Monday, March 26, 2012

ಸಂಜೆಯಾಗಿ ಹೋಗಿದೆ....

   ನಿನ್ನ ಮೊದಲ ವರ್ಷದ ಹುಟ್ಟು ಹಬ್ಬಕ್ಕೆ ಇದೇ ಜಾಗದಲ್ಲಿ ನಾನು ಮತ್ತು ನಿನ್ನ ಅಪ್ಪ ದೊಡ್ಡ ಚಪ್ಪರ ನೆಟ್ಟಿದ್ದೆವು. ಆಗ ಈ ಊರು ಅಷ್ಟೇನೂ ಬೆಳೆದಿರಲ್ಲಿಲ್ಲ, ಅಲ್ಲೊಂದು ಇಲ್ಲೊಂದು ಮನೆ. ಆದರೆ ಚಪ್ಪರದ ತುಂಬಾ ಜನರೋ ಜನ. ನೆಂಟರಿಷ್ಟರ ಜೊತೆಗೆ ಸುತ್ತಮುತ್ತಲಿನ ಹಳ್ಳಿಗಳ ತುಂಬಾ ಜನ ಬಂದಿದ್ರು......., ಅವತ್ತಿನ ಗೌಜಿ ಕಣ್ಣಿಗೆ ಕಟ್ಟಿದ ಹಾಗಿದೆ.
     ಅಮ್ಮನ ಮುಖದಲ್ಲಿ ಅದೇನೋ ಮಂದಹಾಸ. ಕಣ್ಣುಗಳಲ್ಲಿ ಸಾಕ್ಷಾತ್ ದೇವತೆಯ ಕಳೆ. ಕಳೆದ ಹಲವು ತಿಂಗಳಿನಿಂದ ಮೌನವಾಗಿದ್ದ ಅಮ್ಮ  ತಾನು ಬಾಳಿ ಬದುಕಿದ ಮನೆಯಂಗಳಕ್ಕೆ ಕಾಲಿಟ್ಟ ಕೂಡಲೇ ಮಗುವಾಗಿದ್ದಾರೆ. ಹಳೇಯ ನೆನಪುಗಳನ್ನು ಮೆಲುಕು ಹಾಕಿಕೊಳ್ಳುತ್ತಿದ್ದಾರೆ.
    ಏ...ಪುಟ್ಟಾ...., ಇದು ಭಾರೀ ಶಾಮಿಯಾನ ಕಣೋ....., ಇಲ್ಲಿ ಸ್ಟೇಜ್ ಕೂಡ ಹಾಕಿದ್ದಾರೆ. ತುಂಬಾನೆ ಚೆನ್ನಾಗಿದೆ ಮಗ. ಇಲ್ಲಿ ಈಗ ನಿನ್ನ ಮಗನ ಅಲ್ಲಲ್ಲಾ ನನ್ನ ಮಗನ ಹುಟ್ಟು ಹಬ್ಬ ಅಂದ್ರೇ..., ನನಗಂತೂ ಹೆಮ್ಮೇನೇ......, ನಿಮ್ಮಪ್ಪ ಇದ್ದಿದ್ರೇ ಮಿಂಚು..ಮಿಂಚಿನ ಹಾಗೇ ಓಡಾಡಿಕೊಂಡಿರೋರು. ಉತ್ಸಾಹದ ನಡುವೆಯೂ ಅಮ್ಮನ ಕಣ್ಣಿನಾಳದಲ್ಲಿ ನೋವಿನ ಗುರುತು ಮೂಡಿ ಮರೆಯಾಗಿತ್ತು. ಅದುವರೆಗೂ ಸುಮ್ಮನಿದ್ದ ಅವನು ಹೊಸ ಸೀರೆ ಹಾಗು ಅಮ್ಮನ ಒಡವೆಗಳ ಪುಟ್ಟ ಪೆಟ್ಟೆಗೆಯೊಂದನ್ನ ಆಕೆಯ ಮುಂದೆ ಹಿಡಿದ.
