Monday, March 26, 2012

ಸಂಜೆಯಾಗಿ ಹೋಗಿದೆ....

   ನಿನ್ನ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಇದೇ ಜಾಗದಲ್ಲಿ ನಾನು ಮತ್ತು ನಿನ್ನ ಅಪ್ಪ ದೊಡ್ಡ ಚಪ್ಪರ ನೆಟ್ಟಿದ್ದೆವು. ಆಗ ಈ ಊರು ಅಷ್ಟೇನೂ ಬೆಳೆದಿರಲ್ಲಿಲ್ಲ, ಅಲ್ಲೊಂದು ಇಲ್ಲೊಂದು ಮನೆ. ಆದರೆ ಚಪ್ಪರದ ತುಂಬಾ ಜನರೋ ಜನ. ನೆಂಟರಿಷ್ಟರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ತುಂಬಾ ಜನ ಬಂದಿದ್ರು......., ಅವತ್ತಿನ ಗೌಜಿ ಕಣ್ಣಿಗೆ ಕಟ್ಟಿದ ಹಾಗಿದೆ.
     ಅಮ್ಮನ ಮುಖದಲ್ಲಿ ಅದೇನೋ ಮಂದಹಾಸ. ಕಣ್ಣುಗಳಲ್ಲಿ ಸಾಕ್ಷಾತ್ ದೇವತೆಯ ಕಳೆ. ಕಳೆದ ಹಲವು ತಿಂಗಳಿನಿಂದ ಮೌನವಾಗಿದ್ದ ಅಮ್ಮ  ತಾನು ಬಾಳಿ ಬದುಕಿದ ಮನೆಯಂಗಳಕ್ಕೆ ಕಾಲಿಟ್ಟ ಕೂಡಲೇ ಮಗುವಾಗಿದ್ದಾರೆ. ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.
    ಏ...ಪುಟ್ಟಾ...., ಇದು ಭಾರೀ ಶಾಮಿಯಾನ ಕಣೋ....., ಇಲ್ಲಿ ಸ್ಟೇಜ್ ಕೂಡ ಹಾಕಿದ್ದಾರೆ. ತುಂಬಾನೆ ಚೆನ್ನಾಗಿದೆ ಮಗ. ಇಲ್ಲಿ ಈಗ ನಿನ್ನ ಮಗನ ಅಲ್ಲಲ್ಲಾ ನನ್ನ ಮಗನ ಹುಟ್ಟು ಹಬ್ಬ ಅಂದ್ರೇ..., ನನಗಂತೂ ಹೆಮ್ಮೇನೇ......, ನಿಮ್ಮಪ್ಪ ಇದ್ದಿದ್ರೇ ಮಿಂಚು..ಮಿಂಚಿನ ಹಾಗೇ ಓಡಾಡಿಕೊಂಡಿರೋರು. ಉತ್ಸಾಹದ ನಡುವೆಯೂ ಅಮ್ಮನ ಕಣ್ಣಿನಾಳದಲ್ಲಿ ನೋವಿನ ಗುರುತು ಮೂಡಿ ಮರೆಯಾಗಿತ್ತು. ಅದುವರೆಗೂ ಸುಮ್ಮನಿದ್ದ ಅವನು ಹೊಸ ಸೀರೆ ಹಾಗು ಅಮ್ಮನ ಒಡವೆಗಳ ಪುಟ್ಟ ಪೆಟ್ಟೆಗೆಯೊಂದನ್ನ ಆಕೆಯ ಮುಂದೆ ಹಿಡಿದ.
    ಅಮ್ಮಾ ......,ನೆಂಟರಿಷ್ಟರು ಬರೋ ಹೊತ್ತಾಯ್ತು. ಹೋಗಿ ಸ್ನಾನ ಮಾಡಿ ಹೊಸಸೀರೆ ಉಟ್ಕೊಂಡು ಬಾ..., ಆಕೆ ಮಗನತ್ತ ದಿಟ್ಟಿಸಿ ನೋಡಿದಳು. ಅವನ ಮೊಗರಾವಿಂದದಲ್ಲಿ ಕಿಂಚಿತ್ತೂ ಕಳೆ ಇಲ್ಲ. ಸೋತು ಜಡ್ಡುಗಟ್ಟಿದ ಮುಖಕ್ಕೆ ಬಣ್ಣ ಬಳಿದಂತಿದೆ.  ಅವನ ನಿಲುವಲ್ಲಿ ಹತಾಷ ಭಾವ ಎದ್ದು ಕಾಣುತ್ತಿದೆ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಅಪ್ಪ ಎದೆಯೊಡೆದು ಸತ್ತ ಅನ್ನೋ ಅಪರಾಧಿ ಭಾವ ಅವನನ್ನು ಇನ್ನೂ ಕಾಡುತ್ತಿದೆ ಎಂದೆಣಿಸತೊಡಗಿತ್ತು. ಆದರೆ ಕೇಳುವಂತಿಲ್ಲ.
    ನೆಂಟರಿಷ್ಟರು, ಗೆಳೆಯರು,ಅವರು, ಇವರು ಎಲ್ಲಾ ಬಂದರು. ಜೋಯಿಸರು ಮಂತ್ರವನ್ನು ಪಠಿಸತೊಡಗಿದರು. ಅವನು ಮಗುವಿನ ಕಿವಿಯಲ್ಲಿ ಆಕಾಶ್, ಆಕಾಶ್, ಆಕಾಶ್ ಅಂತ ಉಸುರಿದ. ನಾಮಕರಣ ಶಾಸ್ತ್ರ ಸಾಂಗ್ಯವಾಯ್ತು. 
    ಬಂದವರಿಗೆಲ್ಲಾ ಹಬ್ಬದ ಅಡುಗೆ. ಮೊಮ್ಮಗುವಿನ ಜೊತೆ ರೇಷ್ಡೆ ಸೀರೆ ಹಾಗು ಚಿನ್ನಾಭರಣ ಧರಿಸಿ ನಿಂತ ಆಕೆಯ ಫೋಟೋ ತೆಗೆದದ್ದೇ ತೆಗೆದದ್ದು. ಬಂದವರಿಗೆಲ್ಲಾ ಆಕೆಯನ್ನು ಕಂಡಾಗ ಅದೇನೋ ಒಂಥರಾ ಆತ್ಮಿಕ ಆನಂದ. ಅಂತಹ ಮಹಾನ್ ಸಾಧ್ವಿ ಅವಳು. ಆಕೆಯ ಪರಿಶ್ರಮದಿಂದ ಈತ ದೊಡ್ಡ ಅಧಿಕಾರಿಯಾಗಿ ಬೆಳೆದು ನಿಂತಿದ್ದಾನೆ. ಊರಲ್ಲೆಲ್ಲಾ ಬಹುದೊಡ್ಡ ಹೆಸರು ಮಾಡಿದ್ದಾನೆ. ತಾಯಿ ಹಾಗು ಮಗ ಎಂದರೆ ಹೀಗಿರಬೇಕು......, ಬಂದವರಲ್ಲಿ ಈ ಮಾತು ಹೇಳದೇ ಯಾರೂ ಹೋಗಿಲ್ಲ.
    ಊರಿನ ಮಂದಿ ಖಾಲಿಯಾದರು. ನೆಂಟರು ಹೊರಟರು. ಆಳುಗಳು ಕೆಲಸ ಮುಗಿಸಿ ಕೈ ಕಟ್ಟಿ ನಿಂತರು. ಎಲ್ಲರಿಗೂ ಹೊರಡುವ ತವಕ. ಅತ್ಯಂತ ಗೌರವಯುತವಾಗಿ ಫಲತಾಂಬೂಲದ ಜೊತೆಗೆ ಈತ ಎಲ್ಲರನ್ನೂ ಬೀಳ್ಕೊಟ್ಟ.  ಮನೆಯಲ್ಲಿದ್ದ ಜನಗಳ ಸಂಖ್ಯೆ ಕರಗಿತ್ತು.
          ಪುಟ್ಟಾ ಅಲ್ಲಿ ಆ ಹಲಸಿನ ಮರ ಇದೆಯಲ್ವಾ...., ಅಲ್ಲಿ ನಾನು ಬಸಲೇಸೊಪ್ಪಿನ ಬಳ್ಳಿ ನೆಟ್ಟಿದ್ದೆ. ನೀ ಆರನೇ ಕ್ಲಾಸ್ ಓದೋವರ್ಗೂ ಆ ಬಳ್ಲಿಯಿಂದ ಕತ್ತರಿಸಿದ ಸೊಪ್ಪನ್ನ ಮಾರಿ ನಿನ್ನನ್ನ.......ಆಕೆಯ ಮಾತು ಮುಂದುವರೆದಿತ್ತು. ಆದರೆ ಅವನಿಗೆ ಅದರಲ್ಲಿ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ದೂರದಲ್ಲಿ ಅವನ ಕೈ ಹಿಡಿದಾಕೆ ಅವನಿಗೆ ಕಣ್ಸನ್ನೆ ಮಾಡಿ ಕರೆದಳು. ಅವನು ಮನೆಯೊಳಗೆ ಹೋದವ ಮತ್ತೆ ಹೊರಗೆ ಬಂದ. ಅಮ್ಮ ಇನ್ನೂ ಏನೋ ಹೇಳುತ್ತಲೇ ಇದ್ದಳು. ಅದನ್ನು ಅರ್ಧಕ್ಕೆ ನಿಲ್ಲಿಸಿದ ಆತ 
   ಅಮ್ಮಾ...., ಹೊರಡೋಣ್ವಾ....? ಅಂತ ವಿನಮ್ರನಾಗಿ ಕೇಳಿದ. ಅವನೆದೆಯಲ್ಲಿ ನೆಟ್ಟ ನೋವಿನ ಶೂಲ ಅಸಹಾಯಕತೆಯ ಚೀತ್ಕಾರವಾಗುವುದೇನೋ ಎಂಬ ಭಯ ಆಕೆಗೆ. ಅವಳು ಮತ್ತಷ್ಟು ಖುಷಿಯಾದಳು.
   ಓ.., ಹೌದಲ್ವಾ...? ಸಂಜೆಯಾಗಿ ಹೋಗಿದೆ........! ಗೊತ್ತೇ ಆಗಿಲ್ಲಾ ನೋಡು. ಹಾಗೆಂದವಳು ಕೋಣೆಯೊಳಗೆ ಹೋಗಿ ಧರಿಸಿದ್ದ ಹೊಸ ಸೀರೆ ಬದಲಾಯಿಸಿ ತಾನು ಮೊದಲು ಉಟ್ಟಿದ್ದ ಹಳೇಯ ಮಾಸಲು ಸೀರೆ ಉಟ್ಟುಕೊಂಡಳು.  ಹಾಗು ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಸೀರೆ ಹಾಗು ಅದನ್ನು ಮಗನ ಕೈಗಿತ್ತಳು. ಅವನು ಅವೆಲ್ಲವನ್ನೂ ತನ್ನ ಹೆಂಡತಿಯ ಕೈಗಿತ್ತ.  ಆಕೆ ಲಗುಬಗೆಯಿಂದ ಒಳಸೇರಿ ಮುಂಬಾಗಿಲು ಹಾಕಿ ಚಿಲಕ ಜಡಿದುಕೊಂಡಳು.
     ಹೈವೇ ಯಲ್ಲಿ ಆತನ ಕಾರು ಓಡುತ್ತಿತ್ತು. ಆತನ ಪಕ್ಕದಲ್ಲಿ ಆತನನ್ನು ಹೆತ್ತತಾಯಿ ಕುಳಿತಿದ್ದಾರೆ. ಏನನ್ನೂ ವ್ಯಕ್ತಪಡಿಸಲಾಗದ ಅಸಹಾಯಕತೆ  ಸ್ಥಿತಿ ಅವನದು. ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗುತ್ತೆ. ಅದನ್ನು ಕಂಡ ಅವನ್ನಮ್ಮ ಯಾಕಪ್ಪಾ ಅಳ್ತಾ ಇದ್ದೀಯಾ...? ಅಂತಾ ಕೇಳುತ್ತಾಳೆ. ಅದಕ್ಕವನು ಇಲ್ಲಾಮ್ಮ ಅಳ್ತಾ ಇಲ್ಲಾ..ಗಾಳಿ ಜೋರಾಗಿ ಬೀಸ್ತಾ ಇದೆ ನೋಡು, ಅದು ಕಣ್ಣಿಗೆ ರಾಚಿ ಕಣ್ಣೀರು ಬರ್ತಾ ಇದೆ ಎನ್ನುತ್ತಾನೆ. ಓ ಹೌದಾ....? ಎನ್ನುತ್ತಾ ಆಕೆ ಸುಮ್ಮನಾಗುತ್ತಾಳೆ. ಇಬ್ಬರಿಗೂ ಅದು ಸುಳ್ಳು ಎನ್ನುವುದು ಗೊತ್ತಿದೆ. ಆದರೆ ಅದನ್ನು ಕೆದಕುತ್ತಾ ಹೋದರೆ ತನ್ನ ಕಂದ ಮತ್ತಷ್ಟು ಕಣ್ಣೀರಾಗುತ್ತಾನಲ್ಲಾ ಎಂದು ಆಕೆ ಸುಮ್ಮನಾಗಿ ಬಿಡುತ್ತಾಳೆ. ಇದು ಆತನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಮಾರಂಭದಲ್ಲೂ ಮರುಕಳಿಸುತ್ತೆ.
    ಆ ಹೈಟೆಕ್ ವೃದ್ದಾಶ್ರಮದ ಎದುರು ಅವನ ಕಾರು ಬರುತ್ತಿದ್ದಂತೇ ಲಗುಬಗೆಯಿಂದ ಓಡಿ ಬಂದ ಸಿಬ್ಬಂದಿ ಬಾಗಿಲು ತೆರೆಯುತ್ತಾರೆ. ಅವ ಕಾರಿನಿಂದಿಳಿದು ಮುಂದಿನ ಡೋರ್ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆ ಅವಕಾಶ ನೀಡದ  ಆ ತಾಯಿ ತಾನೇ ಕಾರಿನಿಂದ ಕೆಳಗಿಳಿದು ಪರ್ವಾಗಿಲ್ಲ ಬಿಡು ಕಂದಾ ಎನ್ನುತ್ತಾರೆ. ಆತನ ಹಾಗು ಆಕೆಯ ಎದೆಗೆ ಒಮ್ಮೆಗೆ ಸಾವಿರ ಸಾವಿರ ಭಲ್ಲೆಗಳು ತಿವಿಯುತ್ತವೆ. ಅಸಾಧ್ಯ ವೇದನೆ......, ಆದರೆ ಇಬ್ಬರೂ ವ್ಯಕ್ತಪಡಿಸಿಕೊಳ್ಲುವುದಿಲ್ಲ.
      ಉಸಿರನ್ನೊಮ್ಮೆ ಎಳೆದುಕೊಂಡ ಆತ ಅಮ್ಮಾ...., ಬರ್ತೀನಮ್ಮಾ..., ಎನ್ನುತ್ತಾನೆ. ಅವನಷ್ಟೇ ತಾಳ್ಮೆಯಿಂದ ಆಕೆ ಕೂಡ ಆಯ್ತು ಪುಟ್ಟಾ ಹೋಗಿ ಬಾ...ಜೋಪಾನ ಮಗನೇ ಎನ್ನುತ್ತಾಳೆ. ಇನ್ನೊಂದು ಕ್ಷಣ ಅಲ್ಲಿದ್ದರೂ ಎದೆಯೊಳಗಿರುವ ನೋವಿನ ಕಟ್ಟೆ ಒಡೆದು ಹೋಗುತ್ತೆ...ನಾನಳುವುದನ್ನು ಕಂಡರೆ ಅಮ್ಮನ ಉಸಿರೇ ಉಡುಗಿ ಹೋಗುತ್ತೆ..., ಅವನೆಂದುಕೊಳ್ಳುತ್ತಾನೆ. ಬೇಗ ಹೊರಡು ಕಂದಾ...., ನನ್ನ ಕಣ್ಣೀರು ನಿನ್ನನ್ನು ಮತ್ತಷ್ಟು ದುಃಖಿತನನ್ನಾಗಿಸಬಾರದು ಅಂತಾ ಅವಳೆಂದುಕೊಳ್ಳುತ್ತಾಳೆ.
       ಅಮ್ಮನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅವನು ಹೊರಡುತ್ತಾನೆ. ಕಾರಿನ ಎಲ್ಲಾ ಗ್ಲಾಸ್ ಗಳನ್ನು ಮೇಲೇರಿಸಿಕೊಂಡು ಸ್ಟೀರಿಯೋ ಸದ್ದನ್ನು ಜೋರಾಗಿಸಿ ವೇಗವಾಗಿ ಕಾರು ಚಲಾಯಿಸುತ್ತಾನೆ. ಈಗವನು ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವುದಿಲ್ಲ. ಅಜ್ಞಾತ ಸ್ಥಳದಲ್ಲಿ ಕಾರು ನಿಲ್ಲಿಸಿ ಜೋರಾಗಿ ಅಳುತ್ತಾನೆ. ಕಿರುಚುತ್ತಾನೆ. ಎದೆ ಎದೆ ಬಡಿದುಕೊಳ್ಳುತ್ತಾನೆ. ವೃದ್ದಾಶ್ರಮದ ಕೊಠಡಿಯ ಮೂಲೆಯಲ್ಲಿ ಕುಳಿತ ಅವನಮ್ಮ  ಕೂಡ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಂದಾ ನೀ ಅಳಬೇಡ ಚೆನ್ನಾಗಿರು. ನಿನ್ನದೇನು ತಪ್ಪಿಲ್ಲ ಅನ್ನೋದು ನನಗೆ ಗೊತ್ತಿದೆ ಎಂದು ಹಾರೈಸುತ್ತಾಳೆ. ಅದೊಂದು ಸಂಜೆ ಹಾಗೆ ದುಃಖದ ಹನಿಗಳ ಜೊತೆಗೆ ಜಾರಿ ಹೋಗುತ್ತೆ.


       

Monday, March 19, 2012

ಹೆಣ್ಣು ಬೇಟೆ...,

ಅವಳೊಮ್ಮೆ ಉಸಿರು ಬಿಗಿ ಹಿಡಿದು ಆ ಆಳದತ್ತ ಕಣ್ಣು ಹಾಯಿಸಿದಳು.....,
      ಹಚ್ಚ ಹಸಿರು....., ತಂಗಾಳಿಯ ನಡುವೆ ಹಕ್ಕಿಗಳ ಕಲರವ......, ಉನ್ಮಾದದ ಉತ್ತುಂಗ.....,  ಚೆಲುವನ್ನೆಲ್ಲಾ ಒಡಲಲ್ಲಿ ತುಂಬಿಕೊಂಡಿರುವ ರಕ್ಕಸ ಗುಂಡಿ ಅದು.  ಬೆರಗು ಸವಿಯುತ್ತವೆ ಕಣ್ಣುಗಳು..., ಆದ್ರೆ ಆ ಆಳದ ಅಳತೆ ಮಾಡಿದರೆ ಎಂಥಹವರ  ಎದೆಯ ನಗಾರಿ ಗುಂಡಿನ ಸದ್ದಿನಂತೆ ಹೊಡೆದುಕೊಳ್ಳುತ್ತೆ.. ಅಂತಹ ಪ್ರಪಾತದ ತಲೆಯ ಮೇಲೆ ಆಕೆ ನಿಂತಿದ್ದಾಳೆ.  ಭಯವಾಯ್ತು. ಆದರೆ ಆ ಭಯವನ್ನು ಮೀರಿಸಿ ಸವಾಲು ಹಾಕಲೇ ಬೇಕು. ಒಂದಡಿ ಮುಂದಿಟ್ಟರೂ ಸಾವಿರ ಸಾವಿರ ಅಡಿಗಳ ಆಳಕ್ಕೆ ಉರುಳಿ ಬೀಳುತ್ತಾಳೆ.  ಹೆಕ್ಕೋದಕ್ಕೆ ಮೂಳೆಗಳೂ ಸಿಗೋಲ್ಲ.  ಸಿಗುತ್ತವೆ ಅಂದ್ರೂ ಆ ಆಳಕ್ಕಿಳಿಯುವ ಗಂಡೆದೆ ಯಾರಿಗೂ ಇಲ್ಲ.
        ಅವಳು ಕಣ್ಮುಚ್ಚಿಕೊಂಡಳು. ಹೌದು, ಎಲ್ಲದಕ್ಕೂ ಅಂತ್ಯ ಹಾಡಲೇ ಬೇಕು. ಅದ್ಕಕಿರುವುದು ಇದೊಂದೇ ಮಾರ್ಗ.ಇನ್ನು ತಡ ಮಾಡಬಾರದು. ದೇಹವೆಲ್ಲಾ ಕಿವಿಯಾಯ್ತು...ಯಾವುದೋ ಸದ್ದಿನ ಕಾತುರ....., ಅಂತರಂಗದ ತುಂಬಾ ತಹತಹ.
      ದೂರದಲ್ಲೆಲ್ಲೋ ಕಿಟಾರನೆ ಹುಡುಗಿ ಕಿರುಚಿದ ಸದ್ದು. ಅಯ್ಯಯ್ಯೋ...ಅಣ್ಣಾ ನಿಮ್ ಕಾಲ್ ಹಿಡಿತೀನಿ..., ಬಿಟ್ ಬಿಡಿ ಪ್ಲೀಸ್......, ಇವಳಿಗೆ ಆ ಸದ್ದು ಕೇಳುತ್ತಿದೆ. ಅದು ಅಸಹನೀಯವಾಗಿ ಮುಂದುವರೆಯುತ್ತಿದೆ. ಅಲ್ಯಾರೋ ಪೋಟೋ ತೆಗೀತಾ ಇದಾರೆ. ಮೊಬೈಲ್ ನಲ್ಲಿ ತಮ್ಮ ವಿಕೃತಗಳ ವಿಡಿಯೋ ಮಾಡಿಕೊಳ್ಳುತ್ತಿದ್ದಾರೆ. ಅವಳು ಅಸಹಾಯಕತೆಯಿಂದ ಕೂಗುತ್ತಿದ್ದಾಳೆ. ಆಕೆಯ ಜೊತೆಗಿದ್ದ ಆಕೆಯ ಪ್ರಿಯಕರ ಈ ದುಷ್ಟರ ಎದುರು ಮುದುಡಿ ಹೋಗಿದ್ದಾನೆ. ಅವಳು ಕಿರುಚುತ್ತಿದ್ದಾಳೆ. ಇವಳ ಮುಚ್ಚಿದ ಕಣ್ಣೆವೆ ಛೇದಿಸಿ ಹನಿಗಳು ಕೆನ್ನೆಗಳ ಮೇಲೆ ಅಸಹಾಯಕತೆಯ ಗೆರೆ ಬರೆಯುತ್ತಿವೆ.
      ಅಷ್ಟರಲ್ಲಿ ಅವರಲ್ಲೊಬ್ಬ ಇವಳನ್ನು ನೋಡಿದ. ಎತ್ತರದ ನಿಲುವು...., ಸುಂದರ ಮೈಕಟ್ಟು.., ಬಳುಕುವ ಬಳ್ಳಿಯಂತಿರುವ ಇವಳು ಸುಂದರಿ ಎನ್ನುವುದರಲ್ಲಿ  ಎರಡು ಮಾತೇ ಇಲ್ಲ. ಅವರು ಆ ಹುಡುಗಿಯನ್ನು ಕೈ ಬಿಟ್ಟು ಇವಳ ಬಳಿ ಓಡೋಡಿ ಬಂದರು. ಕಾಡುಮೃಗಗಳಿಂದ ತಪ್ಪಿಸಿಕೊಂಡಂತೆ ಇವರ ಕೈಗೆ ಸಿಲುಕಿ ನಲುಗುತ್ತಿದ್ದ ಹುಡುಗಿ ಹಾಗು ಆಕೆಯ ಪ್ರಿಯಕರ ಕಾಡಿನಿಂದ ಊರಿನತ್ತ ಓಟ ಕಿತ್ತರು.
    ವಾವ್.......! ಎಂತಾ ಚೆಂದ ಇದ್ದೀ ಮಾರಾಯ್ತೀ...? ಇಷ್ಟೊಳ್ಳೇ ದೇಹಸಿರಿ ಇಟ್ಕೊಂಡು ಸಾಯೋಕ್ ಹೋಯ್ತೀದ್ದೀ....?! ಅಲಲಲೇ ....., ನಾವ್ ಬಿಟ್ಟೇವೆ ನಿನ್ನಾ....., ಹೆಂಗಿದ್ರೂ ಸಾಯ್ತೀ... ಸಾಯೋಕು ಮುನ್ನಾ ನಮ್ಗೊಂದಿಷ್ಟು ರಸದೌತಣ ಬಡಿಸು....., ಅವ ಆಕೆಯ ಹೆಗಲ ಮೇಲೆ ಕೈಯಿಟ್ಟ. ಅವಳು ಕಣ್ಬಿಟ್ಟಳು.
       ನಾಲ್ವರು ಹಸಿದ ಕಾಮಿಗಳು. ಒಬ್ಬಳೇ ಒಬ್ಬಳು ಸುಂದರಾಂಗಿ. ಸಿನೆಮಾ ತಾರೆಯರನ್ನೂ ಮೀರಿಸುವ ಚೆಲುವೆ ಅವಳು. ಪ್ರತಿಭಟಸೋಕೆ ಧ್ವನಿ ಇಲ್ಲ. ಅದರ ಅಗತ್ಯವೂ ಆಕೆಗೆ ಇದ್ದಂತಿರಲ್ಲಿಲ್ಲ. ನಿರ್ಭಾವುಕಳಾಗಿ ಅವರತ್ತ ನೋಡಿದಳು. ಅವರಿಗೆ ಕಾಯುವಷ್ಟು ಸಮಾಧಾನವೇ  ಇರಲ್ಲಿಲ್ಲ. ಅನಾಮತ್ತಾಗಿ ಆಕೆಯನ್ನು ಕಾಡಿನೊಳಗೆ ಹೊತ್ತೊಯ್ದ ಅವರು ಒಬ್ಬರ ನಂತರ ಒಬ್ಬರಂತೆ ಆಕೆಯ ಮೇಲೆರಗಿದರು. ಅವಳು ಪ್ರತಿಭಟಿಸಲ್ಲಿಲ್ಲ, ಕೂಗಾಡಲ್ಲಿಲ್ಲ, ಕನಿಷ್ಟ ಪಕ್ಷ ಒಂದು ಹನಿ ಕಣ್ಣೀರು ಕೂಡ ಆಕೆಯ ಕಣ್ಣಿನಿಂದ ಉದುರಲ್ಲಿಲ್ಲ.
     ಎಲ್ಲಾ ಮುಗಿದ ಮೇಲೆ ಅವರೆಲ್ಲಾ ಬಹಳ ದಣಿದಿದ್ದರು. ಒಂದೆಡೆ ಕುಳಿತು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದರು. ಅದುವರೆಗೂ ನಿರ್ಭಾವುಕಳಾಗಿದ್ದ ಆಕೆಯಲ್ಲಿ ಆಗ ಅದ್ಯಾವುದೋ ಜೀವಸಂಚಾರವಾದಂತೆ ಕಂಡು ಬಂತು. ಅವ್ಯಕ್ತ ತೃಪ್ತಿ ಸಣ್ಣ ನಗುವಾಗಿ ತುಟಿಯ ಮೇಲೆ ಲಾಸ್ಯಾವಾಡತೊಡಗಿತು.
       ತಂಡದ ನಾಯಕನಿಗೆ ಈಕೆಯ ಬಗ್ಗೆ ಅದೇನೋ ಕುತೂಹಲ.  ಅಲ್ವೇ.., ನಾವೆಷ್ಟೋ ಮಂದ್ ಹುಡ್ಗೀರ್ ನೋಡೀವಿ. ಆದ್ರೆ ನೀ ಒಂಥರಾ ವಿಚಿತ್ರ ಇದ್ದೀ ನೋಡು.  ಯಾಕ್ ಸಾಯೋಕ್  ಹೊಂಟೀ....? ಅಂತಾ ಕೆಣಕಿದ.
    ನಾನ್ ಸಾಯೋಕ್ ಹೊಂಟಿದ್ದೇ ಅಂತ್ ನಿಂಗ್ ಯಾರಂದ್ರೂ....? ಕೋಗಿಲೆಯಂತಹ ಧ್ವನಿ. ಅಲ್ಲೀವರೆಗೆ ಸುಮ್ಮನಿದ್ದ ಆಕೆ ಮಾತನಾಡಿದಳು. ಅವರೆಲ್ಲರಿಗೂ ಅಚ್ಚರಿಯೋ ಅಚ್ಚರಿ. ಅವಳು ಮಾತು ಮುಂದುವರೆಸಿದಳು. ಸಾವನ್ನೇ ಬಗಲಲ್ಲಿ ಕಟ್ಟಾಕಿಕೊಂಡಾಕೆ ನಾ. ಆದ್ರೆ ಸಾಯೋಕ್ ಮುನ್ನಾ ಒಳ್ಳೇ ಕೆಲಸ ಮಾಡಿ ಸಾಯೋಣ ಅಂಬುದ್ ನನ್ನಾಸೆ. ಅವಳ ಮಾತು ಒಗೊಟೊಗಟಾಗಿತ್ತು.  '' ಅದೇನಮ್ಮೀ ನಾಲಕ್ ಮಂದಿಗೆ ಸುಖ ಕೊಟ್ ಸಾಯೋಣಾಂತಿದ್ದೀಯೇನ್ ಮತ್ತೆ....., ಅವ ಗಹಗಹಿಸಿ ನಗತೊಡಗಿದ.
    ಅವಳು ನಗತೊಡಗಿದಳು. ಮೊದಲು ಸಣ್ಣದಾಗಿದ್ದ ನಗು ಭೋರ್ಗರೆಯತೊಡಗಿತು. ಹೊಟ್ಟೆ ಹಿಡಿದು ನಗಲಾರಂಭಿಸಿದಳು. ಇವರೆಲ್ಲರಿಗೆ ಅದ್ಯಾವುದೋ ಆತಂಕ... ಎಲ್ಲರ ಹಣೆಗಳ ಮೇಲೆ ಬೆವರು ಹನಿಗಟ್ಟಿದೆ. ತಣ್ಣಗಿದ್ದ ಆ ವಾತಾವರಣ ಯಾಕೋ ಬಿಸಿಯಾಗತೊಡಗಿದೆ. ಅವಳು ಮಾತನಾಡತೊಡಗಿದಳು.
   ಇದೇ ಮೊದಲಲ್ಲೋ ನಾಯಿಗಳ...,  ನಾಲ್ಕು ವರ್ಷದ ಕೆಳಗೆ ನೀವು ನಾಲ್ಕು ಮಂದಿ ನನ್ನನ್ನು ಕೆಡಿಸಿ ನನ್ನ ಗೆಳೆಯ ರಾಹುಲ್ ನನ್ನ ಇದೇ ಗುಂಡಿಗೆ ಎಸೆದಿದ್ರಿ. ನಂತ್ರ ನನ್ನ ನಗ್ನ ದೇಹದ ವಿಡಿಯೋ ಮಾಡಿ ಊರೂರಿಗೆ ಹಂಚಿದ್ರಿ......, ನೆನಪಿದೆಯೇನ್ರೋ....? ಈಗವಳ ಧ್ವನಿಯಲ್ಲಿ ಆಕ್ರೋಶವಿತ್ತು. ಗೆಳೆಯನ ನೆನಪು ಹಾಗು ಪ್ರತಿಕಾರದ ಕೆಚ್ಚು ಎದ್ದು ಕಾಣುತ್ತಿತ್ತು.
      ನೀ...ನೀ... ಅದೇ ಶಂಬಣ್ಣನ ಮಗಳಲ್ವಾ......? ಅವ ಗಾಬರಿಯಿಂದ ಕೇಳಿದ. ಹೌದೋ    ಆ ಶಂಬಣ್ಣನ ಮಗಳೇ ನಾನು. ಅಮ್ಮ ಇಲ್ಲದ ನನಗೆ ಅಪ್ಪನೇ ಎಲ್ಲಾ ಆಗಿದ್ದ. ನೀವು ಮಾಡಿದ ಕೆಲಸದಿಂದ ನೊಂದು ಅವ ವಿಷ ಕುಡಿದು ಸತ್ತ.  ಶೀಲವಂತೆಯಾಗಿ ಬದುಕುತ್ತಿದ್ದ ನನಗೆ ಸಮಾಜ ಸೂಳೆ ಪಟ್ಟ ಕಟ್ಟಿತು. ಅವಳ ಆಕ್ರೋಶ ಹೆಚ್ಚುತ್ತಲೇ ಇತ್ತು.   ಅವನು ಕೋಪ ತಣಿಸಲು ಮಾತು ತುಂಡರಿಸಿದ    ನೀ ಊರ್ ಬಿಟ್ಹೋಗಿಯಲ್ಲಾ..... ....? ಅನ್ನೋಕೆ ಯತ್ನಿಸಿದ
     ಹೇಳ್ತೀನೋ ಕೇಳು...., ಊರ್ ಬಿಟ್ಟ ನಾನು ಗರತಿಯಾಗಿ ಬದುಕ್ಲಿಕ್ಕೆ ಸಾಧ್ಯ ಆಗ್ಲಿಲ್ಲ. ನಾ ಸೂಳೇನೇ ಆದೆ.  ಹಾಳಾಗಿ ಹೋದೆ. ನೀವೂ ಕೂಡ ಇಲ್ಲಿಗೆ ಬರೋ ಹೆಣ್ಣು ಮಕ್ಕಳನ್ನ ಹಾಳು ಮಾಡ್ತಾನೇ ಇದೀರಾ ಅನ್ನೋದು ನನಗೆ ತಿಳೀತು. ಈಗ ಅದನ್ನ ನಿಲ್ಸಿ ಪುಣ್ಯ ಕಟ್ಟಿಕೊಳ್ಳೋಣ ಅಂತ ಬಂದೆ.
