Monday, November 14, 2011

ಹೇ ಭಾಯ್.., ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......?

ಕಾಚೀಗುಡ ಎಕ್ಸ್ ಪ್ರೆಸ್..........,
  ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರೈನ್ ಹತ್ತಿದ ನನಗೆ ಅಂದು ವಿಮಾನವನ್ನೇ ಏರಿದ ಅನುಭವ.  ಟ್ರೈನ್ ನ ಲಬ್ ಡಬ್ ಸದ್ದಿಗಿಂತ   ಎದೆಯಾಳದಲ್ಲಿ ನಾಳೆ ಅನ್ನೋ ಆತಂಕದ ಬಡಿತ ಹೆಚ್ಚಾಗಿತ್ತು. ಜೊತೆಜೊತೆಗೆ ಬೆಂಗಳೂರಲ್ಲೇ ಕನ್ನಡವನ್ನು ಕಳೆದುಕೊಂಡ ಪರಕೀಯತೆ........., ತೆಲುಗು, ಹಿಂದಿ, ಇಂಗ್ಲೀಷ್, ಮರಾಠಿ ಬಾಷೆಯ ಅಬ್ಬರ.......,
   ಆಗಸದ ಅಂಗಳದಲ್ಲಿ ಸೂರ್ಯ ಮರೆಯಾಗುತ್ತಿದ್ದ. ಕೆಂಪು ಕೆಂಪಾಗಿದ್ದ ಸಂಜೆ ರಾತ್ರಿಯ ಸಿದ್ದತೆಯಲ್ಲಿತ್ತು........,  ಅದು ನನ್ನ  ಜೀವನದ ಮೊತ್ತಮೊದಲ ಇಂಟರ್ ವ್ಯೂ.ಗೆ ನಾ ಮಾಡಿದ ಪಯಣ.
ಅದ್ಯಾವಾಗ ನಿದ್ರೆಗೆ ಜಾರಿದೆನೋ ಗೊತ್ತಿಲ್ಲ. ಕಣ್ಣು ಬಿಟ್ಟಾಗ ಎಲ್ಲವೂ ತೆಲುಗುಮಯವಾಗಿತ್ತು. ಅಲ್ಲಿದ್ದ ಬೋರ್ಡು......, ಅಂಗಡಿ ಮುಂಗಟ್ಟುಗಳು....., ಓಡಾಡುತ್ತಿದ್ದ ಜನರು........., ಸುಳಿಯುತ್ತಿದ್ದ ತಂಗಾಳಿ............... ಗುರುತಿನ ಕಂಗಳಿಗಾಗಿ ಹುಡುಕಾಟ.
ಜೇಬಿನಲ್ಲಿದ್ದ ಟೆಲಿಗ್ರಾಂ ನ್ನು ಮತ್ತೊಮ್ಮೆ ತಡವಿಕೊಂಡೆ. ಅದು ನನಗೆ ರಾಮೋಜಿ ಫಿಲ್ಮ್ ಸಿಟಿಯಿಂದ ಇಂಟರ್ ವ್ಯೂ ಗೆ ಬರುವಂತೆ ಕರೆದಿದ್ದ ತುರ್ತು ಟೆಲಿಗ್ರಾಂ.
ಅಲ್ಲಿದ್ದ ಆಟೋ ಚಾಲಕನ ಬಳಿ ಹಿಂದಿಯಲ್ಲಿ ರಾಮೋಜಿ ಫಿಲ್ಸ್ ಸಿಟಿಗೆ ಹೋಗುವ ಬಸ್ ನಂಬರ್ ಕೇಳಿ ಬಸ್ ಹತ್ತಿದೆ. ಬಸ್ ಓಡುತ್ತಿದ್ದಂತೇ ಮನದಾಳದ ತಳಮಳ ಕೂಡ ಹೆಚ್ಚಾಗಿತ್ತು. ಬಸ್ ರಾಮೋಜಿ ಫಿಲ್ಸ್ ಸಿಟಿಯ ಒಳ ಪ್ರವೇಶಿಸಿದಂತೇ ಅದು ಇನ್ನೂ ಕೂಡ ಹೆಚ್ಚಾಗಿತ್ತು.
  ಫಿಲ್ಮ್ ಸಿಟಿಗೆ ಸಂಬಂದಪಡದ ವಾಹನಗಳಿಗೆ ಅದರ ಮುಖ್ಯಧ್ವಾರದ ಬಳಿಯವರೆಗೆ ಮಾತ್ರ ಪ್ರವೇಶಾವಕಾಶ. ಅಲ್ಲಿಂದ ಏನಿದ್ದರೂ ರಾಮೋಜಿ ಫಿಲ್ಮ್ ಸಿಟಿಯ ವಾಹನಗಳಲ್ಲೇ ಒಳಗೆ ಹೋಗಬೇಕು. ಹಾಗಾಗಿ ನನಗೆ ಬಂದಿದ್ದ ಟೆಲಿಗ್ರಾಂ ತೋರಿಸಿ ಅಲ್ಲಿದ್ದವರ ನೆರವಿನೊಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಾನು ತಲುಪಬೇಕಿದ್ದ ಕಛೇರಿಯನ್ನು ತಲುಪಿದೆ. ಆಗ ಸಮಯ ಇನ್ನೂ   ಬೆಳಗ್ಗಿನ 8.30 ಘಂಟೆಯಾಗಿದ್ದರಿಂದ ಕಛೇರಿ ಬಾಗಿಲೇ ತೆರೆದಿರಲ್ಲಿಲ್ಲ.
         ಇಂಟರ್ ವ್ಯೂ ಅನ್ನೋ ಕಾತುರತೆಗೆ ಸಿಲುಕಿದ್ದ ನಾನು ರಾತ್ರಿಯಿಂದ ಸರಿಯಾಗಿ ಊಟ ತಿಂಡಿ ಮಾಡಿರಲ್ಲಿಲ್ಲ. ಆದ ಕಾರಣ ಹೊಟ್ಟೆಗೆ ಒಂದಷ್ಟು ಏನನ್ನಾದರೂ ಹಾಕಿ ಬರೋಣ ಅಂತಾ ಕ್ಯಾಂಟಿನ್ ಹುಡುಕಿ ಹೊರಟೆ. ಒಂದಷ್ಟು ದೂರ ಕ್ರಮಿಸಿದ ನನಗೆ ಅಲ್ಲಿ ಆಟೋ ಸ್ಟ್ಯಾಂಡ್, ಹೊಟೆಲ್, ಚಾಯ್ ಕಾ ದುಕಾನ್, ಪಾನ್ ಶಾಪ್, ಬಾರ್ ಆಂಡ್ ರೆಸ್ಟೋರೆಂಟ್,  ದೇಸೀ ದಾರೂ ಕಾ ದುಕಾನ್ ಇತ್ಯಾದಿ ಇತ್ಯಾದಿ ಬೋರ್ಡ್ ಗಳು ಕಂಡವು. ವಿಚಿತ್ರ ಅಂದ್ರೆ ಅವು ಯಾವೂ ಕೂಡ ಬಾಗಿಲು ತೆರೆದಿರಲ್ಲಿಲ್ಲ.
  ಅರೆರೆ...., ಏನ್ ಊರಪ್ಪಾ ಇದು..! ಇಷ್ಟೊತ್ತಾದ್ರೂ  ಯಾವ ಅಂಗಡಿನೂ ಬಾಗಿಲು ತೆಗೆದಿಲ್ಲ  ಎಂದು ರಾಗವೆಳೆದ ನನಗೆ ಇಲ್ಲಿ ಕರ್ಪ್ಯೂ ಜಾರಿಯಲ್ಲಿದೆಯಾ...? ಅನ್ನೋ ಅನುಮಾನ ಕೂಡ ಕಾಡತೊಡಗಿತು.
         ದೂರದಲ್ಲೊಬ್ಬ ಸೆಕ್ಯೂರಿಟಿ ಗಾರ್ಡ್ ಕಂಡ.., ನನಗೆ  ದೇವರನ್ನೇ ಕಂಡಷ್ಟು ಸಂತಸ.........., ಯಾಕಂದ್ರೆ ಅವ ನನ್ನತ್ತಲೇ ಬಂದು '' ಮೀರ್ ಎವುರು....? ಇಕ್ಕಡಾ ಯಾಲ ನಿಲ್ಚುಕುಂಡಾರು.....? ಎಂದ. ದೇವರಾಣೆ ನನಗೆ ಅರ್ಥ ಆಗ್ಲಿಲ್ಲ ಕಣ್ರೀ. ಪೆದ್ದು ಪೆದ್ದಾಗಿ ಅವನ ಬಳಿ ''  ಹೇ ಭಾಯ್..,  ಒ ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......? ಅಂತ ಕೇಳಿದೆ. ನನ್ನ ದುರಾದೃಷ್ಟಕ್ಕೆ ಅವನಿಗೆ ಹಿಂದಿ ಬರೋಲ್ಲ. ಅವ    '' ಇಕ್ಕುಡಾ ಚಾಣ ಪದ್ದು ನಿಲ್ಚುಕುಣೇಟ್ಲಾ......, ಅಂದ. ಇದ್ಯಾಕೋ ಸರಿ ಹೋಗ್ಲಿಲ್ಲ ಅಂತಾ ನನ್ನದೇ ಆದ ಆಂಗಿಕ ಬಾಷೆಯಲ್ಲಿ ಆತನಿಗೆ ನನ್ನ ಪ್ರಶ್ನೆಯನ್ನು ಅರ್ಥ ಮಾಡಿಸಿದೆ. ಅದಕ್ಕವನು '' ಇದು ಸ್ಟುಡಿಯೋ ಸೆಟ್ಟು...., ಯಾಪದೂ ಓಪನ್ ಆಯಿಲೇದು. ಏಮ್ ದಡ್ಡುಡು ನೂವು ಎಂದು ಜೋರಾಗಿ ನಗಲಾರಂಭಿಸಿದ.
          ಥತ್ ......, ನನ್ನ ಪೆದ್ದುತನ್ಕಕೆ ನನಗೇ ನಗು ಬಂದಿತ್ತು. ಸ್ಟುಡಿಯೋ ಸೆಟ್ ಗಳ ಎದುರು ನಿಂತ ನಾನು ಅವನ ನಗುವಿಗೆ ವಸ್ತವಾಗಿ ಬಿಟ್ಟೆ. ನಕ್ಕೂ ನಕ್ಕು ಸಾಕಾದ ಅವ ಕಡೆಗೆ ಪಕ್ಕದ ಬೀದಿಯಲ್ಲಿದ್ದ ಒರಿಜಿನಲ್ ಟೀ ಶಾಪ್ ಅಡ್ರೆಸ್ ಕೊಟ್ಟ.
       ಅದೇನೋ ಸರಿ........, ನನಗೆ ನಿಜವಾಗ್ಲೂ ಸಮಸ್ಯೆ ಶುರುವಾಗಿದ್ದೇ ಅಲ್ಲಿ. ಯಾಕಂದ್ರೆ ಅವೊತ್ತು 1999 ನೇ ಇಸವಿ ಏಪ್ರಿಲ್ ಒಂದನೇ ತಾರೀಖು. ನನ್ನ ಜೀವನದ ಮೊದಲ ಇಂಟರ್ ವ್ಯೂ ಅನ್ನೋ ಅತ್ಯಂತ ಮಹತ್ವದ ದಿನ........., ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಿಂದ ಬಂದಿದ್ದ  ಈ ಟೆಲಿಗ್ರಾಂ ಅಸಲೀನಾ.....ಅಥ್ವಾ ಇದೂ ಕೂಡ............!!!????. ಹಾಗೆನ್ನೋ ಪ್ರಶ್ನೆ ನನ್ನನ್ನು ನಖಶಿಖಾಂತ ನಡುಗಿಸಿ ಬಿಟ್ಟಿತ್ತು. ನಾನು ಸಂಪೂರ್ಣ ಬೆವೆತು ಹೋಗಿದ್ದೆ.
         ಆದ್ರೆ ಅದು ಹಾಗಾಗಲ್ಲಿಲ್ಲ. ಟೆಲಿಗ್ರಾಂ ಅಸಲೀನೇ ಆಗಿತ್ತು. ಅಲ್ಲಿ ನನ್ನ ವೃತ್ತಿ ಜೀವನದ ಗುರುಗಳಾದ ಕೆ.ಎಂ ಮಂಜುನಾಥ್ ನನ್ನನ್ನು ಇಂಟರ್ ವ್ಯೂ ಮಾಡಿದರು.  ನನಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತ್ತು.

No comments: