Tuesday, February 21, 2012

ಅಬಲೆ.....,

ಪತ್ರಿಕೆಗಳ ಮೇಲೆ ಕಣ್ಣು ಹಾಯಿಸುತ್ತಿದ್ದ ವಿಕಾಸ್ ಇನ್ನೇನು ಮನೆಗೆ ಹೊರಡಬೇಕು ಎಂದುಕೊಳ್ಳುವಷ್ಟರಲ್ಲಿ ಆ ಯುವತಿ ಕಛೇರಿಯ ಒಳಗಡಿಯಿಟ್ಟಳು. ಸುಮಾರು 22 ರಿಂದ 26 ರ ವೊಳಗಿನ ತರುಣಿ.  ವಿಷಾದ ತುಂಬಿದ್ದ ಅವಳ ಮುಖವನ್ನು ಕಂಡಾಕ್ಷಣವೇ ಇದು ಲವ್ ಫೆಲ್ಯೂರ್ ಕೇಸ್ ಇರಬೇಕು ಅನ್ನೋದು ಅವನಿಗೆ ಹೊಳೆದಿತ್ತು. '' ಸಾರ್, ವಿಕಾಸ್ ಅಂದ್ರೆ ನೀವೇನಾ...? ಮೌನ ಮುರಿದ ಹುಡುಗಿಗೆ ಆತ ಹೌದು ಎನ್ನುವ ಉತ್ತರ ಕೊಟ್ಟ. ಹೇಳಿ ಏನಾಗಬೇಕು....?
   ಸಾರ್..., ಹಾಗೆಂದ ಆಕೆ  ಕೆಲಕಾಲ ಜೋರಾಗಿ ಅಳಲಾರಂಭಿಸಿದಳು. ವಿಕಾಸ್ ಆಕೆಯನ್ನು ತಡೆಯುವ ಪ್ರಯತ್ನ ಮಾಡಲ್ಲಿಲ್ಲ. ಯಾಕೇಂದ್ರೆ ಆಕೆಯ ಮನಸ್ಸು ಹಗುರಾಗುವವರೆಗೆ ಅವಳು ಅಳದಿದ್ದರೆ ಪೂರ್ತಿ ಕಥೆ ಕೇಳಲು ಇಡೀ ದಿನ ಬೇಕಾಗುತ್ತೆ. ತನ್ನಷ್ಟಕ್ಕೆ ತನ್ನನ್ನು ಸಮಾಧಾನ ಮಾಡಿಕೊಂಡ ಅವಳು ಮಾತಿಗೆ ಶುರುವಿಕ್ಕಿಕೊಂಡಳು.
ಸಾರ್ ನನ್ನ ಹೆಸರು ನಯನ ಅಂತಾ, ಹೊಳೆನರಸೀಪುರದವಳು.  ಚನ್ನಪ್ಪ ಹಾಗು ಸುಮಿತ್ರ ಅನ್ನೋ ಲಿಂಗಾಯಿತ ದಂಪತಿಗಳು ನನ್ನನ್ನ ಬಾಲ್ಯದಲ್ಲೇ ದತ್ತು ತೆಗೆದುಕೊಂಡು ಸಾಕಿ ಬೆಳೆಸಿದ್ದಾರೆ. ನಾನು ಕೆಲಸ ಮಾಡುತ್ತಿದ್ದ ಕಂಪೆನಿಯಲ್ಲಿ ಅಶೋಕ ಅನ್ನೋ ನೀಚ ನನ್ನನ್ನು ಕಳೆದ 9 ವರ್ಷಗಳಿಂದ ಪ್ರೀತಿ ಮಾಡ್ತಾ ಇದ್ದ. ......, ಆಕೆ ಮಾತನಾಡುತ್ತಿದ್ದಾಗ ವಿಕಾಸ್ ಕಛೇರಿಯ ಜವಾನ ಕೀರ್ತಿ ಒಳಗಡಿಯಿಟ್ಟ. ಆತನನ್ನು ಕಂಡ ನಯನ ಕೆಲಕಾಲ ವಿಚಲಿತಳಾದಳು.  ಅರ್ಧಕ್ಕೇ ಮಾತು ತುಂಡರಿಸಿದ ಅವಳು ಸಾರ್ ನಾನು ಬರ್ತೀನಿ ಸಾರ್ ನಿಮ್ಮತ್ರ ಇನ್ನೊಂದ್ಸಲ ಫೋನ್ ಮಾಡಿ ಮಾತಾಡ್ತೀನಿ ಅಂತಾ ಹೊರಡೋಕೆ ಪ್ರಯತ್ನಿಸಿದಳು. ಆದರೆ ಆಕೆಯನ್ನು ತಡೆದ ವಿಕಾಸ್ ಕುಳಿತುಕೊಳ್ಳುವಂತೆ ಸೂಚಿಸಿ ಕೀರ್ತಿಗೆ ಬೇರೆ ಕೆಲಸ ಹಚ್ಚಿ ಹೊರಗಟ್ಟಿದ. ಆತ ಹೊರಹೋದ ನಂತರ ನಯನ ಮತ್ತೆ ತನ್ನ ಕಥೆ ಮುಂದುವರೆಸಿದಳು
  ಪ್ರೀತಿ ಅನ್ನೋ ಹೆಸರಲ್ಲಿ ನನ್ನನ್ನು ತನ್ನಿಷ್ಟ ಬಂದಂತೆ ಬಳಸಿಕೊಂಡ ಅಶೋಕ ನನ್ನ ಹತ್ರ ಸಾಕಷ್ಟು ಹಣ ತಗೋಂಡು ಮಜಾ ಉಡಾಯಿಸ್ತಾ ಇದ್ದ. ಆದ್ರೆ ಮದುವೆ ವಿಚಾರ ಬಂದಾಗ ಮಾತ್ರ ಏನೇನೋ ಸಬೂಬು ಹೇಳಿ ಜಾರಿಕೊಳ್ತಾ ಇದ್ದ. ಕಳೆದ ಏಳು ತಿಂಗಳ ಹಿಂದೆ ಅವನಿಗೆ ಅವನ ಮನೆಯಲ್ಲಿ ಮದುವೆ ಮಾಡೋ ಏರ್ಪಾಟು ನಡಿತಾ ಇದೇ ಅಂತಾ ಗೊತ್ತಾದಾಗ ರಂಪ ಮಾಡಿದೆ. ಅದಕ್ಕೆ ಅವನು ನನ್ನನ್ನ ಬೆಂಗಳೂರಿನ ಮಾಯಸಂದ್ರದಲ್ಲಿರೋ ಮುನೇಶ್ವರ ಟೆಂಪಲ್ ಗೆ ಕರ್ಕೊಂಡು ಹೋಗಿ ಮದುವೆ ಆದ. ಆವಾಗ ತೆಗೆದ ಫೋಟೋಗಳು ಸಾರ್ ಇವು....., ಒಂದಷ್ಟು ಫೋಟೋಗಳನ್ನ ವಿಕಾಸ್ ಟೇಬಲ್ ಮೇಲೆ ಹರವಿದಳು.
ಪೋಟೋಗಳನ್ನು ಸೂಕ್ಷ್ಮವಾಗಿ ನೋಡಿದ ವಿಕಾಸ್ '' ಸರಿ ಮುಂದೇನಾಯ್ತು ಹೇಳಮ್ಮ...'' ಎಂದ.
       ಮದುವೆಯಾದ ತಕ್ಷಣ ಅಮಾಯಕನ ರೀತಿ ನಾಟಕವಾಡಿದ ಅವನು  '' ಮುಂದಿನ ತಿಂಗಳು ನನ್ ತಂಗಿ ಮದುವೆ ಇದೆ. ಅಲ್ಲೀವರೆಗೂ ನೀ ನಿಮ್ಮನೇಲೇ ಇರು. ನಂತ್ರ ನಾನು ನನ್ನ ಮನೆಯವರನ್ನ ಒಪ್ಪಿಸಿ ನಿನ್ನನ್ನ ಕರ್ಕೊಂಡು ಹೋಗ್ತೀನಿ ಅಂತಾ ಗೋಗರೆದ. ನಾನೂ ಅವನ ಮಾತು ನಂಬಿ ಅದರಂತೆ ಮನೆಗೆ ಹೋಗೋಕೆ ಒಪ್ಪಿಕೊಂಡೆ. ಹಾಗೇ ನನ್ನನ್ನು ಮನೆಗೆ ಬಿಟ್ಟ ಅಶೋಕ ಮತ್ತೆ ವಾಪಾಸ್ ಬರಲೇ ಇಲ್ಲ. ಈಗ ಚನ್ನರಾಯಪಟ್ಟಣದ ಬಾಗೇಹೊಳೆ ಗ್ರಾಮದ ಹುಡುಗಿ ಜೊತೆ ಅವನ ಮದುವೆ ತಯಾರಿ ನಡೀತಾ ಇದೆ ಸಾರ್....., ದಯವಿಟ್ಟು ಹೆಲ್ಪ್ ಮಾಡಿ ಸಾರ್....ಆಕೆ ಮತ್ತೆ ಕಣ್ಣೀರಾದಳು.
ಹೇದರಬೇಡಮ್ಮಾ ನಿನ್ನ ಗೋಳಿನ ಕಥೆಯ ಬಗ್ಗೆ ನಾವು ನಮ್ಮ ಪತ್ರಿಕೇಲಿ ಬರೀತೀವಿ. ನೀನು ಹೊಳೆನರಸೀಪುರದ ಡಿ.ವೈ.ಎಸ್.ಪಿ ಸೇರಿದಂತೆ ಅಲ್ಲಿರೋ ಸರ್ಕಲ್ ಇನ್ಸ್ ಪೆಕ್ಟರ್ ಸೂರಪ್ಪನಿಗೆ ಕಂಪ್ಲೇಂಟ್ ಕೊಡು. ಅವರು ನಿನಗೆ ಹೆಲ್ಪ್ ಮಾಡುತ್ತಾರೆ ಎಂದು ಸಲಹೆ  ನೀಡಿದ. ಅಷ್ಟರಲ್ಲಾಗಲೇ ಆಫೀಸಿಗೆ ಮರಳಿದ್ದ ಕೀರ್ತಿ ಬಾಗಿಲ ಮರೆಯಲ್ಲಿ ನರಿಯಂತೆ ನಿಂತು ಕಿವಿಯನ್ನು ಒಳತೂರಿಸಿ ಎಲ್ಲವನ್ನೂ ಕೇಳಿಸಿಕೊಂಡಿದ್ದ.
  ಹೀಗೆ ಪೊಲೀಸ್ ಕಂಪ್ಲೇಂಟ್ ಕೊಡಲು ಹೋದ ನಯನಳಿಗೆ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ ಸಾಥ್ ನೀಡಿದ. ಸೂರಪ್ಪ ಅಶೋಕನನ್ನು ಕರೆಸಿ ಹೀನಾಮಾನವಾಗಿ ಬೈದು ಬುದ್ದಿ ಹೇಳಿದ. ಮದುವೆ ಮಾಡಿಕೊಳ್ಳೋಲ್ಲ ಅಂದ್ರೆ ಅರೆಸ್ಟ್ ಮಾಡುತ್ತೇನೆ ಅಂತಾ ಬೆದರಿಸಿದ. ತನಗಿನ್ನು ಮೋಸವಾಗಲಾರದು ಎಂದು ನಂಬಿದ ನಯನ ನಿಟ್ಟುಸಿರು ಬಿಟ್ಟಳು.
ಅದೊಂದು ರಾತ್ರಿ ಬರೀ ಚರ್ಚೆ, ಮಾತುಕತೆ, ಭರವಸೆಗಳಲ್ಲೇ ಕಳೆದು ಹೋಯಿತು. ಮರುದಿನ ಅಶೋಕನನ್ನು ಕರೆ ತರಲು ಸ್ಟೇಷನ್ ಗೆ ಹೋಗಿದ್ದ ನಯನಳಿಗೆ ಅಚ್ಷರಿ ಕಾದಿತ್ತು. ಅಶೋಕನ ವಿರುದ್ದ ಮಾತನಾಡುತ್ತಿದ್ದ ವಿಜಯಕರ್ನಾಟಕ ಯುವಕ ಸಂಘದ ಅಧ್ಯಕ್ಷ ಜಗದೀಶ '' ಒಂದು ಲಕ್ಷ ಕೊಡಿಸುತ್ತೇನೆ ರಾಜಿ ಮಾಡಿಕೋ..ಅವನು ಇನ್ನೊಂದು ಮದುವೆ ಆಗುತ್ತಾನೆ ಜೊತೆಗೆ ನಿನ್ನನ್ನೂ ಇಟ್ಟುಕೊಳ್ಳುತ್ತಾನೆ ಎಂದ. ಇದನ್ನೊಪ್ಪದ ನಯನ ಅಲ್ಲಿದ್ದ ಸೂರಪ್ಪನ ಬಳಿ ನ್ಯಾಯ ಕೇಳಿದರೆ ಆತ ಅಶೋಕ ತಪ್ಪಿಸಿಕೊಂಡು ಹೋಗಿದ್ದಾನೆ. ನಿನಗೆ ಸಿಕ್ಕರೆ ಹಿಡ್ಕೊಂಡ್ ಬಂದು ಕೊಡು ಕೇಸ್ ಹಾಕುತ್ತೇನೆ ಎಂದ. ನಯನಳಿಗೆ ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ವಿಕಾಸ್ ವಿಕಾಸ ಪತ್ರಿಕೆಯಲ್ಲಿ ಅವಳಂದುಕೊಂಡಂತೆ ಸುದ್ದಿ ಪ್ರಕಟವಾಗಿರಲ್ಲಿಲ್ಲ. ಕೀರ್ತಿ ಹಾಗು ಅಶೋಕ ಬಾಲ್ಯದ ಗೆಳೆಯರಾಗಿದ್ದ ಕಾರಣ ಎಡಿಟರ್ ವಿಕಾಸ್ ನ ಮನವೊಲಿಸುವಲ್ಲಿ ಕೀರ್ತಿ ಯಶಸ್ವೀಯಾಗಿದ್ದ. ವಿಕಾಸ್ ಗೆ 30 ಸಾವಿರ, ಜಗದೀಶನಿಗೆ 20 ಸಾವಿರ, ಸೂರಪ್ಪನಿಗೆ 50 ಸಾವಿರದ ಲೆಕ್ಕದಲ್ಲಿ ಒಂದು ಲಕ್ಷಕ್ಕೆ ಅಮಾಯಕ ಹೆಣ್ಣು ಮಗಳು ನಯನಳ ಬದುಕು ಹರಾಜಾಗಿತ್ತು.

No comments: