Tuesday, May 28, 2013

ಆ.....ರೆಸ್ಟ್.......,!

'' ರ್ರೀ...., ಬ್ಯಾಂಕ್ ನಲ್ಲಿ ಆಡಿಟಿಂಗ್ ನಡಿತಾ ಇದೆ. ಒಟ್ಟೊಟ್ಟಿಗೆ ಮೂರು ಬ್ರಾಂಚ್ ಗಳಿಗೆ ವಿಸಿಟ್ ಹಾಕಬೇಕು. ಪ್ಲೀಸ್ ಇವತ್ತು ಒಂದು ದಿನ ಆಂತೂನ ನೋಡ್ಕೊಳ್ಲೀ ಪ್ಲೀಸ್.....,
ನನ್ನ ಮನದನ್ನೆಯ ಮಾತಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ಯಾಕಂದ್ರೆ ತಿಂಗಳಿಗೆ ಹದಿನೈದು ದಿನ ಮಾತ್ರ ಮಗುವಿನ ಉಸ್ತುವಾರಿ ನೋಡಿಕೊಳ್ಳುವ ನನ್ನ ಮಹಾನ್ ಅತ್ತೆ ಈ ಬಾರಿ ಕೂಡ ಊರಿನ ದಾರಿ ಹಿಡಿದಿದ್ದರು. ನನ್ನ 2 ನೇ ಮಗಳು ಮಹಾನ್ ತುಂಟಿ ಆಂತರ್ಯಳನ್ನು ನೋಡಿಕೊಳ್ಳುವ ಗುರುತರ ಜವಾಬ್ದಾರಿ ನನ್ನ ಹೆಗಲೇರಿತ್ತು.  ಭಾನುವಾರದ ರಜೆಯನ್ನು ಶನಿವಾರಕ್ಕೇ ಪೋಸ್ಟ್ ಪೋನ್ ಮಾಡಿದ ನಾನು ಮಾತಿಲ್ಲದಂತೆ ಮಗಳ ಜೊತೆ ಕುಳಿತುಕೊಂಡೆ. ಅದ್ಯಾಕೋ ಏನೋ ಭಾನುವಾರವನ್ನ ಮಿಸ್ ಮಾಡಿಕೊಳ್ಳೋದು ಅಂದ್ರೆ ನನಗೆ ತುಂಬಾ ಬೇಜಾರಾಗುತ್ತೆ. ಅವತ್ತೇ ನನ್ನ ಅರ್ಧಾಂಗಿಗೂ ರಜಾ ಇರೋ ಕಾರಣ ನಾನೂ ಕೂಡ ಮಡದಿ ಮಕ್ಕಳ ಜೊತೆ ಮನೆಯಲ್ಲೇ  ಇರಲು ಬಯಸುತ್ತೇನೆ. ಅದರಲ್ಲೂ ಅವತ್ತು ನನಗೆ ಅಥ್ವಾ ನನ್ನ ಮಗಳು ಅಭಿಜ್ಞಾಳಿಗೆ ಇಷ್ಟವಾದ ನಾನ್ ವೆಜ್ ಅಡುಗೆ......, ಅದನ್ನ ನಾನ್ ಮತ್ತೆ ನನ್ನ ಹೆಂಡ್ತಿ ಜೊತೆ ಸೇರಿ ಮಾಡೋದ್ರಿಂದ ಅದೊಂಥರಾ ವಿಶೇಷ ಖುಷಿನೇ ಬಿಡಿ.
 ವಿಷಯಕ್ಕೆ ಬಂದು ಬಿಡುತ್ತೇನೆ ಆ ಶನಿವಾರ ನನ್ನಾಕೆ ನನಗೆ ಬಾಯ್....ಬೈ...ಬೈ ಅಂತಾ ಹೇಳಿ ಡ್ಯೂಟಿಗೆ  ಹೊರಟು ಹೋಗಿಯೇ ಬಿಟ್ಟಳು. ಅವಳ ಆಕ್ಟೀವಾ ಹೊಂಡಾದಿಂದ ಧೂಳೆದ್ದ ರಸ್ತೆಯ ಮೇಲೆ ಶೂನ್ಯ ನೋಟ ಹಾಯಿಸಿ ಮನೆ ಒಳಗೆ ಸೇರಿಕೊಂಡೆ. ಇನ್ನು  ನನ್ನ 2 ನೇ ಮಗಳು ಆಂತರ್ಯಳ ಮಾತುಗಳನ್ನ ಕೇಳೋದು ಆಂ...ಹೂಂ...ಅನ್ನೋದು ಇದ್ದಿದ್ದೇ ಬಿಡಿ. ಕೇವಲ 2ವರೆ ವರ್ಷದ ನನ್ನ ಮಗಳು ಕನ್ನಡವನ್ನ ಅರಳು ಹುರಿದಂತೆ ಮಾತನಾಡುತ್ತಾಳೆ. ದೊಡ್ಡವರೂ ಬೆಚ್ಚಿ ಬೀಳುವಂತೆ ದೊಡ್ಡ ದೊಡ್ಡ ಪ್ರಶ್ನೆಗಳನ್ನ ಕೇಳುತ್ತಾಳೆ.
ಅವತ್ತೂ ಕೂಡ ಸಾಕಷ್ಟು ಸಮಯ ಅವಳ ಜೊತೆ ಆಟವಾಡುತ್ತಾ ಸಮಯ ಕಳೆದೆ. ಮದ್ಯಾಹ್ನದ ಗಡಿ ದಾಟುತ್ತಿದ್ದಂತೇ ನನಗೆ ಸ್ನಾನ ಮಾಡಿಕೊಳ್ಳೋಣ ಅನ್ನಿಸಿತ್ತು. ಹಾಗೂ ಹೀಗೂ ಮಗಳನ್ನು ಪುಸಲಾಯಿಸಿ ಟಿವಿ ಯಲ್ಲಿ ಕಾರ್ಟೂನ್ ನೆಟ್ ವರ್ಕ್ ಹಾಕಿಕೊಟ್ಟು  ಮೆಲ್ಲನೆ ಬಾತ್ ರೂಮ್ ಸೇರಿಕೊಂಡೆ.  ಹೋಗೋ ಮುನ್ನ '' ಮಗಳೇ ಬೇಗ ಬರ್ತೀನೀ....ಬೋಲ್ಟ್ ಹಾಕಿರೋಲ್ಲಾ....ಭಯ ಆದ್ರೆ ನನ್ನನ್ನ ಕರಿ..ಆಯ್ತಾ,,,? ಅಂತಾ ಹೇಳಿದ್ದೆ.
ಮದ್ಯಾಹ್ನದ ಸಮಯದಲ್ಲಿ ಸ್ನಾನ ಮಾಡೋದು ಅಂದ್ರೆ ಅತ್ತ ತಣ್ಣಗೂ ಅಲ್ಲ ಇತ್ತ ಬಿಸಿಯೂ ಅಲ್ಲ ಅನ್ನೋ ಪರಿಸ್ಥಿತಿ. ಒಂದು ಹತ್ತು ನಿಮಿಷ ಸ್ನಾನದ ಶಾಸ್ತ್ರ ಮುಗಿಸಿ ಹೊರಗೆ ಬರೋದಕ್ಕೆ ಬಾಗಿಲು ತೆಗೆಯಲು ಯತ್ನಿಸಿದೆ.....,
ಏನಾಶ್ಚರ್ಯಾ.....?!!!!..., ನನಗೆ ಗೊತ್ತಿಲ್ಲದಂತೇ ಬಾಗಿಲು ಭದ್ರವಾಗಿ ಕುಳಿತುಕೊಂಡಿದೆ.....!!. ದಬಾಯಿಸಿ ಎಳೆದೆ...ಊಹುಂ ಬರಲ್ಲಿಲ್ಲ. ದಮ್ ಕಟ್ಟಿ ಇದ್ದ ಶಕ್ತಿಯನ್ನೆಲ್ಲಾ ಹಾಕಿ ಎಳೆದೆ. ಹ್ಯಾಂಡಲ್ ಕಿತ್ತು ಕೈಗೆ ಬಂದು ದಬಾರನೆ ಬಾತ್ ರೂಂ ನಲ್ಲಿ ಪಲ್ಟಿ ಹೊಡೆದೆ. 2 ಬಕೆಟ್ ಗಳು ನನ್ನ ಪುಟ್ಟ ದೇಹದ ಅಡಿ ಸಿಲುಕಿ ಮೃತಪಟ್ಟವು.
