Friday, August 28, 2009

ಒಂದಷ್ಟು ಭಾವನೆಗಳು....

ಈ ಯೌವನಾ ಅನ್ನೋದು ಹೇಗಿರುತ್ತೇ....?
        ಹೇ ಯೌವನಾ......,
              ನೀನೆಷ್ಟು ವೇಗ....?
              ಚಿಗುರು ಮೀಸೆಯ ಚೆಲುವ ತುಂಬಿ
              ಪ್ರೇಮ ಮಿಡಿತಕೆ ಶೃತಿಯಾಗುವೆ
ಹೇ ಯೌವನಾ......,
     ನೀನೆಷ್ಟು ರಸಿಕ...?
      ನೀಳ ಜಡೆಗಳ ಮೋಟುಗೊಳಿಸಿ
      ನೈಜ್ಯ ಚೆಲುವಿಗೆ ಬಣ್ಣ ಬಳಿವೆ
ಹೇ ಯೌವನಾ.....,
      ನೀನೆಷ್ಟು ಚಂಚಲಾ....?
       ಖಾಲಿ ಹೃದಯದ ಧ್ವಾರ ತೆರೆದು
        ಚಿತ್ತ ಭ್ರಮಿಸುವ ಕನಸು ತರುವೆ
ಹೇ ಯೌವನಾ....,
        ನೀನೆಷ್ಟು ಕ್ರೂರಿ....?
ಹರೆಯದಲ್ಲಿ ಕಿಚ್ಚೆಬ್ಬಿಸಿ
ಬದುಕ ತುಂಬಾ ನೆನಪಾಗುವೆ.
                                 ಜೋಡಿ
ಅಮ್ಮ...,

ಇವಳು ನೋವಿನಲ್ಲೂ ನಗುವ ಚೆಲ್ಲೋ ಸೌಮ್ಯ ರೂಪ
ವಿಶಾದ ಹೃದಯದೊಳಗೆ ಬೆಳಕು ತರುವ ಆಶಾದೀಪ
         ನೂರೆಂಟು ಭಾವಮಂಥನದೊಳಗೆ ಚಿಂತನೆಯ ಮಂದಗಮನೆ
         ಬಾಳು ಬದುಕಿನ ಮೂಸೆಯೊಳಗೆ ತೇಯ್ದು ಬಂದ ಪ್ರಶಾಂತವಧನೆ
ಇವಳ ನಗು ಉರಿಯೊಳಗೆ ತಂಪು ಸಿಂಚನ
ಮುಗ್ದ ಮಾತು ಮನಸ್ಸಿನೊಳಗೆ ಪ್ರೀತಿ ಚೇತನ
           ಇವಳು ಇವಳೇ.., ಕಳೆಯಲಾಗದ ಸೊತ್ತು.
           ಮುಕ್ಕೋಟಿ ವಜ್ರ ವೈಢೋರ್ಯ ಮುತ್ತು.
                                                                 ಜೋಡಿ
ಮದುವೆಗೆ ಮುನ್ನ ನನ್ನದೊಂದು ಕಿವಿಮಾತು.
  
      ಮದುವೀ ಅಂತಾ ಕುಣಿಬ್ಯಾಡ ಹುಡುಗಾ
       ಹೋರಿಗೆ ಮೂಗಿನ ದಾರ.....,
       ಮಡದೀನ ಕಂಡು ಕಿಸಿಬ್ಯಾಡ ಬೆಡಗಾ
      ಬಲಿಯಾಗೋ ಹ್ವಾತಕೂ ಹಾರ.
ರಾತ್ರಿಯ ಹುಸಿನಗು ಹಗಲಿನ ಕತ್ತರಿ
ಬೇಡಿಕೆ ಪಟ್ಟಿಯ ಭಾರ...,
ಸೋತೆಯಾ..? ಸಿದ್ದನಾಗು ನಿನಗೈತೆ ಹುತ್ತರಿ
ಸಿಡುಕಿನ ಸಾರು ಖಾರಾ....ಖಾರ.
        ವರ್ಷಾದಿ ಕಳೆವುದೋ ಕನಸಿನ ಸಂತಸ
        ಕುಂಯ್ಯಾ,,,, ಅಂತಾವೋ ಕೂಸು
        ಹರ್ಷಾದಿ ಅಪ್ಪನಾದ್ರೆ ಮುಗ್ಯಾಂಗಿಲ್ಲ ಕೆಲಸ
       ಕೂಡಿಸು ಡೊನೆಷನ್ ಗೆ ಕಾಸು.
ಸಂಪತ್ತು ದೌಲತ್ತು ಇಟ್ಕೊಂಡೆ ಅಂದ್ರೆ
ನಿತ್ಯವೂ ನಿನಗೆ ಕೈಲಾಸ
ಬರಬಾತು ನಿಯತ್ತು ಅಂದ್ಕೊಂಡು ಬಂದ್ರೆ
ಪ್ರತಿನಿತ್ಯ ನಿನಗೆ ವನವಾಸ.
                                   ಜೋಡಿ

Sunday, May 24, 2009

ಹೆಜ್ಜೆ

ಇವತ್ತು ಜೀವನದ ಒಂದಷ್ಟು ನೆಮ್ಮದಿಯ ಕ್ಷಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದೇನೆ. ಈ ಹಿಂದೆ ಇದ್ದ ನೋವು, ಅಸಹನೆ, ಸೆಡವು ಕೊಂಚ ಮಟ್ಟಿಗೆ ತಗ್ಗಿದೆ. ನನ್ನೆದುರು ನನ್ನ 3 ವರ್ಷದ ಮಗಳು ಅಭಿಜ್ಞಾಳ ನಗು, ತೊದಲ್ನುಡಿ, ತುಂಟಾಟ, ಚಿನ್ನಾಟ ಇತ್ಯಾದಿಗಳಿವೆ. ಅಮ್ಮ ಜೊತೆಗಿದ್ದಾರೆ, ನನ್ನ ಪ್ರೀತಿಯ ಪತ್ನಿ ಕೂಡ ನನ್ನ ಹೆಜ್ಜೆಗಳ ಹಿಂದಿದ್ದಾಳೆ. ನೆಚ್ಚಿದ ನೌಕರಿ ಕೈ ಹಿಡಿದಿದೆ ಅದೇ ರೀತಿ ಸ್ನೇಹಿತರ ಹಾಗು ಹಿತೈಷಿಗಳ ಬಳಗ ಬೆಳೆದಿದೆ. ಆದರೂ ಅದ್ಯಾಕೋ ನಡೆದು ಬಂದ ಹಾದಿಯಲ್ಲಿ ಮುಡಿದ ಹೆಜ್ಜೆಗಳನ್ನು ತಿರುಗಿ ನೊಡುತ್ತೇನೆ, ಅಲ್ಲಿ ಬಹಳಷ್ಟು ಮಂದಿ ನೆನಪಾಗುತ್ತಾರೆ. ಬರವಣಿಗೆಗೆ ಹಾದಿ ತೋರಿದ ತಂದೆ ರೋಜಾ, ವೃತ್ತಿ ಜೀವನ ಗುರು ಕೆ.ಎಂ ಮಂಜುನಾಥ್, ನಿಂತ ನಿಲುವಲ್ಲೇ ನಗುನಗುತ್ತಾ ನನ್ನನ್ನು ಹಾಗು ನನ್ನ ಬದುಕನ್ನು ಧೂಳಿಪಟ ಮಾಡಲು ಹೊರಟಿದ್ದ ಒಬ್ಬ ಮಹಾನ್ ಲೆಪ್ಟಿಸ್ಟ್ ಬರಹಗಾರ....
ಅದೇ ಹೆಜ್ಜೆಗಳು....., ಅಲ್ಲೆಲ್ಲೋ ಒಂದು ಸ್ವಲ್ಪ ಭಾರ..., ಒಂದಷ್ಟು ಹಗುರ.
ಆದರೂ ನನ್ನ ನೆನಪಿನ ಪುಟಗಳಲ್ಲಿ, ಎಡವಿದ ಹೆಜ್ಜೆಗಳ ಗುರುತುಗಳಲ್ಲಿ, ಸೋತು ಕುಳಿತಾಗ ಬಿಟ್ಟ ನಿಟ್ಟುಸಿರಿನಲ್ಲಿ ಅದೇ ಬರಹಗಾರ ನೆನಪಾಗುತ್ತಾನೆ. ಮತ್ತೆ ಎದ್ದು ನಡೆ ಅನ್ನೊವಷ್ಟರ ಮಟ್ಟಿಗೆ ಪ್ರೇರಣೆಯಾಗುತ್ತಾನೆ.
ಇಲ್ಲಿ ನಾನು ಹಂಚಿಕೊಳ್ಳಲು ಇಚ್ಚಿಸುವ ವಿಷಯಗಳು ಸಾಕಷ್ಟಿವೆ. ಇಂದಿನಿಂದ ಬರೆಯಲು ಆರಂಬಿಸುತ್ತಿದ್ದೇನೆ.
ಹಾಂ.., ಎಲ್ಲಕ್ಕೂ ಮುನ್ನ ಭಯೋತ್ಪಾದಕರನ್ನು ಪ್ರಿತಿಸು ಅಂತಾ ಬುದ್ದಿವಾದ ಹೇಳುತ್ತಿದ್ದ ನನ್ನೊಬ್ಬ ಗೆಳೆಯನಿಗೂ ಹಾಗು ತನ್ನನ್ನು ತಾನೇ ವೇದಾಂತಿ ಎಂದುಕೊಳ್ಳುವ ಮೂಲಕ ಬೇರೆಯವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದ ಮಹಾನ್ ಬರಹಗಾರನಿಗೂ ನೀವೇ ನನ್ನ ಪ್ರೇರಣೆ ಅನ್ನೋ ಮಾತನ್ನ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ.

ಅಭಿಜ್ಞ



ತ್ಮೀಯರೇ ನಮಸ್ಕಾರಗಳು ಮತ್ತು ನನ್ನ ಅಂತರ್ಜಾಲ ತಾಣಕ್ಕೆ ನಿಮಗೆ ಸುಸ್ವಾಗತ. ಇಡೀ ದಿನವನ್ನು ಒತ್ತಡದಲ್ಲೇ ಕಳೆಯುವ ನನಗೆ ನನ್ನ ಪತ್ರಕರ್ತ ಗೆಳೆಯ ಜಯಕುಮಾರ್ ಈ ಬ್ಲಾಗ್ ಅನ್ನೋ ಅಧ್ಬುತವನ್ನು ಪರಿಚಯಿಸಿದ್ದಾರೆ. ಇಲ್ಲಿ ಒಂದಷ್ಟು ಭಾವನೆಗಳನ್ನು ಹರವಬಹುದು, ಅನಿಸಿಕೆಗಳಿಗೆ ಉತ್ತರ ಕೇಳಬಹುದು ಅಂತಾ ಏನೇನೊ ಹೇಳಿದ್ದಾರೆ. ಹಾಗಾಗಿ ನನ್ನ ಮನಸ್ಸಿನ ಭಾವನೆಗಳು,ಸಂಘರ್ಷಗಳು ತಾಕಲಾಟವನ್ನು ಅಕ್ಷರ ರೂಪದಲ್ಲಿ ಮುಕ್ತ ಮನಸ್ಸಿನಿಂದ ಇಲ್ಲಿ ತೆರೆದಿಡುವ ಯತ್ನ ಮಾಡುತ್ತಿದ್ದೇನೆ. ಇದು ನಿಮಗಿಷ್ಟವಾಗಬಹುದು, ಇಲ್ಲವೇ ಇಷ್ಟವಾಗದಿರಬಹುದು, ಏನೇ ಇದ್ದರೂ ಮುಕ್ತ ಸಂವಾದ ಮತ್ತು ಪ್ರತಿಕ್ರಿಯೆಗೆ ನನ್ನದು ತೆರೆದ ಮನಸ್ಸು. ವಿಚಾರಗಳ ಚಿಂತನ-ಮಂಥನವಾದಾಗ ಮನಸ್ಸು ,ಹಗುರ ಅದಕ್ಕೆಂದೇ ಮೀಸಲು ಈ ತಾಣ ಬನ್ನಿ ಹಗುರಾಗೋಣ.

WEL COME TO MY BLOG