      ಈಗ ನಗುವ ಸರದಿ ಆ ನಾಲ್ವರದ್ದು. ಹೇಗೆ ಬೇಕೋ ಹಾಗೆ ನಗಲಾರಂಭಿಸಿದರು. ಹೆಣ್ಣುಗಳ ಬೇಟೆ ನಿಲ್ಲಿಸ್ತೀಯಾ....? ಈಗಷ್ಟೇ ಹದ್ದಿಗೆ ಮಾಂಸ ಆದಂಗೆ ಆಗೋಗಿದ್ದೀಯಾ...., ನೀನು...ನೀನು.....ನಿಲ್ಲುಸ್ತೀಯಾ....?  ಅವಳಲ್ಲಿ ಅಷ್ಟೇ ದೃಢತೆ ಇತ್ತು
     ಪಾಪಿಗಳ....., ನಿಮ್ಮ ಅಂತ್ಯ ಕಾಲ ಬಂದಿದೆ. ನಿಮ್ಮಿಂದ ಹಾಳಾಗಿ ಹೋದ ನನಗೆ ಈಗ ಹೆಚ್.ಐ.ವಿ ಇದೆ. ಈಗ ಸುಖ ಅಂತ ಅಂದ್ಕೊಂಡ್ರಲ್ಲಾ..., ಅದು ನಿಮ್ಮ ಜೀವನದ ಕೊನೇಯ ಸುಖ. ನೀವು ನನ್ನ ಹತ್ತಿರ ಬರುವ ಕೆಲವೇ ನಿಮಿಷಗಳ ಮೊದಲು ನನ್ನ ಕಥೆಯನ್ನ ನಿಮ್ಮೂರ ಮುಖಂಡರಿಗೆ ಹೇಳಿದ್ದೇನೆ. ಇನ್ನು ಈಗ ಏನಾಗಬಹುದು ಅನ್ನೋದನ್ನ ಕೂಡ ವಿವರಿಸಿದ್ದೇನೆ.  ಅವಳ ಮಾತು ಮುಗಿಯುವ ಹಂಥದಲ್ಲಿ ಆ ಊರಿನ ಹಿರಿಯರು ಕಾಡಿನೊಳಕ್ಕೆ ಬಂದರು. ಅವರ ಜೊತೆ ಕಾಡಿನಿಂದ ತಪ್ಪಿಸಿಕೊಂಡು ಹೋಗಿದ್ದ ಯುವ ಪ್ರೇಮಿಗಳು ಇದ್ದರು.
    ಆ ನಂತರ ಅವಳು ಅವರು ಸುತ್ತಮುತ್ತಲ ಕಾಡಿನಲ್ಲಿ ಎ್ಲಲಿಯೂ ಕಾಣ ಸಿಗಲ್ಲಿಲ್ಲ. ಹೆಚ್.ಐ.ವಿ ಪೀಡಿತ ಹೆಣ್ಣುಮಗಳೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದ ವಿಚಾರ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬಿತ್ತು.
   ಆ ರಕ್ಕಸಗುಂಡಿಯಿಂದ ಏನೋ ದುರ್ನಾತ ಬರುತ್ತಿದೆ ಅಂತಾ ಜನ ಅರಣ್ಯಇಲಾಖೆಗೆ ಪದೇ ಪದೇ ದೂರು ನೀಡಿದ್ರೂ ಅವರು ಸ್ಥಳಕ್ಕೆ ಬರುವ ಗೋಜಿಗೆ ಹೋಗಲ್ಲಿಲ್ಲ. ಬದಲಿಗೆ ವಿಚಿತ್ರ ಕಾಯಿಲೆ ಬಂದು ಕೆಲವು ಕಾಡುಪ್ರಾಣಿಗಳು ಮೃತಪಟ್ಟಿವೆ. ಈಗಾಗಲೇ ಅದಕ್ಕೆ ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂಬ ಷರಾ ಬರೆದು ಸುಮ್ಮನಾದ್ರು.

   

Monday, March 5, 2012

ಬಿಗ್ ಟೋಪಿ ಬಜಾರ್....,

ಪುರುಸೊತ್ತು ಇದ್ದಾಗ ಮನೆಯ ಮೂಲೆ ಮೂಲೆಗಳನ್ನೂ ಬಿಡದೆ ಕೆರೆದು ಕ್ಲೀನ್ ಮಾಡುವಾಕೆ ನಮ್ಮತ್ತೆ. ಬೆಳ್ಳಂಬೆಳಗ್ಗಿನ  ಐದೂವರೆಗೆ ಏಳುವ ಅರುವತ್ತೆರೆಡರ ಹರೆಯದ ನನ್ನತ್ತೆ ರತ್ನಮ್ಮ ದೇವರಿಗೆ ಕೈ ಮುಗಿದು ಕೈಯಲ್ಲಿ ಪೊರಕೆ ಹಿಡಿದರೆಂದರೆ ಮುಗೀತು....., ಅಂಗಳ ಹಾಗು ಮನೆ ಗುಡಿಸಿ, ಒರೆಸಿ ಸಾರಿಸಿ ಅಡುಗೆ ಮನೆ ಹೊಕ್ಕುವಾಗ ಹತ್ತೂವರೆ ದಾಟಿರುತ್ತೆ.  ಅದೇನಾಶ್ಚರ್ಯ....?!  ಇವತ್ತು ನನ್ನತ್ತೆ ಜೊತೆ ನನ್ನ ಅರ್ಧಾಂಗಿ ಕೂಡ ಸೇರಿಕೊಂಡಿದ್ದಾಳೆ.  ಇಬ್ಬರೂ ಹಳೇ ಪೊರಕೆಯಿಂದ ಹಿಡಿದು ಸಿಕ್ಕ ಸಿಕ್ಕ ನಿರುಪಯುಕ್ತ ವಸ್ತುಗಳನ್ನೆಲ್ಲಾ ಗುಡ್ಡೆ ಹಾಕುತ್ತಿದ್ದಾರೆ....! ಕುತೂಹಲ ತಡೆಯದ ನಾನು ಲೇ...... ಬೇರೆ ಮನೆಗೇನಾದ್ರೂ ಶಿಪ್ಟ್ ಆಗ್ತಾ ಇದೀವೇನೇ....? ಅಂತಾ ಪ್ರಶ್ನೆ ಮಾಡಿದೆ. ಅದಕ್ಕವಳು ಪೇಪರ್ ಓದ್ತಾ ಇದೀರಾ ತಾನೇ....? ಸುಮ್ನೆ ನಿಮ್ ಕೆಲ್ಸ ನೀವ್ ಮಾಡಿ...,  ಇದು ಕೊನೇಯ ಚೀಲ ತುಂಬಿ ಬಿಡ್ತೀನಿ... ನಮ್ಮ ತಂಟೆಗೆ ಬರಬೇಡಿ...., ಅಂತಾ ಮತ್ತೆ ತನ್ಮಯಳಾಗಿಬಿಡಬೇಕೆ....? ತೀರಾ ಕಸಿವಿಸಿಯಾಯ್ತು.
   ಛಲ  ಬಿಡದ ನಾನು ಅಲ್ವೇ...., ಕೊನೇಯ ಚೀಲ ಅಂತಾ ಇದೀಯ ಮನೇಲಿರೋ ಮತ್ತೊಂದು ನಿರುಪಯುಕ್ತ ಕಾಸ್ಟ್ಲೀ ಹಳೇ ವಸ್ತುವೊಂದನ್ನ ಮರೆತೇ ಬಿಟ್ಟೆಯಲ್ಲಾ....? ಇರು, ಚೀಲ ತರ್ತೀನಿ ..., ಅಂತಾ ಎದ್ದು ಹೊರಟೆ.   ಅದುವರೆಗೂ ತನ್ನದೇ ಲೋಕದಲ್ಲಿ ಕಳೆದು ಹೋಗಿದ್ದ ನನ್ನ ಮನದನ್ನೆ ಹಾಂ, ಏನ್ರೀ ಅದು.....? ಅಂದಾಗ ಗಾಬರಿಬೀಳಬೇಡ್ವೇ..., ಹಳೇ ವಸ್ತುಗಳನ್ನ ತುಂಬ್ತಾ ಇದ್ದಾರಲ್ಲಾ...., ನಿಮ್ಮಮ್ಮ ಅವರನ್ನೂ ತುಂಬಿಬಿಡು ಅಂತಂದು ಎಕರಾಮಕರಾ ಉಗಿಸಿಕೊಂಡೆ.
   ಅಷ್ಟರಲ್ಲಿ ಮನೆ ಮುಂದೆ ಲಾರಿಯೊಂದು ಬಂದು ನಿಂತ ಸದ್ದಾಯಿತು. ನಮ್ಮತ್ತೆ ಖುಷಿಖುಷಿಯಾಗಿ ಹೊರಗೋಡಿದವರೇ ಲಾರಿಯಲ್ಲಿ ಬಂದವರನ್ನು '' ಬನ್ನಿ ಬನ್ನಿ ಒಳಗ್ ಬನ್ನಿ ....., ಅಂತಾ ಸ್ವಾಗತಿಸಿದ್ದಾಯ್ತು.  ಹಾಗೆ ಒಳಗಡಿಯಿಟ್ಟ ಪುಣ್ಯಾತ್ಮರು ನನ್ನ ಅತ್ತೆ ಹಾಗು ನನ್ನಾಕೆ ಜೋಡಿಸಿದ್ದ ಹಳೇಯ ವಸ್ತುಗಳನ್ನೆಲ್ಲಾ ಲೆಕ್ಕ ಹಾಕತೊಡಗಿದರು. ಟೈರ್ ಗೆ ಐವತ್ತು.., ಪೇಪರ್ ಕೇಜಿಗೆ ಮೂವತ್ತು..., ಕಬ್ಬಿಣ  ಎಪ್ಪತ್ತು...., ಅದಕ್ಕಿಷ್ಟು ಇದ್ಕಕಿಷ್ಟು..., ಏನೇನೋ ಲೆಕ್ಕಾಚಾರ. ಪೇಪರ್ ತೂಕ ಮಾಡಲು ಶಾಂತಿನಗರ ಸರ್ಕಲ್ ನಿಂದ ಚಿಕನ್ ಅಂಗಡಿ ಕೀರ್ತಿ ತನ್ನ  ಎಲೆಕ್ಟ್ರಾನಿಕ್ ಸ್ಕೇಲ್ ತಂದು ಕೊಟ್ಟು ಉಪಕಾರ ಮಾಡಿದ. ಸುಮಾರು ಅರ್ಧ ಘಂಟೆ ಲೆಕ್ಕಾಚಾರ ಮಾಡಿದ ಆ ತಂಡದ ಮುಖ್ಯಸ್ಥ ಕಟ್ಟ ಕಡೇಯದಾಗಿ ನನ್ನತ್ತ ನೋಡಿ ಮುಗುಳ್ನಕ್ಕ.
       '' ಸಾರ್ ನಾವು ಬಿಗ್ ಟೋಪಿ ಬಜಾರ್ ನವ್ರು... ನೀವೂ.....ಅದೇ ಇವ್ರಲ್ವಾ....? ಅಂತ ಕಣ್ಣರಳಿಸಿದ. ನಾನೂ ಕೂಡ ಅಷ್ಟೇ ವಿನಮ್ರನಾಗಿ ಹಾಂ...ಹಾಂ...  ನಾನೂ ....ಅದೇ ಅವ್ರೇ...ಅಂತಾ ಕ್ಲಿಯರ್ ಮಾಡಿಬಿಟ್ಟೆ. ಅಷ್ಟಕ್ಕೆ ಮಾತು ನಿಲ್ಲಿಸಿದ ನನ್ನ ಶ್ರೀಮತಿಗೆ ಮೇಡಂ ಎಲ್ಲಾ ಸೇರಿ ನೈನ್ಟೀನ್ ಥೌಸೆಂಡ್  ನೈನ್ ನೈನ್ಟೀಪೈವ್ ಆಗಿದೆ. ಸಾರ್ ನಮಗೆಲ್ಲಾ ಪರಿಚಯ  ಇರೋ ಕಾರಣ ಫೈವ್ ರುಪೀಸ್ ಪ್ರೀ ಇರ್ಲಿ ಬಿಡಿ. ಥಾಂಕ್ಯು ಮೇಡಂ..., ನೀವು ನಮ್ಮ ಬಿಗ್ ಟೋಪಿ ಬಜಾರ್ ಗೆ ಬಂದು ಈ ನೈನ್ಟೀನ್ ಥೌಸೆಂಡ್  ನೈನ್ ನೈನ್ಟೀಪೈವ್ ರುಪೀಸ್ ನ ಕೂಪನ್ ಬಳಸಿ ಶಾಪಿಂಗ್ ಮಾಡ್ ಬಹುದು.  ಓ.ಕೆ ಬೈ ಸಾರ್ ಎನ್ನುತ್ತಾ ಕೈಯಾಡಿಸುತ್ತಿದ್ದವ ಚಪ್ಪಲಿ ಸ್ಟ್ಯಾಂಡ್ ನಲ್ಲಿದ್ದ ನನ್ನ ಕಿತ್ತು ಹೋದ ಹಳೇ ಲೆದರ್ ಚಪ್ಪಲಿಯನ್ನು ಕೈಗೆತಿಕೊಂಡ. ಸರ್, ಇಫ್ ಯೂ ಡೋಂಟ್ ಮೈಂಡ್ ಇದನ್ನೂ ನಾನು ತಗೋಬಹುದಾ....? ಬೂಸ್ಟ್ ಹತ್ತಿದ್ದ ಚಪ್ಪಲಿಯನ್ನು ಅವ ಮೇಲೆತ್ತಿ ಹಿಡಿದುಕೊಂಡು ಕೇಳಿದ ರೀತಿ ನಿಜಕ್ಕೂ ಗಾಬರಿ ಬೀಳಿಸುವಂತಿತ್ತು.
     '' ಅಲ್ಲಯ್ಯಾ ಹಳೇ ಚಪ್ಪಲಿ ಕಣೋ ಅದು...., ಬಿಕ್ಷುಕರೂ ಹಾಕ್ಕೊಳ್ಳೋಲ್ಲಾ...., ದೃಷ್ಟಿ ಕಟ್ಟೋಕೆ ಅಂತಾ ಇಟ್ಟಿದ್ದೆ ಅಂತಾ ಸಮಜಾಯಿಷಿ ನೀಡಿದೆ. ಅದಕ್ಕವನು ನೋ ಸಾರ್ ನಮ್ ಬಿಗ್ ಬಾಸ್ ಗೆ ಇಂತಹ ಹಳೇ ಚಪ್ಪಲಿ, ಹರಿದ ಚಡ್ಡಿ, ಸೇರಿದಂತೆ ಗಬ್ಬು ಗಬ್ಬಾಗಿರುವ ಸಾಮಾನುಗಳೆಂದರೆ ಭಾರೀ ಇಷ್ಟ. ಕ್ಯಾನ್ ಐ ಹ್ಯಾವ್ ಇಟ್ ಪ್ಲೀಸ್ ಅಂತಾ ಗೋಗರೆದ.
   ಪಕ್ಕದಲ್ಲೇ ನಿಂತಿದ್ದ ನನ್ನ ಮಡದಿ ನನ್ನ ಪಕ್ಕೆ ತಿವಿದು '' ರ್ರೀ.., 20 ಸಾವಿರಕ್ಕೆ ಕೂಪನ್ ಕೊಟ್ಟಿದ್ದಾರೆ...ಪಿಟ್ಟಾಸಿ ಥರಾ ಆಡ್ಬೇಡಿ ಕೊಟ್ಬಿಡಿ ಅನ್ನೋ  ಆದೇಶ ನೀಡಿದ್ಲು. ನಾನೂ ಕೂಡ ಹೂಂ ಅಂದುಬಿಟ್ಟೆ.
       ಮರುದಿನ ಸಂಭ್ರಮವೋ ಸಂಭ್ರಮ. ಮಕ್ಕಳು ಮರಿಗಳನ್ನೆಲ್ಲಾ ಕಟ್ಟಿಕೊಂಡು ಬಿಗ್ ಟೋಪಿ ಬಜಾರಿಗೆ ಹೋಗಿದ್ದೇ ಹೋಗಿದ್ದು. 20 ಸಾವಿರದ ಐಟಂಗಳೆಂದರೆ ಸಾಮಾನ್ಯನಾ....? ಓವೆನ್ನೂ..ಕುಕ್ಕರ್ರೂ..., ಪ್ರಿಜ್ಜು...., ಅದೂ ಇದೂ ಎಲ್ಲಾ ಕನಸೋ ಕನಸು. ಬಾಗಿಲಲ್ಲಿ ಸಿಕ್ಕ ಯಾರೋ ಮ್ಯಾನೇಜರ್ '' ಸರ್ ನೀವೂ...? ಉದ್ಘಾರವೆಳೆದ. ನಾನು ತಕ್ಷಣನೇ ಹಾಂ..., ಅವ್ರೇ ನಾನು ಅಂದೆ.
ಸರ್, ಅಕ್ಚುವಲಿ ನಾನು ಈ ಕೂಪನ್ ಬಗ್ಗೆ ನಿಮಗೊಂದಿಷ್ಟು ಎಕ್ಸ್ ಪ್ಲೈನ್ ಮಾಡ್ಬೇಕು ಅಂತ ಶುರುವಿಕ್ಕಿಕೊಂಡ. '' ನಿಮಗೆ ಈ ಕೂಪನ್ ಗಳು ವರ್ಕ್ ಔಟ್ ಆಗ್ಬೇಕು ಅಂತಾ ನಾವು ನಿಮ್ಮ ಖರೀದಿಯ ಮೇಲೆ 30 ಪರ್ಸೇಂಟ್ ಡಿಸ್ಕೌಂಟ್ ಇಟ್ಟಿದ್ದೇವೆ. ಅಂದ್ರೆ ನೀವು ಸಾವಿರ ರೂಪಾಯಿ ಬಿಸಿನೆಸ್ ಮಾಡಿದ್ರೆ ನಿಮ್ಮ ಕೂಪನ್ ಗಳಲ್ಲಿ ಮುನ್ನೂರು ರೂಪಾಯಿ ಲೆಸ್ ಆಗುತ್ತೆ. ಹತ್ತು ಸಾವಿರಕ್ಕೆ ಮೂರುಸಾವಿರ ಇಪ್ಪತ್ತಕ್ಕೆ ಆರು, ಮೂವತ್ತಕ್ಕೆ ಒಂಬತ್ತು.... ಈ ರೀತಿ ಕಮಿಟ್ ಮೆಂಟ್ ಸಾರ್......ಅಂತ ನಸುನಕ್ಕ.        ಅಯ್ಯೋ ನಿನ್ ಕಮಿಟ್ ಮೆಂಟ್ ಗಿಷ್ಟು....., ಅಂತಾ ಮನಸ್ಸಲ್ಲೇ ಅಂದುಕೊಂಡವ ಬಿಗ್ ಟೋಪಿ ಬಜಾರ್ ನ ಮೂರನೇ ಮಹಡಿಯಲ್ಲಿದ್ದ ನನ್ನ ಪತ್ನಿಶಿರೋಮಣಿಯತ್ತ  ಓಡೋಡಿ ಬಂದು ಏದುಸಿರು ಬಿಡುತ್ತಾ ವಿಷಯವನ್ನು ವಿವರಿಸಿದೆ. ನಿನ್ ಇಪ್ಪತ್ತು ಸಾವಿರ ಕೂಪನ್ ಮನೆ ಹಾಳಾಗಿ ಹೋಗ್ಲಿ...., ನನ್  ಎಪ್ಪತ್ತು ಸಾವಿರ  ಎಕ್ಕುಟ್ಟು ಹೋಗುತ್ತೆ ಬಾರೇ... ಅಂತಾ ಗೋಗರೆದೆ.
    ಪೆಚ್ಚುಪೆಚ್ಚಾಗಿ ನನ್ನತ್ತ ನೋಡಿದ ನನ್ನವಳು '' ರ್ರೀ ಅಲ್ನೋಡ್ರೀ...ಎದುರು ಮನೆ ಪಾರ್ವತಕ್ಕ, ಮೀನಾಕ್ಷಿ, ವನಜಾ ಎಲ್ರೂ ಅವರವರ ಮನೆಯವ್ರ ಜೊತೆ ಬಂದಿಲ್ವಾ....?
       ಆಕಾಶವೇ ಕಳಚಿ ತಲೆಯ ಮೇಲೆ ಬಿದ್ದ ಅನುಭವ. ಬಿಗ್ ಟೋಪಿ ಬಜಾರ್ ನ ಹಳೇ ಸಾಮಾನ್ ಕೂಪನ್ ನಿಂದ ಸುಮಾರು ಅರುವತ್ತು ಸಾವಿರ ಸಾಲದ ಹೊರೆ ನನ್ನ ಹೆಗಲ ಮೇಲೇರಿತ್ತು.   ದೂರದಲ್ಲಿ ಎದುರು ಮನೆ ಪಾರ್ವತಕ್ಕ, ಮೀನಾಕ್ಷಿ, ವನಜಾ ಎಲ್ಲರ ಗಂಡಂದಿರು ಬೆಪ್ಪುತಕ್ಕಡಿಗಳಂತೆ ನಿಂತಿದ್ದು ಕಂಡು ಒಳಗೊಳಗೇ ನಗು ಬಂತು.