    ಅಮ್ಮಾ ......,ನೆಂಟರಿಷ್ಟರು ಬರೋ ಹೊತ್ತಾಯ್ತು. ಹೋಗಿ ಸ್ನಾನ ಮಾಡಿ ಹೊಸಸೀರೆ ಉಟ್ಕೊಂಡು ಬಾ..., ಆಕೆ ಮಗನತ್ತ ದಿಟ್ಟಿಸಿ ನೋಡಿದಳು. ಅವನ ಮೊಗರಾವಿಂದದಲ್ಲಿ ಕಿಂಚಿತ್ತೂ ಕಳೆ ಇಲ್ಲ. ಸೋತು ಜಡ್ಡುಗಟ್ಟಿದ ಮುಖಕ್ಕೆ ಬಣ್ಣ ಬಳಿದಂತಿದೆ.  ಅವನ ನಿಲುವಲ್ಲಿ ಹತಾಷ ಭಾವ ಎದ್ದು ಕಾಣುತ್ತಿದೆ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾದ ಕಾರಣಕ್ಕೆ ಅಪ್ಪ ಎದೆಯೊಡೆದು ಸತ್ತ ಅನ್ನೋ ಅಪರಾಧಿ ಭಾವ ಅವನನ್ನು ಇನ್ನೂ ಕಾಡುತ್ತಿದೆ ಎಂದೆಣಿಸತೊಡಗಿತ್ತು. ಆದರೆ ಕೇಳುವಂತಿಲ್ಲ.
    ನೆಂಟರಿಷ್ಟರು, ಗೆಳೆಯರು,ಅವರು, ಇವರು ಎಲ್ಲಾ ಬಂದರು. ಜೋಯಿಸರು ಮಂತ್ರವನ್ನು ಪಠಿಸತೊಡಗಿದರು. ಅವನು ಮಗುವಿನ ಕಿವಿಯಲ್ಲಿ ಆಕಾಶ್, ಆಕಾಶ್, ಆಕಾಶ್ ಅಂತ ಉಸುರಿದ. ನಾಮಕರಣ ಶಾಸ್ತ್ರ ಸಾಂಗ್ಯವಾಯ್ತು. 
    ಬಂದವರಿಗೆಲ್ಲಾ ಹಬ್ಬದ ಅಡುಗೆ. ಮೊಮ್ಮಗುವಿನ ಜೊತೆ ರೇಷ್ಡೆ ಸೀರೆ ಹಾಗು ಚಿನ್ನಾಭರಣ ಧರಿಸಿ ನಿಂತ ಆಕೆಯ ಫೋಟೋ ತೆಗೆದದ್ದೇ ತೆಗೆದದ್ದು. ಬಂದವರಿಗೆಲ್ಲಾ ಆಕೆಯನ್ನು ಕಂಡಾಗ ಅದೇನೋ ಒಂಥರಾ ಆತ್ಮಿಕ ಆನಂದ. ಅಂತಹ ಮಹಾನ್ ಸಾಧ್ವಿ ಅವಳು. ಆಕೆಯ ಪರಿಶ್ರಮದಿಂದ ಈತ ದೊಡ್ಡ ಅಧಿಕಾರಿಯಾಗಿ ಬೆಳೆದು ನಿಂತಿದ್ದಾನೆ. ಊರಲ್ಲೆಲ್ಲಾ ಬಹುದೊಡ್ಡ ಹೆಸರು ಮಾಡಿದ್ದಾನೆ. ತಾಯಿ ಹಾಗು ಮಗ ಎಂದರೆ ಹೀಗಿರಬೇಕು......, ಬಂದವರಲ್ಲಿ ಈ ಮಾತು ಹೇಳದೇ ಯಾರೂ ಹೋಗಿಲ್ಲ.
    ಊರಿನ ಮಂದಿ ಖಾಲಿಯಾದರು. ನೆಂಟರು ಹೊರಟರು. ಆಳುಗಳು ಕೆಲಸ ಮುಗಿಸಿ ಕೈ ಕಟ್ಟಿ ನಿಂತರು. ಎಲ್ಲರಿಗೂ ಹೊರಡುವ ತವಕ. ಅತ್ಯಂತ ಗೌರವಯುತವಾಗಿ ಫಲತಾಂಬೂಲದ ಜೊತೆಗೆ ಈತ ಎಲ್ಲರನ್ನೂ ಬೀಳ್ಕೊಟ್ಟ.  ಮನೆಯಲ್ಲಿದ್ದ ಜನಗಳ ಸಂಖ್ಯೆ ಕರಗಿತ್ತು.
          ಪುಟ್ಟಾ ಅಲ್ಲಿ ಆ ಹಲಸಿನ ಮರ ಇದೆಯಲ್ವಾ...., ಅಲ್ಲಿ ನಾನು ಬಸಲೇಸೊಪ್ಪಿನ ಬಳ್ಳಿ ನೆಟ್ಟಿದ್ದೆ. ನೀ ಆರನೇ ಕ್ಲಾಸ್ ಓದೋವರ್ಗೂ ಆ ಬಳ್ಲಿಯಿಂದ ಕತ್ತರಿಸಿದ ಸೊಪ್ಪನ್ನ ಮಾರಿ ನಿನ್ನನ್ನ.......ಆಕೆಯ ಮಾತು ಮುಂದುವರೆದಿತ್ತು. ಆದರೆ ಅವನಿಗೆ ಅದರಲ್ಲಿ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ದೂರದಲ್ಲಿ ಅವನ ಕೈ ಹಿಡಿದಾಕೆ ಅವನಿಗೆ ಕಣ್ಸನ್ನೆ ಮಾಡಿ ಕರೆದಳು. ಅವನು ಮನೆಯೊಳಗೆ ಹೋದವ ಮತ್ತೆ ಹೊರಗೆ ಬಂದ. ಅಮ್ಮ ಇನ್ನೂ ಏನೋ ಹೇಳುತ್ತಲೇ ಇದ್ದಳು. ಅದನ್ನು ಅರ್ಧಕ್ಕೆ ನಿಲ್ಲಿಸಿದ ಆತ 
   ಅಮ್ಮಾ...., ಹೊರಡೋಣ್ವಾ....? ಅಂತ ವಿನಮ್ರನಾಗಿ ಕೇಳಿದ. ಅವನೆದೆಯಲ್ಲಿ ನೆಟ್ಟ ನೋವಿನ ಶೂಲ ಅಸಹಾಯಕತೆಯ ಚೀತ್ಕಾರವಾಗುವುದೇನೋ ಎಂಬ ಭಯ ಆಕೆಗೆ. ಅವಳು ಮತ್ತಷ್ಟು ಖುಷಿಯಾದಳು.
   ಓ.., ಹೌದಲ್ವಾ...? ಸಂಜೆಯಾಗಿ ಹೋಗಿದೆ........! ಗೊತ್ತೇ ಆಗಿಲ್ಲಾ ನೋಡು. ಹಾಗೆಂದವಳು ಕೋಣೆಯೊಳಗೆ ಹೋಗಿ ಧರಿಸಿದ್ದ ಹೊಸ ಸೀರೆ ಬದಲಾಯಿಸಿ ತಾನು ಮೊದಲು ಉಟ್ಟಿದ್ದ ಹಳೇಯ ಮಾಸಲು ಸೀರೆ ಉಟ್ಟುಕೊಂಡಳು.  ಹಾಗು ಆಭರಣಗಳನ್ನು ಪೆಟ್ಟಿಗೆಯಲ್ಲಿಟ್ಟು ಸೀರೆ ಹಾಗು ಅದನ್ನು ಮಗನ ಕೈಗಿತ್ತಳು. ಅವನು ಅವೆಲ್ಲವನ್ನೂ ತನ್ನ ಹೆಂಡತಿಯ ಕೈಗಿತ್ತ.  ಆಕೆ ಲಗುಬಗೆಯಿಂದ ಒಳಸೇರಿ ಮುಂಬಾಗಿಲು ಹಾಕಿ ಚಿಲಕ ಜಡಿದುಕೊಂಡಳು.
     ಹೈವೇ ಯಲ್ಲಿ ಆತನ ಕಾರು ಓಡುತ್ತಿತ್ತು. ಆತನ ಪಕ್ಕದಲ್ಲಿ ಆತನನ್ನು ಹೆತ್ತತಾಯಿ ಕುಳಿತಿದ್ದಾರೆ. ಏನನ್ನೂ ವ್ಯಕ್ತಪಡಿಸಲಾಗದ ಅಸಹಾಯಕತೆ  ಸ್ಥಿತಿ ಅವನದು. ಕಣ್ಣಿನಿಂದ ಧಾರಾಕಾರವಾಗಿ ನೀರು ಇಳಿಯತೊಡಗುತ್ತೆ. ಅದನ್ನು ಕಂಡ ಅವನ್ನಮ್ಮ ಯಾಕಪ್ಪಾ ಅಳ್ತಾ ಇದ್ದೀಯಾ...? ಅಂತಾ ಕೇಳುತ್ತಾಳೆ. ಅದಕ್ಕವನು ಇಲ್ಲಾಮ್ಮ ಅಳ್ತಾ ಇಲ್ಲಾ..ಗಾಳಿ ಜೋರಾಗಿ ಬೀಸ್ತಾ ಇದೆ ನೋಡು, ಅದು ಕಣ್ಣಿಗೆ ರಾಚಿ ಕಣ್ಣೀರು ಬರ್ತಾ ಇದೆ ಎನ್ನುತ್ತಾನೆ. ಓ ಹೌದಾ....? ಎನ್ನುತ್ತಾ ಆಕೆ ಸುಮ್ಮನಾಗುತ್ತಾಳೆ. ಇಬ್ಬರಿಗೂ ಅದು ಸುಳ್ಳು ಎನ್ನುವುದು ಗೊತ್ತಿದೆ. ಆದರೆ ಅದನ್ನು ಕೆದಕುತ್ತಾ ಹೋದರೆ ತನ್ನ ಕಂದ ಮತ್ತಷ್ಟು ಕಣ್ಣೀರಾಗುತ್ತಾನಲ್ಲಾ ಎಂದು ಆಕೆ ಸುಮ್ಮನಾಗಿ ಬಿಡುತ್ತಾಳೆ. ಇದು ಆತನ ಮನೆಯಲ್ಲಿ ನಡೆಯುವ ಪ್ರತಿಯೊಂದು ಸಮಾರಂಭದಲ್ಲೂ ಮರುಕಳಿಸುತ್ತೆ.
    ಆ ಹೈಟೆಕ್ ವೃದ್ದಾಶ್ರಮದ ಎದುರು ಅವನ ಕಾರು ಬರುತ್ತಿದ್ದಂತೇ ಲಗುಬಗೆಯಿಂದ ಓಡಿ ಬಂದ ಸಿಬ್ಬಂದಿ ಬಾಗಿಲು ತೆರೆಯುತ್ತಾರೆ. ಅವ ಕಾರಿನಿಂದಿಳಿದು ಮುಂದಿನ ಡೋರ್ ತೆಗೆಯಲು ಪ್ರಯತ್ನಿಸುತ್ತಾನೆ. ಆದರೆ ಅದಕ್ಕೆ ಅವಕಾಶ ನೀಡದ  ಆ ತಾಯಿ ತಾನೇ ಕಾರಿನಿಂದ ಕೆಳಗಿಳಿದು ಪರ್ವಾಗಿಲ್ಲ ಬಿಡು ಕಂದಾ ಎನ್ನುತ್ತಾರೆ. ಆತನ ಹಾಗು ಆಕೆಯ ಎದೆಗೆ ಒಮ್ಮೆಗೆ ಸಾವಿರ ಸಾವಿರ ಭಲ್ಲೆಗಳು ತಿವಿಯುತ್ತವೆ. ಅಸಾಧ್ಯ ವೇದನೆ......, ಆದರೆ ಇಬ್ಬರೂ ವ್ಯಕ್ತಪಡಿಸಿಕೊಳ್ಲುವುದಿಲ್ಲ.
      ಉಸಿರನ್ನೊಮ್ಮೆ ಎಳೆದುಕೊಂಡ ಆತ ಅಮ್ಮಾ...., ಬರ್ತೀನಮ್ಮಾ..., ಎನ್ನುತ್ತಾನೆ. ಅವನಷ್ಟೇ ತಾಳ್ಮೆಯಿಂದ ಆಕೆ ಕೂಡ ಆಯ್ತು ಪುಟ್ಟಾ ಹೋಗಿ ಬಾ...ಜೋಪಾನ ಮಗನೇ ಎನ್ನುತ್ತಾಳೆ. ಇನ್ನೊಂದು ಕ್ಷಣ ಅಲ್ಲಿದ್ದರೂ ಎದೆಯೊಳಗಿರುವ ನೋವಿನ ಕಟ್ಟೆ ಒಡೆದು ಹೋಗುತ್ತೆ...ನಾನಳುವುದನ್ನು ಕಂಡರೆ ಅಮ್ಮನ ಉಸಿರೇ ಉಡುಗಿ ಹೋಗುತ್ತೆ..., ಅವನೆಂದುಕೊಳ್ಳುತ್ತಾನೆ. ಬೇಗ ಹೊರಡು ಕಂದಾ...., ನನ್ನ ಕಣ್ಣೀರು ನಿನ್ನನ್ನು ಮತ್ತಷ್ಟು ದುಃಖಿತನನ್ನಾಗಿಸಬಾರದು ಅಂತಾ ಅವಳೆಂದುಕೊಳ್ಳುತ್ತಾಳೆ.
       ಅಮ್ಮನ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಅವನು ಹೊರಡುತ್ತಾನೆ. ಕಾರಿನ ಎಲ್ಲಾ ಗ್ಲಾಸ್ ಗಳನ್ನು ಮೇಲೇರಿಸಿಕೊಂಡು ಸ್ಟೀರಿಯೋ ಸದ್ದನ್ನು ಜೋರಾಗಿಸಿ ವೇಗವಾಗಿ ಕಾರು ಚಲಾಯಿಸುತ್ತಾನೆ. ಈಗವನು ತನ್ನನ್ನೇ ತಾನು ನಿಯಂತ್ರಿಸಿಕೊಳ್ಳುವುದಿಲ್ಲ. ಅಜ್ಞಾತ ಸ್ಥಳದಲ್ಲಿ ಕಾರು ನಿಲ್ಲಿಸಿ ಜೋರಾಗಿ ಅಳುತ್ತಾನೆ. ಕಿರುಚುತ್ತಾನೆ. ಎದೆ ಎದೆ ಬಡಿದುಕೊಳ್ಳುತ್ತಾನೆ. ವೃದ್ದಾಶ್ರಮದ ಕೊಠಡಿಯ ಮೂಲೆಯಲ್ಲಿ ಕುಳಿತ ಅವನಮ್ಮ  ಕೂಡ ಬಿಕ್ಕಿ ಬಿಕ್ಕಿ ಅಳುತ್ತಾಳೆ. ಕಂದಾ ನೀ ಅಳಬೇಡ ಚೆನ್ನಾಗಿರು. ನಿನ್ನದೇನು ತಪ್ಪಿಲ್ಲ ಅನ್ನೋದು ನನಗೆ ಗೊತ್ತಿದೆ ಎಂದು ಹಾರೈಸುತ್ತಾಳೆ. ಅದೊಂದು ಸಂಜೆ ಹಾಗೆ ದುಃಖದ ಹನಿಗಳ ಜೊತೆಗೆ ಜಾರಿ ಹೋಗುತ್ತೆ.


       

No comments: