Friday, July 19, 2013

ಒಂದೆರಡು ಹನಿ ಕಣ್ಣೀರು....

ಒಂದೆರಡು ಹನಿ ಕಣ್ಣೀರು.......,
ಇವತ್ತು ನಾನು ಚನ್ನರಾಯಪಟ್ಟಣದಲ್ಲಿ ಶೂಟ್ ಗೆ ಹೋಗಿದ್ದೆ. ವಾರೆಂಟ್ ಕಾರ್ಯಕ್ರಮಕ್ಕಾಗಿ ಅರ್ಧ ಘಂಟೆ ವಿಶ್ಯುವಲ್ ನೀಡುವ ಜವಾಬ್ದಾರಿ ನನ್ನ ಮೇಲಿತ್ತು. ಪ್ರೀತಿಗಾಗಿ ಜೀವ ತೆತ್ತ ಹುಡುಗನ ಸುತ್ತ ಆ ಸ್ಟೋರಿ. ಅರ್ಥಾತ್ ಮೌನ ಮುರಿದು ಬಿದ್ದ ಮನೆಯಲ್ಲಿ ಕರುಳ ಕುಡಿಗಾಗಿ ಆಕ್ರಂಧನ....., ಆ ತಾಯಿ ಅವನಪ್ಪನ 2 ನೇ ಹೆಂಡತಿ. ಈತ ಆಕೆಗಿದ್ದ ಒಬ್ಬನೇ ಒಬ್ಬ ಮಗ. ತುಂಡು ಜಮೀನು..., ಎಷ್ಟೇ ಹಂಚಿದರೂ ಕರಗಲಾರದ ವಾತ್ಸಲ್ಯ. ಅವನು 24 ವರ್ಷದ ಯುವಕನಾಗಿದ್ರೂ ಆ ತಾಯಿಗೆ 4 ವರ್ಷದ ಬಾಲಕ.
ಇಂತಹ ಹುಡುಗ ಕೊಲೆಯಾದ.... ಆತನ ಶವ ನಾಲೆಯಲ್ಲಿ ತೇಲಿ ಹೋಗಿ ಮೀನು, ಹುಳ ಹುಪ್ಪಟೆಗಳಿಗೆ ಮೃಷ್ಟಾನ್ನವಾಯ್ತು.
ಪ್ರೀತಿಸಿದ್ದೇ ಆ ಹುಡುಗನಿಗೆ ಮುಳುವಾಯ್ತು. ತನ್ನ ಪ್ರೀತಿಯ ಹುಡುಗಿಗೆ 18 ವರ್ಷ ಆಗಲಿ ಅಂತ ಕಾಯುತ್ತಿದ್ದ. ದುರದೃಷ್ಟಾವಷಾತ್ ಅದಕ್ಕೂ ಮುನ್ನವೇ ಆಕೆಯ ಮದುವೆ ಆಯ್ತು. ನೆಚ್ಚಿದ ನಲ್ಲನನ್ನು ಬಿಟ್ಟಿರದ ಆ ಜೀವ ತನ್ನತನ ಉಳಿಸಿಕೊಂಡು ಆತನಿಗಾಗಿ ಕಾಯುತ್ತಿದ್ದಳು. ಮದುವೆಯಾಗಿ ಒಂದೂವರೆ ತಿಂಗಳು....., ತಾಳಿ ಕಟ್ಟಿದವನಿಗೆ ನಾನೊಲ್ಲೇ.. ಅನ್ನುತ್ತಲೇ ಬಂದಿದ್ದ ಆಕೆ ಆಷಾಡಕ್ಕೆ ಮನೆಗೆ ಬಂದಿದ್ದಳು.
ಹೀಗೆ ಪ್ರೀತಿಯ ಹುಡುಗನಿಗೆ ಪೋನ್ ಮಾಡಿದ ಹುಡುಗಿ ಅವತ್ತು ಆತನ ಜೊತೆ ಇಡೀ ದಿನ ಸುತ್ತಾಡಿದ್ದಾಳೆ. ಇವೆಲ್ಲವನ್ನೂ ಕಂಡ ಜನ ಅವಳ ಅಪ್ಪನಿಗೆ ವಿಷಯ ತಿಳಿಸಿ ಬಾಯಿಗೆ ಬಂದಂತೆ ಮಾತನಾಡಿದ್ದಾರೆ.
ಆ ಹುಡುಗ ಕೊಲೆಯಾದ....., ಹುಡುಗಿಯ ಸಂಬಂದಿಕರು ಆತನನ್ನ ಕೊಂದು ನಾಲೆಗೆ ಎಸೆದು ಬಿಟ್ಟರು.
ಈಗ ಅವನ ವಿಧವೆ ತಾಯಿ ಅಳುತ್ತಿದ್ದಾರೆ. ಆಕೆಯ ಕಣ್ಣೀರು ಒರೆಸೋಕು ಯಾರೂ ಇಲ್ಲ. ಕರಗುತ್ತಿರುವ ಆ ಮಾತೃ ಹೃದಯ.... ನೋವುಗಳ ಜೊತೆಗೆ................................ ಆಕೆ ಬದುಕುತ್ತಾಳೋ ಇಲ್ಲವೋ ಗೊತ್ತಿಲ್ಲ. ನನ್ನೆದೆಯಲ್ಲಿ ಅಸಾಧ್ಯ ವೇದನೆ....., ಯಾರೂ ಇಲ್ಲದ ಆ ತಾಯಿಗೆ ಅವುಕಿಕ್ಕೊಂಡ ಶೂನ್ಯತೆಗೆ... ಜೀವ ತುಂಬುವ,  ಮಗನ ನೆನಪಲ್ಲೇ ಕರಗಿ ಸಾಯುವ ಆ ಅಮ್ಮನಿಗೆ.... ನಾನಿದ್ದೇನೇ ಎನ್ನುವ ಹೃದಯ....?????


Thursday, July 18, 2013

ಚಡ್ಡೀ ಡಿಟೆಕ್ಟರ್....

ಇದು ನಾನು ಪ್ರೌಡಶಾಲೆಯಲ್ಲಿ ಓದುತ್ತಿದ್ದಾಗ ನಡೆದ ಘಟನೆ. ನಾನು ಓದಿದ ಶಾಲಾ ಕಾಲೇಜುಗಳ ಪೈಕಿ ಆ ಶಾಲೆ ಅಂದ್ರೆ ನನಗೆ ಈಗಲೂ ಅದೇನೋ ಒಂದು ರೀತಿಯ ತೀರದ ಅಭಿಮಾನ. ನನ್ನ ಭಾವನೆಗಳಿಗೆ..ತುಂಟತನಕ್ಕೆ ಹಾಗು ನನ್ನತನಕ್ಕೆ ವೇದಿಕೆಯಾದ ಶಾಲೆ ಅದು. ಪರಮಪೂಜ್ಯ ಶ್ರೀ ಶ್ರೀ ಶ್ರೀ ಡಾಕ್ಟರ್ ಶಿವಕುಮಾರಸ್ವಾಮೀಜಿಯವರ ಪ್ರೀತಿಯ ಸಿದ್ದಗಂಗಾ ಗ್ರಾಮಾಂತರ ಪ್ರೌಡಶಾಲೆ. ನನ್ನ   ಇಂದಿನ ಭವಿಷ್ಯ ರೂಪಿಸಿದ ಪುಣ್ಯ ದೇಗುಲ ಅದು ಅಂದ್ರೆ ಅತಿಶಯೋಕ್ತಿ ಏನೂ ಅಲ್ಲ. ಈ ಜ್ಞಾನದೇಗುಲ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಶುಕ್ರವಾರ ಸಂತೆ ಅನ್ನೋ ಗ್ರಾಮದಲ್ಲಿದೆ. ಬ್ಯಾಕರವಳ್ಳಿ ಜಯಣ್ಣ ಅನ್ನೋ ಪುಣ್ಯಾತ್ಮ ನನ್ನನ್ನ  ಆ ಶಾಲೆಗೆ 9 ನೇ ತರಗತಿಗೆ ಸೇರಿಸಿದ್ದರು.  ಆ ಬಗ್ಗೆ ಹೇಳುತ್ತಾ ಹೋದ್ರೆ ಬಹಳಷ್ಟಿದೆ ಬಿಡಿ. ಸಧ್ಯಕ್ಕೆ ಅಲ್ಲಿ ನನ್ನ ಹಾಗು ನನ್ನ ಸಹಪಾಠಿಗಳ ತುಂಟತನದ ಹಾಗು ಮೂರ್ಖತನದ ಒಂದು ಸಣ್ಣ ಘಟನೆ ನಿಮ್ಮ ಮುಂದೆ ಇಡುತ್ತಿದ್ದೇನೆ.
    ಅವತ್ತು ಶುಕ್ರವಾರ..., ನಮ್ಮ ಶಾಲೆಯ ಪಾಲಿಗದು ವಿಶೇಷ ದಿನ.  ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಸಿದ್ದರಾಗುತ್ತಿದ್ದ ನಮಗೆ ಅಂದು ಶಾರದಾಂಭೆ ಪೂಜೆ ಏರ್ಪಡಿಸಲಾಗಿತ್ತು. ಹೇಳಿ ಕೇಳಿ ಶುದ್ದ ಹಳ್ಳಿಗಾಡಿನ ಸಂಪ್ರದಾಯ ಶರಣರಿರುವ ಊರು ಅದು. ಅಲ್ಲಿ ಜಾತಿ ಗೀತಿಯ ಸೋಂಕು ಇಲ್ಲದಿದ್ದರೂ ಅಂದುಕೊಂಡಿದ್ದನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವ ಶ್ರದ್ದೆಯಂತೂ ಖಂಡಿತಾ ಇತ್ತು. ನಾನು ಸಿಟಿ ಶಾಲೆಯಲ್ಲಿ ಓದಿ ಯಾವುದೋ ಕಾರಣಕ್ಕೆ ಆ ಶಾಲೆಗೆ ಸೇರಿದವ.  ಕೇವಲ ಯಾಂತ್ರಿಕ ಶಿಸ್ತುಗಳನ್ನ ಕಂಡಿದ್ದ ನನಗೆ ಅಂದಿನ ಐಕ್ಯತೆ, ಜವಾಬ್ದಾರಿ, ಎಲ್ಲವೂ ಹೊಸದು.
 ನನಗೆ ಹಾಗು ನನ್ನ ಗೆಳೆಯರ ತಂಡಕ್ಕೆ ಅಂದು ಇಡೀ ಶಾಲೆಗೆ ಬಾಳೆ ಹಾಗು ಮಾವಿನ ತೋರಣ ಕಟ್ಟುವ ಜವಾಬ್ದಾರಿ. ಸಿಟಿಯಿಂದ ಬಂದವ ಅನ್ನೋ ಕಾರಣಕ್ಕೆ ನಾನೇ ಆ ಟೀಮ್ ಗೆ ಲೀಡರ್ ಕೂಡ.  ರಸ್ತೆ ಬದಿಯಲ್ಲಿರೋ ಮಾವಿನ ಮರ ಹತ್ತಿ ಸಮಸ್ಯೆ ಆಗಬಾರದು ಅದೇ ರೀತಿ ಯಾರದ್ದೋ ತೋಟಕ್ಕೆ ನುಗ್ಗಿ ಬಾಳೆ ಕಡಿದ ಆರೋಪ ಬರಬಾರದು ಅನ್ನೋ ಕಾರಣಕ್ಕೆ ನಮ್ಮ ಸೋಷಿಯಲ್ ಟೀಚರ್ ವೈ.ಬಿ.ಎನ್ ( ವೈ.ಬಿ. ನಂಜಪ್ಪ) ಅವರು ಅವರದ್ದೇ ತೋಟಕ್ಕೆ ಹೋಗಿ ಎಷ್ಟು ಬೇಕೋ ಅಷ್ಟು ಬಾಚಿ ತನ್ನಿ ಅಂತಾ ಆದೇಶ ನೀಡಿದ್ದರು. ನಾನು ನನ್ನ ಪಟಾಲಂ ಜೊತೆ ಅತ್ತ ಹೊರಟೇ ಬಿಟ್ಟೆ.
                    ಮಲೆನಾಡಿನ ದೇಹ ಸಿರಿಗೆ ಸಾಕ್ಷ್ಯಿ ಹೇಳೋ ತೋಟ ಅದು. ನಳನಳಿಸುವ ಹಸಿರಿನ ನಡುವೆ ಹೂ ದುಂಭಿಗಳ ಝೇಂಕಾರ......, ಮಾವು, ಹಲಸು, ಕಿತ್ತಳೆ, ಸಪೋಟ, ಬಾಳೆ ಇತ್ಯಾದಿ ಇತ್ಯಾದಿ...., ಮೇಷ್ಟ್ರು ತೋಟ ಅಂದ ಮೇಲೆ ನಾವು ನಮ್ಮಿಷ್ಟದಂತೇ ನಡೆದುಕೊಳ್ಳುವಂತಿಲ್ಲ.  ಆ ಕಾರಣಕ್ಕೆ ಕೇವಲ ಮಾವಿನ ಸೊಪ್ಪನ್ನು ಕೀಳೋಕೆ ಒಂದಿಬ್ಬರು ಮರ ಹತ್ತಿದ್ದರು. ಆ ಪೈಕಿ ಮಾವಿ ಸೊಪ್ಪು ಕೀಳುತ್ತಿದ್ದ ಹೂವಣ್ಣನಿಗೆ ದೂರದಲ್ಲಿ ಒಂದು ತೆರೆದ ಬಾವಿ ಕಾಣಿಸಿತ್ತು. ಮರದಿಂದ ಇಳಿದ ಆತ ''ಲೇ..., ಎಲ್ರೂ ಈಜಾಡಣ್ವಾ.....? ಅಂತ ತರಲೆ ಐಡಿಯಾ ಕೊಟ್ಟಿದ್ದ
        ಹೇಳಿ ಕೇಳಿ ಹಳ್ಳಿ ಹೈದರು..., ನಾನೂ ಕೂಡ ಹೇಮಾವತಿ ನದಿ ತಟದವನಾಗಿದ್ರಿಂದ ಎಲ್ಲರಿಗೂ ಈಜು ಚೆನ್ನಾಗೇ ಬರುತ್ತಿತ್ತು. ಒಂದು ಅರ್ಧ ಘಂಟೆ ಭಾವಿಯಲ್ಲಿ ಈಜಾಡಿದ ನಾವು ಆಮೇಲೆ ಮಾವಿನ ಸೊಪ್ಪು, ಬಾಳೆ ದಿಂಡು ಹೊತ್ತು ನಮ್ಮ ಶಾಲೆ ಸೇರಿದ್ದೆವು. ಆದ್ರೆ ಅದಕ್ಕೂ ಮುಂಚೆ ಒಂದು ಎಡವಟ್ಟಾಗಿತ್ತು. ಅಲ್ಲಿ ದನ ಮೇಯಿಸುತ್ತಿದ್ದ ಯಾವನೋ ಒಬ್ಬ ( ಅವನಜ್ಜಿ) ನಮ್ಮ ಶಾಲೆಗೆ ನಾವು ಬಾವಿಗಿಳಿದು ಈಜಾಡಿದ್ದ ಬಗ್ಗೆ ಮಾಹಿತಿ ನೀಡಿದ್ದ.
     ಸರಿ, ನಾವು ಶಾಲೆ ಸೇರುತ್ತಿದ್ದಂತೇ ನಮ್ಮ ಪಿ.ಟಿ ಮಾಸ್ಟರ್ ಹನುಂತರಾಯಪ್ಪ ನಮ್ಮ ತಂಡವನ್ನ ಕರೆದು ಸಾಲಾಗಿ ನಿಲ್ಲಿಸಿದರು. ಅವರ ಕರಿ ಮೊಗದಲ್ಲಿ ತಡೆಯಲಾರದಷ್ಟು ಕೋಪ ಎದ್ದು ಕಾಣುತ್ತಿತ್ತು. " ಲೇ...ನನ್ ಮಕ್ಳ ಯಾರೆಲ್ಲಾ ಬಾವಿಗೆ ಇಳಿದಿದ್ರೀ ಎಲ್ಲಾ ಸತ್ಯ ಒಪ್ಕೊಂಡು ಈಕಡೆ ಬಂದ್ ನಿಂತ್ಕಳಿ....ಒದೆ ಕಮ್ಮಿ ಆಗುತ್ತೆ ಅಂತಾ ಧಮಕಿ ಬೇರೆ.  ಈ ಪಿ.ಟಿ ಯಪ್ಪನಿಗೆ ಇವೆಲ್ಲಾ ಹೆಂಗ್ ಗೊತ್ತಾಯ್ತದೇ ಅನ್ನೋ ಭಂಡ ದೈರ್ಯದಲ್ಲಿದ್ದ ನಾವು ನಿಂತಲ್ಲೇ ಸುಮ್ಮನೇ ನಿಂತಿದ್ದೆವು.  ಮತ್ತಷ್ಟು ಕೆಂಡಾಮಂಡಲರಾದ ಅವರು ನಮ್ಮ ಸುತ್ತಾ ಒಂದು ರೌಂಡ್ ಹಾಕಿದರು ಅಷ್ಟೇ....,  ಬಾವಿಗಿಳಿದ  ಒಬ್ಬೊಬ್ಬರನ್ನೇ ಕರೆದು '' ಸುಳ್ ಬೊಗಳ್ತೀಯೇನೋ....?' ಅನ್ನುತ್ತಾ ಸುರುಗೀ ಗಿಡದ ಬೆತ್ತದಿಂದ ಬಾಸುಂಡೆ ಬರುವಂತೆ ( _ ಮೇಲೆ) ಭಾರಿಸಿಯೇ ಬಿಟ್ಟರು.  ನೋವು ತಾಳದ ನಾವು ಸತ್ಯ ೊಒಪ್ಪಿಕೊಂಡು ಕ್ಷಮೆ ಯಾಚಿಸಿ ಅವರ ಅಂದಿನ ಕಳಕಳಿ ಹಾಗು ಜವಾಬ್ದಾರಿಯ ಬೋಧನೆ ಕೇಳಿ ತಪ್ಪಿಸಿಕೊಂಡೆವು.
    ವಿಷಯ ಇದಲ್ಲಾರೀ...., ನಮ್ಮನ್ನ ಬಾವಿಗಿಳಿಯುವಂತೆ ಮಾಡಿದ್ದ ಹೂವಣ್ಣನಿಗೆ ಮಾತ್ರ ಮೇಷ್ಟ್ರು ಏನೂ ಮಾಡಲ್ಲಿಲ್ಲ. ನಮಗೆ ಇದು ನಿಜವಾಗಲೂ ಅಚ್ಚರಿಯನ್ನುಂಟು ಮಾಡಿತ್ತು. ನಮ್ಮ  ಒಬ್ಬೊಬ್ಬರಿಗೂ ಬೆತ್ತದ ಪೆಟ್ಟು ಬೀಳುತ್ತಿದ್ದಾಗ ಅದು ತನಗೇ ಬಿದ್ದಂತೇ ಅಳುತ್ತಿದ್ದ ಅವನನ್ನು ಪಿ.ಟಿ. ಮೇಷ್ಟ್ರು ಗದರಿಸಿ ಓಡಿಸಿದ್ದರು.   ಅದು ಒಂದು ರೀತಿಯ ರಹಸ್ಯವಾಗಿ ನಮ್ಮ ಅನುಮಾನಕ್ಕೆ ಕಾರಣವಾಗಿ ನಮ್ಮಗಳ ಮನಸ್ಸಲ್ಲೇ ಉಳಿದುಕೊಂಡಿತ್ತು.
     ಹೀಗೆ ರಹಸ್ಯ ಬೇಧಿಸಲು ಹೊರಟ ನಾನು ಮೇಷ್ಟರ ಆಪ್ತರನ್ನ ಕೇಳಿದಾಗ ಭಾವಿಗಳಿದ ನಮ್ಮನ್ನು ಅವರು ಕಂಡು ಹಿಡಿದ ರಹಸ್ಯ ಗೊತ್ತಾಯ್ತು...., ನಮ್ಮ ಮೂರ್ಖತನಕ್ಕೋ ಅಥ್ವಾ ಅವತ್ತಿನ ಪರಿಸ್ಥಿತಿಗೋ ಗೊತ್ತಿಲ್ಲ ತಡೆಯಲಾಗದ ನಗು ಬಂತು.
       ಅದೇನಂದ್ರೆ...ಸತ್ಯ ಒಪ್ಪಿಕೊಳ್ಳದ ನಮ್ಮ ತಂಡದ ಸುತ್ತ  ಒಂದು ರೌಂಡ್ ಹಾಕಿದ್ದ ಮೇಷ್ಟ್ರು ಯಾರದ್ದೆಲ್ಲಾ ಪ್ಯಾಂಟ್ ಒದ್ದೆಯಾಗಿದೆ ಅನ್ನೋದನ್ನ ಗಮನಿಸಿದ್ದಾರೆ....ಅಂದ್ರೆ ಬಾವಿಗಿಳಿದು ಈಜಾಡಿದ ನಂತರ ಒದ್ದೆಯಾಗಿದ್ದ  ಒಳು  ಉಡುಪನ್ನ ಹಿಂಡಿ ಹಾಕಿಕೊಂಡು ಬಂದಿದ್ದವರೆಲ್ಲಾ ಮೇಷ್ಟ್ರ ಡಿಟೆಕ್ಟಿವ್ ಕಣ್ಣಿಗೆ ಸಿಕ್ಕಿ ಬಿದ್ದಿದ್ದೆವು.
                    ಹೂವಣ್ಣ ಮಾತ್ರ ಸಿಕ್ಕಿ ಬೀಳಲ್ಲಿಲ್ಲ.......ಕಾರಣ................. 

Tuesday, May 28, 2013

ಆ.....ರೆಸ್ಟ್.......,!

'' ರ್ರೀ...., ಬ್ಯಾಂಕ್ ನಲ್ಲಿ ಆಡಿಟಿಂಗ್ ನಡಿತಾ ಇದೆ. ಒಟ್ಟೊಟ್ಟಿಗೆ ಮೂರು ಬ್ರಾಂಚ್ ಗಳಿಗೆ ವಿಸಿಟ್ ಹಾಕಬೇಕು. ಪ್ಲೀಸ್ ಇವತ್ತು ಒಂದು ದಿನ ಆಂತೂನ ನೋಡ್ಕೊಳ್ಲೀ ಪ್ಲೀಸ್.....,
ನನ್ನ ಮನದನ್ನೆಯ ಮಾತಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ಯಾಕಂದ್ರೆ ತಿಂಗಳಿಗೆ ಹದಿನೈದು ದಿನ ಮಾತ್ರ ಮಗುವಿನ ಉಸ್ತುವಾರಿ ನೋಡಿಕೊಳ್ಳುವ ನನ್ನ ಮಹಾನ್ ಅತ್ತೆ ಈ ಬಾರಿ ಕೂಡ ಊರಿನ ದಾರಿ ಹಿಡಿದಿದ್ದರು. ನನ್ನ 2 ನೇ ಮಗಳು ಮಹಾನ್ ತುಂಟಿ ಆಂತರ್ಯಳನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ನನ್ನ ಹೆಗಲೇರಿತ್ತು.  ಭಾನುವಾರದ ರಜೆಯನ್ನು ಶನಿವಾರಕ್ಕೇ ಪೋಸ್ಟ್ ಪೋನ್ ಮಾಡಿದ ನಾನು ಮಾತಿಲ್ಲದಂತೆ ಮಗಳ ಜೊತೆ ಕುಳಿತುಕೊಂಡೆ. ಅದ್ಯಾಕೋ ಏನೋ ಭಾನುವಾರವನ್ನ ಮಿಸ್ ಮಾಡಿಕೊಳ್ಳೋದು ಅಂದ್ರೆ ನನಗೆ ತುಂಬಾ ಬೇಜಾರಾಗುತ್ತೆ. ಅವತ್ತೇ ನನ್ನ ಅರ್ಧಾಂಗಿಗೂ ರಜಾ ಇರೋ ಕಾರಣ ನಾನೂ ಕೂಡ ಮಡದಿ ಮಕ್ಕಳ ಜೊತೆ ಮನೆಯಲ್ಲೇ  ಇರಲು ಬಯಸುತ್ತೇನೆ. ಅದರಲ್ಲೂ ಅವತ್ತು ನನಗೆ ಅಥ್ವಾ ನನ್ನ ಮಗಳು ಅಭಿಜ್ಞಾಳಿಗೆ ಇಷ್ಟವಾದ ನಾನ್ ವೆಜ್ ಅಡುಗೆ......, ಅದನ್ನ ನಾನ್ ಮತ್ತೆ ನನ್ನ ಹೆಂಡ್ತಿ ಜೊತೆ ಸೇರಿ ಮಾಡೋದ್ರಿಂದ ಅದೊಂಥರಾ ವಿಶೇಷ ಖುಷಿನೇ ಬಿಡಿ.
 ವಿಷಯಕ್ಕೆ ಬಂದು ಬಿಡುತ್ತೇನೆ ಆ ಶನಿವಾರ ನನ್ನಾಕೆ ನನಗೆ ಬಾಯ್....ಬೈ...ಬೈ ಅಂತಾ ಹೇಳಿ ಡ್ಯೂಟಿಗೆ  ಹೊರಟು ಹೋಗಿಯೇ ಬಿಟ್ಟಳು. ಅವಳ ಆಕ್ಟೀವಾ ಹೊಂಡಾದಿಂದ ಧೂಳೆದ್ದ ರಸ್ತೆಯ ಮೇಲೆ ಶೂನ್ಯ ನೋಟ ಹಾಯಿಸಿ ಮನೆ ಒಳಗೆ ಸೇರಿಕೊಂಡೆ. ಇನ್ನು  ನನ್ನ 2 ನೇ ಮಗಳು ಆಂತರ್ಯಳ ಮಾತುಗಳನ್ನ ಕೇಳೋದು ಆಂ...ಹೂಂ...ಅನ್ನೋದು ಇದ್ದಿದ್ದೇ ಬಿಡಿ. ಕೇವಲ 2ವರೆ ವರ್ಷದ ನನ್ನ ಮಗಳು ಕನ್ನಡವನ್ನ ಅರಳು ಹುರಿದಂತೆ ಮಾತನಾಡುತ್ತಾಳೆ. ದೊಡ್ಡವರೂ ಬೆಚ್ಚಿ ಬೀಳುವಂತೆ ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳುತ್ತಾಳೆ.
ಅವತ್ತೂ ಕೂಡ ಸಾಕಷ್ಟು ಸಮಯ ಅವಳ ಜೊತೆ ಆಟವಾಡುತ್ತಾ ಸಮಯ ಕಳೆದೆ. ಮದ್ಯಾಹ್ನದ ಗಡಿ ದಾಟುತ್ತಿದ್ದಂತೇ ನನಗೆ ಸ್ನಾನ ಮಾಡಿಕೊಳ್ಳೋಣ ಅನ್ನಿಸಿತ್ತು. ಹಾಗೂ ಹೀಗೂ ಮಗಳನ್ನು ಪುಸಲಾಯಿಸಿ ಟಿವಿ ಯಲ್ಲಿ ಕಾರ್ಟೂನ್ ನೆಟ್ ವರ್ಕ್ ಹಾಕಿಕೊಟ್ಟು  ಮೆಲ್ಲನೆ ಬಾತ್ ರೂಮ್ ಸೇರಿಕೊಂಡೆ.  ಹೋಗೋ ಮುನ್ನ '' ಮಗಳೇ ಬೇಗ ಬರ್ತೀನೀ....ಬೋಲ್ಟ್ ಹಾಕಿರೋಲ್ಲಾ....ಭಯ ಆದ್ರೆ ನನ್ನನ್ನ ಕರಿ..ಆಯ್ತಾ,,,? ಅಂತಾ ಹೇಳಿದ್ದೆ.
ಮದ್ಯಾಹ್ನದ ಸಮಯದಲ್ಲಿ ಸ್ನಾನ ಮಾಡೋದು ಅಂದ್ರೆ ಅತ್ತ ತಣ್ಣಗೂ ಅಲ್ಲ ಇತ್ತ ಬಿಸಿಯೂ ಅಲ್ಲ ಅನ್ನೋ ಪರಿಸ್ಥಿತಿ. ಒಂದು ಹತ್ತು ನಿಮಿಷ ಸ್ನಾನದ ಶಾಸ್ತ್ರ ಮುಗಿಸಿ ಹೊರಗೆ ಬರೋದಕ್ಕೆ ಬಾಗಿಲು ತೆಗೆಯಲು ಯತ್ನಿಸಿದೆ.....,
ಏನಾಶ್ಚರ್ಯಾ.....?!!!!..., ನನಗೆ ಗೊತ್ತಿಲ್ಲದಂತೇ ಬಾಗಿಲು ಭದ್ರವಾಗಿ ಕುಳಿತುಕೊಂಡಿದೆ.....!!. ದಬಾಯಿಸಿ ಎಳೆದೆ...ಊಹುಂ ಬರಲ್ಲಿಲ್ಲ. ದಮ್ ಕಟ್ಟಿ ಇದ್ದ ಶಕ್ತಿಯನ್ನೆಲ್ಲಾ ಹಾಕಿ ಎಳೆದೆ. ಹ್ಯಾಂಡಲ್ ಕಿತ್ತು ಕೈಗೆ ಬಂದು ದಬಾರನೆ ಬಾತ್ ರೂಂ ನಲ್ಲಿ ಪಲ್ಟಿ ಹೊಡೆದೆ. 2 ಬಕೆಟ್ ಗಳು ನನ್ನ ಪುಟ್ಟ ದೇಹದ ಅಡಿ ಸಿಲುಕಿ ಮೃತಪಟ್ಟವು.
ಎಸ್ .......,,,  ಅಕ್ಷರಷಃ ಬಂಧಿತನಾಗಿದ್ದೆ. ನನ್ನ ಮಗಳು ಆಂತರ್ಯ ಹೊರಗಡೆಯಿಂದ ಬಾತ್ ರೂಂ ನ ಚಿಲಕ ಜಡಿದುಬಿಟ್ಟಿದ್ದಳು. ಅತ್ತ ಕಾರ್ಟೂನ್ ನೆಟ್ ವರ್ಕ್ ನ ವಾಲ್ಯೂಮ್ ಇಡೀ ಊರಿಗೆ ಕೇಳಿಸುವಂತೆ ಅಬ್ಬರಿಸುತ್ತಿತ್ತು. ನಾನು ಮಗಳೇ....ಆಂತೂ..., ಚಿನ್ನೂ....., ಪುಟ್ಟಮ್ಮಾ...., ಅಂತಾ ಕೂಗೀ ಕೂಗೀ ಸಾಕಾಗಿ ಹೋದೆ.  ಏನೂ ಪ್ರಯೋಜನವಾಗಲ್ಲಿಲ್ಲ.
ಬಾತ್ ರೂಂ ನ ಗೋಡೆಗೆ ಗೀಜರ್ ನ ಪೈಪ್ ಲೈನ್ ಅಳವಡಿಸಿದ್ದ ಕಾರಣಕ್ಕೆ ಅದರ ಬಿಸಿ ಇಡೀ ಬಾತ್ ರೂಂ ನ್ನು ಆವರಿಸುತ್ತಿತ್ತು.  ಅತ್ತ ಕಿಟಕಿಗೆ ಸಮಾನಾಂತರದಲ್ಲಿ ಬಟ್ಟೆ ಒಣ ಹಾಕಿದ್ದ ಕಾರಣ ಗಾಳಿಯೂ ಬರುತ್ತಿಲ್ಲ....., ಆಹಾಹ...ಹ ಏನ್ ಹೇಳೋದು ಸ್ವಾಮಿ.., ಈಗ ಪಿಕ್ಚರ್ ನಲ್ಲಿ ಖಳನಾಯಕ ಸುದೀಪ್  ಸ್ಟೀಮ್ ಬಾತ್ ಗೆ ಕುಳಿತಂತೆ ಆಗಿತ್ತು ನನ್ನ ಪರಿಸ್ಥಿತಿ. ತಣ್ಣೀರು ಹುಯ್ದುಕೊಳ್ಳೋಣ ಅಂದ್ರೆ ಬಕೆಟ್ ಕೂಡ ಇಲ್ಲ. ಶವರ್ ಆನೆ ಮಾಡಿ ತಕ್ಕಮಟ್ಟಿಗೆ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವೀಯಾದೆ. ಸುಮಾರು ಒಂದೂವರೆ ಘಂಟೆ ಇದೇ ಪರಿಸ್ಥಿತಿಯಲ್ಲಿ ಬಾತ್ ರೂಂ ನಲ್ಲೇ ಕಳೆಯಬೇಕಾಗಿ ಬಂತು. ಮನೆಯ ಮುಂಬಾಗಿಲನ್ನೂ ಲಾಕ ಮಾಡಿದ್ದ ಕಾರಣ ಒಳಗೆ ಯಾರೂ ಬರುವಂತೆ ಇರಲ್ಲಿಲ್ಲ.  ಇತ್ತ ಆಂತರ್ಯ ಇದ್ದಕ್ಕಿದ್ದಂತೇ ಯಾವುದೂ ಸದ್ದು ಮಾಡದಂತೆ ಮೌನವಾಗಿರೋದು ಗಾಬರಿ, ಆತಂಕ ಹೆಚ್ಚಾಗುವಂತೆ ಮಾಡಿ ಎದೆಬಡಿತ ನಗಾರಿ ಬಡಿತದಂತೆ ಕೇಳಿಸುತ್ತಿತ್ತು.  ಇನ್ನೇನು ನನ್ನ ಕಣ್ಣ ಅಂಚಿನಲ್ಲಿ ನೀರ ಹನಿ ಮೂಡಬೇಕು......., ಪಪ್ಪಾ ಅನ್ನೋ ಮುದ್ದಾದ ಧ್ವನಿ...., ನನಗೆ ಹೋದ ಜೀವ ಮರಳಿ ಬಂದಿತ್ತು.
ಮೆಲ್ಲನೆ ಬಾತ್ ರೂಂ ಬಾಗಿಲಿನ ಚಿಲಕ ತೆಗೆದ ಆಂತರ್ಯ...., ಸ್ನಾನ ಆಯ್ತ ಪಪ್ಪಾ....? ನಿಮ್ಗೆ ಭಯ ಆಗ್ಬಾರ್ದು ಅಂತಾ ಬೋಲ್ಟ್ ಹಾಕಿದ್ದೇ.....ಅಂದ್ಲು.  ಅದೇನ್ ಭಯ ಬಿಡ್ರಿ ಸ್ನಾನ ಮಾಡಿ ನಂತರ ತೊಟ್ಟುಕೊಂಡಿದ್ದ ಬನಿಯನ್  ಸೇರಿದಂತೆ ಎಲ್ಲಾ ವಸ್ತ್ರಗಳು ಒದ್ದೆಯಾಗಿದ್ದವು. ಅದನ್ನ ಹೇಳಿಕೊಳ್ಳೋಕಾಗುತ್ಯೇ......?. ನನ್ನ ತುಂಟ ಮಗಳು ಬಾಗಿಲಿಗೆ ಚಿಲಕ ಜಡಿದು ಕಾರ್ಟೂನ್ ನೋಡ್ತಾ ಅಲ್ಲೇ ನಿದ್ದೆ ಮಾಡಿಟ್ಟಿದ್ದಾಳೆ. (ಹಾಳಾದೋವ್ನು ಅದ್ಯಾ ಕಿತ್ತೋದ ಕಾರ್ಟೂನ್ನೋ ಗೊತ್ತಿಲ್ಲ. ) ನಿದ್ದೆಯಿಂದ ಎದ್ದ ನಂತರ ನನ್ನ ನೆನಪಾಗಿ ಬಾಗಿಲು ತೆರೆದಿದ್ದಾಳೆ. ಪಾಪ ಅವಳಿಗೇನು ಗೊತ್ತು ಬಾತ್ ರೂಂ ನಲ್ಲಿ ಬಂಧಿಯಾಗಿದ್ದ ನಾನು ಅದೆಷ್ಟು ಹಾಡು ಹೇಳಿದ್ದೇ.....ಅದೆಷ್ಟು ದೇವರ ನಾಮ ಸ್ತೋತ್ರ ಮಾಡಿದ್ದೇ ಅಂತಾ....,