ಎಸ್ .......,,,  ಅಕ್ಷರಷಃ ಬಂಧಿತನಾಗಿದ್ದೆ. ನನ್ನ ಮಗಳು ಆಂತರ್ಯ ಹೊರಗಡೆಯಿಂದ ಬಾತ್ ರೂಂ ನ ಚಿಲಕ ಜಡಿದುಬಿಟ್ಟಿದ್ದಳು. ಅತ್ತ ಕಾರ್ಟೂನ್ ನೆಟ್ ವರ್ಕ್ ನ ವಾಲ್ಯೂಮ್ ಇಡೀ ಊರಿಗೆ ಕೇಳಿಸುವಂತೆ ಅಬ್ಬರಿಸುತ್ತಿತ್ತು. ನಾನು ಮಗಳೇ....ಆಂತೂ..., ಚಿನ್ನೂ....., ಪುಟ್ಟಮ್ಮಾ...., ಅಂತಾ ಕೂಗೀ ಕೂಗೀ ಸಾಕಾಗಿ ಹೋದೆ.  ಏನೂ ಪ್ರಯೋಜನವಾಗಲ್ಲಿಲ್ಲ.
ಬಾತ್ ರೂಂ ನ ಗೋಡೆಗೆ ಗೀಜರ್ ನ ಪೈಪ್ ಲೈನ್ ಅಳವಡಿಸಿದ್ದ ಕಾರಣಕ್ಕೆ ಅದರ ಬಿಸಿ ಇಡೀ ಬಾತ್ ರೂಂ ನ್ನು ಆವರಿಸುತ್ತಿತ್ತು.  ಅತ್ತ ಕಿಟಕಿಗೆ ಸಮಾನಾಂತರದಲ್ಲಿ ಬಟ್ಟೆ ಒಣ ಹಾಕಿದ್ದ ಕಾರಣ ಗಾಳಿಯೂ ಬರುತ್ತಿಲ್ಲ....., ಆಹಾಹ...ಹ ಏನ್ ಹೇಳೋದು ಸ್ವಾಮಿ.., ಈಗ ಪಿಕ್ಚರ್ ನಲ್ಲಿ ಖಳನಾಯಕ ಸುದೀಪ್  ಸ್ಟೀಮ್ ಬಾತ್ ಗೆ ಕುಳಿತಂತೆ ಆಗಿತ್ತು ನನ್ನ ಪರಿಸ್ಥಿತಿ. ತಣ್ಣೀರು ಹುಯ್ದುಕೊಳ್ಳೋಣ ಅಂದ್ರೆ ಬಕೆಟ್ ಕೂಡ ಇಲ್ಲ. ಶವರ್ ಆನೆ ಮಾಡಿ ತಕ್ಕಮಟ್ಟಿಗೆ ಜೀವ ಉಳಿಸಿಕೊಳ್ಳುವ ಪ್ರಯತ್ನದಲ್ಲಿ ಯಶಸ್ವೀಯಾದೆ. ಸುಮಾರು ಒಂದೂವರೆ ಘಂಟೆ ಇದೇ ಪರಿಸ್ಥಿತಿಯಲ್ಲಿ ಬಾತ್ ರೂಂ ನಲ್ಲೇ ಕಳೆಯಬೇಕಾಗಿ ಬಂತು. ಮನೆಯ ಮುಂಬಾಗಿಲನ್ನೂ ಲಾಕ ಮಾಡಿದ್ದ ಕಾರಣ ಒಳಗೆ ಯಾರೂ ಬರುವಂತೆ ಇರಲ್ಲಿಲ್ಲ.  ಇತ್ತ ಆಂತರ್ಯ ಇದ್ದಕ್ಕಿದ್ದಂತೇ ಯಾವುದೂ ಸದ್ದು ಮಾಡದಂತೆ ಮೌನವಾಗಿರೋದು ಗಾಬರಿ, ಆತಂಕ ಹೆಚ್ಚಾಗುವಂತೆ ಮಾಡಿ ಎದೆಬಡಿತ ನಗಾರಿ ಬಡಿತದಂತೆ ಕೇಳಿಸುತ್ತಿತ್ತು.  ಇನ್ನೇನು ನನ್ನ ಕಣ್ಣ ಅಂಚಿನಲ್ಲಿ ನೀರ ಹನಿ ಮೂಡಬೇಕು......., ಪಪ್ಪಾ ಅನ್ನೋ ಮುದ್ದಾದ ಧ್ವನಿ...., ನನಗೆ ಹೋದ ಜೀವ ಮರಳಿ ಬಂದಿತ್ತು.
ಮೆಲ್ಲನೆ ಬಾತ್ ರೂಂ ಬಾಗಿಲಿನ ಚಿಲಕ ತೆಗೆದ ಆಂತರ್ಯ...., ಸ್ನಾನ ಆಯ್ತ ಪಪ್ಪಾ....? ನಿಮ್ಗೆ ಭಯ ಆಗ್ಬಾರ್ದು ಅಂತಾ ಬೋಲ್ಟ್ ಹಾಕಿದ್ದೇ.....ಅಂದ್ಲು.  ಅದೇನ್ ಭಯ ಬಿಡ್ರಿ ಸ್ನಾನ ಮಾಡಿ ನಂತರ ತೊಟ್ಟುಕೊಂಡಿದ್ದ ಬನಿಯನ್  ಸೇರಿದಂತೆ ಎಲ್ಲಾ ವಸ್ತ್ರಗಳು ಒದ್ದೆಯಾಗಿದ್ದವು. ಅದನ್ನ ಹೇಳಿಕೊಳ್ಳೋಕಾಗುತ್ಯೇ......?. ನನ್ನ ತುಂಟ ಮಗಳು ಬಾಗಿಲಿಗೆ ಚಿಲಕ ಜಡಿದು ಕಾರ್ಟೂನ್ ನೋಡ್ತಾ ಅಲ್ಲೇ ನಿದ್ದೆ ಮಾಡಿಟ್ಟಿದ್ದಾಳೆ. (ಹಾಳಾದೋವ್ನು ಅದ್ಯಾ ಕಿತ್ತೋದ ಕಾರ್ಟೂನ್ನೋ ಗೊತ್ತಿಲ್ಲ. ) ನಿದ್ದೆಯಿಂದ ಎದ್ದ ನಂತರ ನನ್ನ ನೆನಪಾಗಿ ಬಾಗಿಲು ತೆರೆದಿದ್ದಾಳೆ. ಪಾಪ ಅವಳಿಗೇನು ಗೊತ್ತು ಬಾತ್ ರೂಂ ನಲ್ಲಿ ಬಂಧಿಯಾಗಿದ್ದ ನಾನು ಅದೆಷ್ಟು ಹಾಡು ಹೇಳಿದ್ದೇ.....ಅದೆಷ್ಟು ದೇವರ ನಾಮ ಸ್ತೋತ್ರ ಮಾಡಿದ್ದೇ ಅಂತಾ....,