದಲ್ಲಿ ಇಬ್ಬರೂ ಒಂದೇ ರೀತಿ ಇದ್ದೇವೆ. ಅವನಿಗೆ 60 ರ  ಆಜುಬಾಜು.., ನಾನಿನ್ನೂ ಇಪ್ಪತ್ತರ ತರುಣ.  ಹೊಳೆದಂಡೆಯಲ್ಲಿ ಸ್ನಾನ ಮಾಡಿ ಬಂದು ನಾ ನಿಂತರೆ ಮಿರ ಮಿರ ಮಿಂಚುವ ನನ್ನ ಅಂಗಸೌಷ್ಟವಕ್ಕೆ ಹಾಗು ನನ್ನ ಗಡಸುಗಾರಿಕೆಗೆ ಇಪ್ಪತ್ತು ಕಿಲೋಮೀಟರ್ ನಿಂದಲೂ ಮದನೆಯರು ಓಡೋಡಿ ಬರುತ್ತಾರೆ. ನನ್ನನ್ನು ಕಂಡರೆ ಊರ ಜನ ಬಿದ್ದೇನೋ ಕೆಟ್ಟೇನೋ ಅಂತಾ ಕಿರುಚಾಡಿಕೊಂಡು ಓಡುತ್ತಾರೆ.  ನನಗ್ಯಾರ ಭಯ....? ನಾನೇಕೆ ಹೆದರಬೇಕು.....?!.
 ಗುಂಡನ ಮನಸ್ಸಿನಲ್ಲಿ ವಿಚಾರಗಳು ವೇಗವಾಗಿ ಓಡುತ್ತಿದ್ದವು. ಅವನಂತೂ ಈ ಕಾಡು ಬಿಟ್ಟು ಕದಲಲಾರೆ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದು ಬಿಟ್ಟಿದ್ದ.
       ಹೊರಡೋ ಕಂದ..,  ಇನ್ನು ಸಮಯ  ಇಲ್ಲ. ಬೆಳಕಾಗುವ ಮುಂಚೆ ನಾವು ಉಂಬಳಿ ಬೆಟ್ಟ ದಾಟಿ ಕೊಡಗಿನ ಕಾಡನ್ನು ಪ್ರವೇಶ ಮಾಡಬೇಕು. ನನಗೆ ಮೊದಲೇ ಸರಿಯಾಗಿ ದೃಷ್ಟಿ ಇಲ್ಲ..., ನಡೆಯುವ ಶಕ್ತಿ ಕೂಡ ಕಮ್ಮಿಯಾಗಿದೆ....., ದೊಡ್ಡನ ಮಾತು ಗುಂಡನಿಗೆ ಅಸಹನೀಯವಾಗತೊಡಗಿತು. ಸೊಂಡಿಲನ್ನು ಮೇಲೆತ್ತಿ ಜೋರಾಗಿ ಘೀಳಿಟ್ಟ ಅವ  ಇಲ್ಲಾ ನಾ ಬರೋಲ್ಲಾ..., ನಾನ್ಯಾಕೆ ಮನುಷ್ಯರಿಗೆ ಹೆದರಲಿ...? ಅವರಿಂದ ಏನೂ ಮಾಡೋಕೆ ಸಾಧ್ಯವಿಲ್ಲ.
    ಹೊತ್ತಿನ ಜೊತೆಗೆ ಆತಂಕ ಕೂಡ ಹೆಚ್ಚುತ್ತಿದೆ. ಸಹನೆ ಕಳೆದುಕೊಂಡ ದೊಡ್ಡ ತನ್ನ ಕೊಂಬಿನಿಂದ ಗುಂಡನ ತೊಡೆಗೆ ಬಲವಾಗಿ ತಿವಿದ '' ಕಾಗನೂರು, ಮಗ್ಗೆ, ಉಂಬಳಿಬೆಟ್ಟ ಸುತ್ತ ಮುತ್ತ  ಎಷ್ಟು ಮಂದಿ ನರಮಾನವರನ್ನ ಕೊಂದಿಲ್ಲ ನೀನು...? ನಿನ್ನಿಂದ ನಮ್ಮ  ಇಡೀ  ಸಂಕುಲಕ್ಕೇ ಅಪಾಯ ಶುರುವಾಗಿದೆ. ಈಗಾಗಲೇ ವೆಂಕಟೇಶ ಅನ್ನೋ ಮನುಷ್ಯ ನಿನ್ನ ಫೋಟೋ ತೆಗೆದುಕೊಂಡು ಹೋಗಿದ್ದಾನೆ. ನಿನ್ನನ್ನೇ ಸೆರೆ ಹಿಡಿಯೋಕೆ ಅಂತಾ ನೂರಾರು ಜನ ಬಂದಿದ್ದಾರೆ. ಹೊಳೆ ದಡದಲ್ಲಿ ಟೆಂಟ್ ಕೂಡ ಹಾಕಿದ್ದಾರೆ. ನಮ್ಮಿಂದ ಹೊರಹೋಗಿ ಜನರ ಜೊತೆ ಪಳಗಿರೋ ಅಭಿಮನ್ಯು, ಭರತ, ಅರ್ಜುನ, ಮೇರಿ ಸೇರಿದಂತೆ ಹಲವರು ಬಂದಿದ್ದಾರೆ. ಕಾಡನ್ನ ಕಾಯೋ ಮಂದಣ್ಣ ನಿನ್ನನ್ನ ಹಿಡಿಯದೇ ಈ ಜಾಗ ಬಿಟ್ಟು ಕದಲೋದಿಲ್ಲ ಅಂತಾ ಪ್ರಮಾಣ ಮಾಡಿದ್ದಾರೆ  ಹೀಗಿದ್ರೂ ಹುಡುಗಾಟ ಆಡ್ತೀಯಾ....? ಸುಮ್ಮನೇ ನಮ್ಮ ತಂಡದ ಜೊತೆ ನಡೆಯೋದು ಕಲಿ..,..., ಅಧಿಕಾರಯುತವಾಗಿ ಗದರಿದ. ಆದರೆ ಅದಾಗಲೇ ಸೊಕ್ಕಿ ಹೋಗಿದ್ದ ಗುಂಡನಿಗೆ ದೊಡ್ಡನ  ಈ ಯಾವುದೇ ಮಾತುಗಳು ಕಿವಿಯ ಮೇಲೆ ಬೀಳಲ್ಲಿಲ್ಲ. ಬದಲಿಗೆ ಆತ ಕಾಲು ಕೆದರಿ ದೊಡ್ಡನ ವಿರುದ್ದವೇ ಯುದ್ದಕ್ಕೆ ನಿಂತ. ದೊಡ್ಡನ ಒಕ್ಕಣ್ಣಿನಲ್ಲಿ ಹತಾಷೆಯ ಕಣ್ಣೀರು ಧಾರೆಯಾಗಿ ಸುರಿಯತೊಡಗಿತು.
         ವಂಶೋದ್ದಾರಕನಿವನು....., ಇರುವವರ ಪೈಕಿ ಅತ್ಯಂತ ಎತ್ತರ ಹಾಗು ಬಲಶಾಲಿ. ಆದ್ರೆ ಅಭಿಮನ್ಯುವಿನ ತಂಡದ ಎದುರು ಇವನ ಆಟ ನಡೆಯುವುದಿಲ್ಲ. ಹಠಕ್ಕೆ ಬಿದ್ದು ಅನ್ಯಾಯವಾಗಿ ಸೆರೆ ಸಿಗುತ್ತಾನೆ....., ಇಲ್ಲಾ ಇಲ್ಲಾ ಹಾಗಾಗಬಾರದು.  ಎಂದು ಅದೇನೋ ಲೆಕ್ಕಾಚಾರ ಹಾಕಿಕೊಂಡ ದೊಡ್ಡ ಅ್ಲಲಿಂದ ಹತ್ತು ಹೆಜ್ಜೆ ಮುಂದೆ ನಡೆದು ತನ್ನ ಹಿಂಡನ್ನು ತಲುಪಿದ. ನಂತರ ಚೋಮನಿಗೆ ಹಿಂಡಿನ  ಉಸ್ತುವಾರಿ ವಹಿಸಿ ಕೊಡಗಿನ ಕಾಡಿಗೆ ತೆರಳುವಂತೆ ಹೇಳಿ ಕಳುಹಿಸಿದ. ದೊಡ್ಡನ ಅಪ್ಪಣೆ ಮೇರೆಗೆ ಇಪ್ಪತ್ತೈದು ಆನೆಗಳು ಕೊಡಗಿನತ್ತ ಹೆಜ್ಜೆ ಹಾಕಿದವು.
   ಅದೊಂದು ರಾತ್ರಿ ಹತಾಷೆಯ ಜೊತೆಗೆ ಅತ್ಯಂತ ಭಾರವಾಗಿ ಕಳೆದು ಹೋಯಿತು. ಮರುದಿನ ಬೆಳಿಗ್ಗೆ ಉಂಬಳಿ ಬೆಟ್ಟದ ಸಮೀಪ ಜನರು ಗಿಜಿಗುಡುವ ಸದ್ದು....., ದೊಡ್ಡನನ್ನು ಕಂಡರೂ ಕಾಣದಂತೆ ಗುಂಡ ಕಾಡಿನಲ್ಲಿ ಬಗನೇ ಮರವನ್ನು ಮುರಿದು ತಿನ್ನುವುದರಲ್ಲಿ ತಲ್ಲೀನನಾಗಿದ್ದ.  ಅವನಿಂದ ಸ್ವಲ್ಪ ದೂರದಲ್ಲಿ ದೊಡ್ಡ ನಿಂತುಕೊಂಡಿದ್ದ.
     ಆಗ ಅವರಿಬ್ಬರ ನಡುವಿನ ಮೌನವನ್ನು ಭೇದಿಸುವಂತೆ ಗುಂಡಿನ ಭಾರೀ ಸದ್ದೊಂದು ಅಲ್ಲಿ ಪ್ರತಿಧ್ವನಿಸಿತು. ಗಾಬರಿಗೊಂಡ ಗುಂಡ ತಲೆಯೆತ್ತಿ ನೋಡಿದರೆ ಅಲ್ಲಿ ದೂರದಲ್ಲಿ ಕೋವಿ ಹಿಡಿದು ನಿಂತಿದ್ದ ಮನುಷ್ಯ ವೆಂಕಟೇಶ್ ಕಂಡ. ಇತ್ತ ಒಕ್ಕಣ್ಣ ದೊಡ್ಡ ಹುಚ್ಚೇರಿದಂತೆ ಕಾಡಿನೊಳಗೆ ಓಡತೊಡಗಿದ. ನೂರಾರು ಮಂದಿ ಮನುಷ್ಯರು ಅವನ ಹಿಂದೆ ಓಡತೊಡಗಿದರು. ಪ್ರಜ್ಞೆ ತಪ್ಪಿ ಬಿದ್ದ ದೊಡ್ಡನ ಮೇಲೆ ಕೆಲವರು ಜೋರಾಗಿ ನೀರು ಸುರಿಯುತ್ತಿದ್ದರೆ ಮತ್ತೆ ಕೆಲವರು ಅವನ ಬಾಲದಲ್ಲಿದ್ದ ಕೂದಲು ಕಿತ್ತುಕೊಳ್ಳತೊಡಗಿದ್ದರು. ಹೆದರಿದ ಗುಂಡ ಪೊದೆಗಳ ಮರೆಯಲ್ಲಿ ಅವಿತುಕೊಂಡ
        ಸಂಜೆಯ ಸುಮಾರಿಗೆ ದೂರದ ಗದ್ದೆಯೊಂದರಲ್ಲಿ ಅಭಿಮನ್ಯು ನೇತೃತ್ವದಲ್ಲಿ ನಾಲ್ಕಾರು ಆನೆಗಳು ದೊಡ್ಡನನ್ನು ತಿವಿದು ತಿವಿದು ಎಳೆದುಕೊಂಡು ಹೋಗುತ್ತಿದ್ದವು. ಅವನ ಕಾಲಿಗೆ ದೊಡ್ಡ ಸೆಣಬಿನ ಹಗ್ಗವನ್ನು ಬಿಗಿಯಲಾಗಿತ್ತು. ನೋವು ತಡೆಯಲಾರದೇ ಅವ ಚೀರಾಡುತ್ತಿದ್ದ.  '' ಗುಂಡಾ..., ಈಗಲಾದರೂ ಓಡು.. ತಪ್ಪಿಸಿಕೋ.. ಈ ಜನರು ನನ್ನನ್ನ ನೀನು ಅಂತಾ ತಿಳಿದುಕೊಂಡಿದ್ದಾರೆ...., ನಾ ನಿನಗಾಗಿ ಸೆರೆ ಸಿಕ್ಕಿದ್ದೇನೆ....ಓಡು...ಓಡು ತಪ್ಪಿಸಿಕೋ.....''
    ಅಭಿಮನ್ಯುವಿಗೆ ಎಲ್ಲಾ ಅರ್ಥವಾಗಿದ್ದರೂ ಮನುಷ್ಯರಿಗೆ ಅದನ್ನು ಹೇಳಲು ಸಾಧ್ಯವಿಲ್ಲ.  ಅಕಸ್ಮಾತ್ ಈತನನ್ನು ತಿವಿಯದೇ ಇದ್ದರೆ ಮೇಲಿರುವ ಮಾವುತ ಅಂಕುಶದಿಂದ ನನ್ನನ್ನು ತಿವಿಯುತ್ತಾನೆ..., ಹಾಗೆಂದುಕೊಂಡು ತನ್ನ ಕೆಲಸ ಮುಂದುವರೆಸಿದ
  ನೋವು ತಾಳದ ದೊಡ್ಡ ಘೀಳಿಡುತ್ತಲೇ ಇದ್ದ. ಕೊಡಗಿನ ಕಾಡಿನತ್ತ ಹೆಜ್ಜೆ ಹಾಕುತ್ತಿದ್ದ ಗುಂಡನ ಕಣ್ಣ ತುಂಬಾ ನೀರು ತುಂಬಿಕೊಂಡಿತ್ತು.

No comments: