Monday, December 19, 2011

ಉಗ್ರಗಾಮಿ......,

ಆತ ನಿಜವಾಗಲೂ ಆಗಂತುಕ. ಆ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಅವನು ರಸ್ತೆಯ ಉದ್ದಗಲವನ್ನು ಇಂಚಿಂಚೂ ಬಿಡದೆ ಕಣ್ಣಲ್ಲೇ ಅಳತೆ ಮಾಡಿಕೊಳ್ಳುತ್ತಿದ್ದ.  ಜೇಬಿನಿಂದ  ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಅದೇನೇನೋ ಬರೆದುಕೊಳ್ಳುತ್ತಿದ್ದ.  ಅವನ ಈ ವರ್ತನೆಯ ಬಗ್ಗೆ ಹಲವಾರು ಕಿಟಕಿಗಳಿಂದ  ಅನುಮಾನದ ನೋಟ ಹೊರಬಿದ್ದಿದ್ದವು.  ಆ ನೋಟಗಳ ಜೊತೆಗೆ ಹಲವರ ಎದೆ ಬಡಿತದ ವೇಗವೂ ಹೆಚ್ಚಾಗುತ್ತಿತ್ತು. ಅವನು ನಡೆಯುತ್ತಲೇ ಇದ್ದ.....,  ಆ ಬೀದಿಯಿಂದ ಈ ಬೀದಿಗೆ....., ಆ ಸರ್ಕಲ್ ನಿಂದ ಈ ಸರ್ಕಲ್ ಗೆ...., ಅಲ್ಲಿ ಯುವಕರ ಗುಂಪೊಂದು ಇವನನ್ನು ನೋಡಿತ್ತು. ಪಸ್ಟ್ ಮೈನ್ ಪಿಪ್ತ್ ಕ್ರಾಸ್ ನ ಲಲಿತಮ್ಮ ನೈನ್ತ್ ಕ್ರಾಸ್ ನಲ್ಲಿರುವ ಮಂಜುಳಕ್ಕನಿಗೆ ಫೋನ್ ಮಾಡಿದ್ಲು. '' ಏ ಮಂಜುಳಾ ಇಲ್ಯಾವನೋ ಬಂದಾವ್ನೆ ಕಣೇ....., ನೋಡೋಕೆ ಕಳ್ಳನ್ ಥರಾ ಕಾಣ್ತಾವ್ನೇ......, ಅದಕ್ಕವಳು ಗಾಬರಿ ಬಿದ್ದು '' ಅಯ್ಯಯ್ಯೋ ಅಲ್ಲಿಗೂ ಬಂದಿದಾನಾ....? ಅದೇ ಬಿಳಿ ದೊಗಲೆ ಶರ್ಟೂ.., ಪೈಜಾಮಾ ಹಾಕಿದಾನಲ್ಲಾ......?!! ಅವ್ನೇ ತಾನೇ.....? ಲಲಿತಮ್ನನ ಹಣೆಯಲ್ಲಿ ಬೆವರಿಳಿಯಲು ಆರಂಭವಾಯ್ತು. ಯಾಕಂದ್ರೆ ಅವನು ಅವಳ ಮನೆಯ ಮುಂದೆಯೇ ನಿಂತು ಅದೇನನ್ನೋ ಗುರುತು ಹಾಕಿಕೊಳ್ಳುತ್ತಿದ್ದ. ಹೂಂ...ಹೂಂ...., ಅಂತಾ ಉಗುಳಿ ನುಂಗಿಕೊಂಡ ಲಲಿತಮ್ಮ ಪೋನ್ ಕುಕ್ಕಿದಳು. ಭಯದಿಂದಲೇ ಕಳ್ಳ ಹೆಜ್ಜೆ ಇಡುತ್ತಾ ಬಂದು ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅವ ಅಲ್ಲಿರಲ್ಲಿಲ್ಲ. ಲಲಿತಮ್ಮನಿಗೆ ಬಾಗಿಲು ತೆರೆಯಲೂ ಭಯ. ಅಡುಗೆ ಮನೆಯೊಳಗೆ ಇದ್ದಕ್ಕಿದ್ದಂತೆ ಪಾತ್ರೆ ಕೆಳಕ್ಕೆ ಬಿದ್ದ ಸದ್ದು. ಕಿಟಾರನೇ ಕಿರುಚಿದ ಲಲಿತಮ್ಮ ಮನೆಯ ಬಾಗಿಲು ತೆಗೆದು ಹೊರಗೋಡಿದಳು. ಅವಳ ಬೊಬ್ಬೆಗೆ ಬೆದರಿದ ಕಳ್ಳಬೆಕ್ಕೊಂದು ಅಡುಗೆ ಮನೆಯಿಂದ ಅವಳ ಜೊತೆಗೇ ಓಡಿ ಬಂತು.
          ಬೀದಿ ಬೀದಿ ಅಲೆಯುತ್ತಿದ್ದ ಆ ಆಗಂತುಕ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿ ಬಂದು ನಿಂತ. ಚಲ್ ಮೇರೇ ಗೋಡೇ ಚಲ್  ಚಲ್ ಚಲ್ ಅಂತಾ ಹಿಂದಿ ಹಾಡು ಹಾಡತೊಡಗಿದೆ. ಆ ಹಾಡಿಗೆ ತಕ್ಕಂತೆ ತಾನು ಹಾವಭಾವ ಪ್ರದರ್ಶಿಸತೊಡಗಿದೆ. ಮಕ್ಕಳಿಗೆ ವಿಚಿತ್ರ ಎನ್ನಿಸಿದರೂ ಅದೇನೋ ಒಂದು ರೀತಿಯ ಖುಷಿ. ಅವನ ನಟನೆಗೆ ಹಾಸ್ಯಕ್ಕೆ ಮನಸೋತ ಅವರಲ್ಲಿ ಅದ್ಯಾವುದೋ ಅವ್ಯಕ್ತ ಆಪ್ತ ಭಾವ..........,
        ಮಕ್ಕಳ ಜೊತೆ ಕಟ್ಟೆಯ ಮೇಲೆ ಕುಳಿತ ಅವನು ಮೆರಾ ನಾಮ್ ದಾದಾಪೀರ್ ಎಂದ. ಮಕ್ಕಳೂ ಕೂಡ ಏ..... ದಾದಪೀರ್ ಅಂತಾ ಚಪ್ಪಾಳೆ ತಟ್ಟಿ  ಕುಣಿದಾಡಿದವು. ಖುಷಿಯೋ ಖುಷಿ. 
     ಲಲಿತಮ್ಮ ಗಾಬರಿಯಿಂದ ಕೂಗಿ ಹೊರಗೋಡಿ ಬಂದಿದ್ದನ್ನು ಕಂಡ ಆ ಕ್ರಾಸ್ ನ ಮಹಿಳೆಯರೆಲ್ಲಾ ಮನೆಯಿಂದ ಹೊರಗೆ ಬಂದರು. ಎಲ್ಲರಿಗೂ ಆ  ಆಗಂತುಕನ ಬಗ್ಗೆ ಭಯ. ಹತ್ತಾರು ಮಹಿಳೆಯರು......ನೂರಕ್ಕೂ ಹೆಚ್ಚು ಫೋನ್ ಕಾಲ್.......,   
    ಕ್ಷಣ ಮಾತ್ರದಲ್ಲಿ ಅಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಹಾಜರಾದರು. ಹಾಗೇ ಸೈನ್ಯ ಕಟ್ಟಿ ಹೊರಟ ಆ ಯುವಕರಿಗೆ ಮಕ್ಕಳ ಜೊತೆ ಆಟವಾಡುತ್ತಿದ್ದ ಆ ಆಗಂತುಕ ಕಂಡ. ಕೊಳೆಯಾದ ಬಿಳಿ ಪೈಜಾಮ, ದೊಗಲೆ ಶರ್ಟ್, ಉದ್ದದ ಗಡ್ಡ. ತಲೆಯ ಮೇಲೊಂದು ಬಿಳಿ ಟೋಪಿ ಅದಕ್ಕೆ ವಿಚಿತ್ರವಾಗಿ ಸುತ್ತಿರುವ ದಾರ.........., 
     ಏ ಟೆರರಿಸ್ಟ್ ಕಣೋ........, ಗುಂಪಿನಲ್ಲಿದ್ದ ಒಬ್ಬ ಕೂಗಿ ಹೇಳಿದ. ಡೌಟೇ ಇಲ್ಲ ಮಗಾ...ಮತ್ತೊಬ್ಬ ಧನಿ ಸೇರಿಸಿದ.  ಎಲ್ಲರೂ ಅವನತ್ತ ನುಗ್ಗಿ ಬಂದರು. ಗಾಬರಿಗೊಂಡ ಅವ ಎದ್ದು ನಿಂತು ಭಾಯ್ ಸಾಬ್ ಕ್ಯಾ ಹುವಾ.......?  ಅಂತಾ ನಡುಗುತ್ತಾ ಕೇಳಿದ. ಯಾರೋ ನೀನು..........? ಏನ್ ಹೆಸ್ರು......? ಇಲ್ಲೇನ್ಮಾಡ್ತಿದ್ದೀಯಾ.......? ಗುಂಪಿನ ಮುಖಂಡ ಒಂದೇ ಸವನೆ ಕೇಳಲಾರಂಭಿಸಿದ. ಅವನಿಗೆ ಕನ್ನಡ ಅರ್ಥವಾಗುತ್ತಾ ಇಲ್ಲ. ಅಲ್ಲಿದ್ದವರ ಪೈಕಿ ಯಾರೋ ಒಬ್ಬ ನಾಮ್...ನಾಮ್ ಎಂದು ಕೈಯಾಡಿಸಿದ. ಧಾದಾಫೀರ್ ಮೆರಾ ನಾಮ್ ದಾಧಫೀರ್ .............., ಕ್ಯಾ ಚಾಹಿಯೇ ಆಪ್ ಲೋಗೋಂಕೋ.......? ಆತ ಕೇಳುತ್ತೇ ಇದ್ದ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಅವರು ಅವನನ್ನು ನಾಯಿ ಬಡಿದಂತೆ ಬಡಿಯಲಾರಂಭಿಸಿದರು. ಅವನ ಕಿರುಚಾಡಲಾರಂಬಿಸಿದ. ಇವೆಲ್ಲವನ್ನೂ ಕಂಡ ಮಕ್ಕಳು ಗಾಬರಿಬಿದ್ದು ದಿಕ್ಕೆಟ್ಟು ಓಡಿ ಮನೆ ಸೇರಿಕೊಂಡವು.
        ಉಗ್ರಗಾಮಿ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ  ಆ ಕೃಶಕಾಯ ಆಗಂತುಕ ಅರೆ ಜೀವವಾಗಿ ಹೋಗಿದ್ದ. ಅದೇನನ್ನೋ ಸಾಧಿಸಿದ ಖುಷಿಯಲ್ಲಿ ಯುವಕರು ಮೀಸೆ ತಿರುವಿಕೊಂಡು ನಿಂತಿದ್ದರು. ಅವರಲ್ಲೊಬ್ಬ ಅವನ ಕೈ ಕಾಲುಗಳಿಗೆ ಹಗ್ಗ ಬಿಗಿಯಲಾರಂಬಿಸಿದ್ದ.
       ಇನ್ನೇನು ಅವನನ್ನು ಪೊಲೀಸ್ ಜೀಪಿಗೆ ಹತ್ತಿಸಿಕೊಳ್ಳಬೇಕು. ಆಗ ಅಲ್ಲಿ ತನ್ನ ಮೂವರು ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಜೊತೆ ಓಡಿ ಬಂದ ಮಹಿಳೆಯೊಬ್ಬಳು ಗೋಳಾಡಲಾರಂಭಿಸಿದಳು. ಹಿಂದಿ ಭಾಷೆ ಸ್ಪಷ್ಟವಾಗಿ ಬರುತ್ತಿದ್ದ ಪೊಲೀಸ್ ಪೇದೆ ಇಸ್ಮಾಯಿಲ್ ಬಳಿ ತನ್ನ ಹಾಗು ಆ ಆಗಂತುಕನ ಗುರುತು ಹೇಳಿಕೊಂಡಳು. ಇಸ್ಮಾಯಿಲ್ ನಡುಗಿ ಹೋದ...ಅವನ ಬಾಯಿಂದ ಮಾತೇ ಬರಲ್ಲಿಲ್ಲ.
ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ರಾಜಾಸ್ಥಾನದಿಂದ ನಮ್ಮೂರಿಗೆ ಬಂದಿದ್ದ ಕುಟುಂಬವದು. ದಾಧಾಪೀರ್ ಕುಲ್ಪೀ, ರಸ್ಕ್, ಸೋನ್ ಪಾಪ್ಪುಡಿ ಇತ್ಯಾದಿ ಉತ್ತರ ಭಾರತೀಯ ತಿಂಡಿಗಳನ್ನು ತಯಾರಿಸಿ ಗಾಡಿಯಲ್ಲಿ ಹೇರಿಕೊಂಡು ಮಾರುವ ವ್ಯಕ್ತಿ. ನಮ್ಮೂರಿಗೆ ನಿನ್ನೆಯಷ್ಟೇ ಬಂದಿದ್ದ ಅವನು ತನ್ನ ಮನೆಯಿಂದ ದಾರಿ ತಪ್ಪದಿರಲಿ ಅಂತಾ ತನ್ನದೇ ರೂಟ್ ಮ್ಯಾಪ್ ಬರೆದುಕೊಳ್ಳುತ್ತಿದ್ದ. ಮಕ್ಕಳಿಂದಲೇ ಅವನಿಗೆ ವ್ಯಾಪಾರ ಆಗಬೇಕಿದ್ದ ಕಾರಣ ಅವರ ಪ್ರೆಂಡ್ ಶಿಪ್ ಮಾಡಿಕೊಳ್ಳುತ್ತಿದ್ದ. ಪಕ್ಕದ ಊರಿನ ಗಲ್ಲಿಗಲ್ಲಿಯಲ್ಲೂ ಕೂಡ ಈ ದಾಧಫೀರ್ ಮಕ್ಕಳಿಗೆಲ್ಲಾ ದಾಧಾ ಮಾಮ ಅಂತಾನೇ ಫೇಮಸ್ ಆಗಿದ್ದ. ಇವನ ಸೌಮ್ಯ ವರ್ತನೆ ಹಾಗು ಹಾಡುಗಾರಿಕೆಗೆ ಆ ಊರವರು ಇವನಿಗೆ ಸನ್ಮಾನ ಮಾಡಿದ್ದರು. 
     ಈ ಎಲ್ಲಾ ವಿಷಯ ಕೇಳುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಯುವಕರು ಒಬ್ಬೊಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ತೆರೆದಿದ್ದ ಮನೆಯ ಕಿಟಕಿಗಳು ಮುಚ್ಚಿಕೊಂಡವು. ಧೂಳೆಬ್ಬಿಸಿ ಹೋದ ಪೊಲೀಸ್ ಜೀಪಿನತ್ತ ದುಃಖದ ನೋಟ ಬೀರಿದ ಆಕೆ ಅಳುತ್ತಿದ್ದ ಗಂಡನನ್ನು ಎದೆಗೊರಗಿಸಿಕೊಂಡು ಅವನ ಕಣ್ಣೀರು ಒರೆಸಿದಳು. ಅವರ ಜೊತೆಯಲ್ಲಿದ್ದ ಆ ಮೂರು ಹೆಣ್ಣು ಮಕ್ಕಳು ರೋಧಿಸುತ್ತಲೇ ಇದ್ದವು. 
      ಆ ಎಲ್ಲಾ ಮನೆಗಳಲ್ಲೂ ಮೌನ ಮುರಿದುಕೊಂಡು ಬಿದ್ದಿದ್ದು. ನಿಟ್ಟುಸಿರಿನ ಸಣ್ಣ ಸದ್ದಿನ ನಡುವೆ ಛೇ.., ಪಾಪ ಹೀಗಾಗಬಾರದಿತ್ತು ಅನ್ನೋ ಭಾವುಕತೆ ಲಹರಿಯೋಪಾದಿಯಲ್ಲಿ ಹರಿಯುತ್ತಿತ್ತು.

No comments: