Monday, January 2, 2012

ಬ್ಲಡ್ ಶುಗರ್....,

ನೀನು ಹೇಳ್ತಾ ಇರೋದು ನಿಜಾನೇನೋ.......? ಹಾಗೆನ್ನುತ್ತಿದ್ದ ಅವನ ಮುಖದಲ್ಲಿ ದುಗುಡ ಆತಂಕ ಎದ್ದು ಕಾಣುತ್ತಿತ್ತು.  ನನಗೋ ಒಳಗೊಳಗೇ ನಗು. ಪ್ರಾಣ ಹೋಗುತ್ತೆ ಅಂದ್ರೂ ಒಂದ್ರುಪಾಯಿ ಬಿಚ್ಚದ ಪಿಕ್ಟಾಸಿ........, ಬೇರೆಯವರ ಉದ್ದಾರ ಕಂಡು ಉರಿದುಕೊಳ್ಳುವ ಪರಮಲೋಭಿ.......,
       ಅವ ನನ್ನ ಸಹೋದ್ಯೋಗಿ ಅನ್ನೋ ಒಂದೇ ಕಾರಣಕ್ಕೆ ಅವನ ಜೊತೆ ನನಗೆ ಸಲುಗೆ ಇತ್ತೇ ವಿನಃ ಇನ್ಯಾವುದೇ ಪುಣ್ಯ ಕಾಯಕಕ್ಕೆ ಅವನ ಅಗತ್ಯ  ನನಗೆ ಇರಲ್ಲಿಲ್ಲ.  ಇವೊತ್ತು ಜೀವ ಭಯದಿಂದ ತತ್ತರಿಸಿ ಹೋಗಿದ್ದಾನೆ...., ಪದೇ ಪದೇ ಟಾಯ್ಲೆಟ್ಟಿಗೆ ಹೋಗ್ತಾ ಬರ್ತಾ ಇದ್ದಾನೆ. ಅವನ ವರ್ತನೆಯನ್ನು ಕಂಡ ನಾನು ಬೇಕಂತಲೇ ಅವನನ್ನು ಕೆಣಕಲು '' ಯಾಕೋ ಮೈಗೆ ಹುಷಾರಿಲ್ವೇನೋ........, ಹೊಟ್ಟೆ ಕೆಟ್ಟೋಗಿದ್ಯಾ......ಅಂತಾ ಕೇಳಿದೆ. ಗಾಬರಿ ಬಿದ್ದ ಅವನು ಇ...ಇ...ಇಲ್ಲಾ ಕಣೋ......ಅಂತಾ ಸಾವರಿಸಿಕೊಳ್ಳಲು ಯತ್ನಿಸುತ್ತಿದ್ದ. ನನಗೆ ನಗುವನ್ನು ಹತ್ತಿಕ್ಕಲು ಸಾಧ್ಯವೇ ಆಗುತ್ತಿಲ್ಲ. ಸತ್ಯ ಹೇಳೋಣ ಎಂದುಕೊಂಡೆ. ಆದ್ರೆ ಈ ಕಂಜೂಸ್ ಗೆ ಸ್ವಲ್ಪ ಜ್ಞಾನೋಧಯ ಆಗ್ಲಿ ಅಂತ ಕಂಟ್ರೋಲ್ ಮಾಡಿಕೊಂಡೆ.
    ಅಸಲಿಗೆ ಅವನ ಇವತ್ತಿನ ಅವಸ್ಥೆಗೆ ನಾನೇ ಕಾರಣ.   ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಬಗ್ಗೆ ಚರ್ಚೆ ಆರಂಭಿಸಿದ್ದ ಅವನಿಗೆ ಡಯಾಬಿಟಿಸ್ ಕಾಣಿಸಿಕೊಳ್ಳುವ ಮೊದಲ ಲಕ್ಷಣದ ಬಗ್ಗೆ ನನ್ನದೇ ಆದ ಅವಿಷ್ಕಾರಗಳ ರೀಲ್ ಬಿಟ್ಟಿದ್ದೆ. ಡಯಾಬಿಟೀಸ್ ಆರಂಭವಾಗಿ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೇ ಅದು ಮಿತಿ ಮೀರಿ ಹೋಗಿದ್ದರೆ ಅಂತಹ ರೋಗಿ ಮೂತ್ರ ಮಾಡುವಾಗ ಅದು ಸೋಪಿನ ನೊರೆಯಂತೆ ಆಗುತ್ತೆ ಎಂದಿದ್ದೆ. ಇನ್ನು ಅಂತಹವರಿಗೆ ಕೈ ಕಾಲು ನೋವು, ತಲೆಸುತ್ತು, ಸುಸ್ತು ಇತ್ಯಾದಿ ಮಾಮೂಲು......, ಕಿಡ್ನಿಗಳು ಕೊನೇಯ ಹಂಥಕ್ಕೆ ತಲುಪಿ ಕೊನೆ ಉಸಿರೆಳವ ದಿನಗಣನೆ ಆರಂಭ........, ಹಾರ್ಟ್ ಅಟ್ಯಾಕ್ ಆಗುವ ಸಂಭವ....., ಇತ್ಯಾದಿ ಇತ್ಯಾದಿಗಳನ್ನು ಹೇಳಿ ನಂಬಿಸಿ ಬಿಟ್ಟಿದ್ದೆ. ಎಲ್ಲಾ ಹೇಳಿದ ನಂತರ ನಿನಗೇನಾದ್ರೂ ಶುಗರ್ ಇದ್ಯೇನೋ...? ಅಂತಾ ಕೇಳಿದಾಗ ಗಾಬರಿ ಬಿದ್ದ ಅವನು ಏ......ಏ.....ಇಲ್ ಲ್ಲಾ ಪ್ಪಾ ಅಂತ ಅಂದಿದ್ದ.
ನಾನು ಅಷ್ಟಕ್ಕೇ ಸುಮ್ಮನಾಗಲ್ಲಿಲ್ಲ. ಒಂದ್ ನಿಮಿಷ ಬಂದೆ ಅಂತಾ ಎದ್ದವ ಸೀದಾ ಅವನ ರೂಂನಲ್ಲಿದ್ದ ಟಾಯ್ಲೆಟ್ ಗೆ ತೆರಳಿ ಕಮೋಡ್ ಒಳಗೆ  ಮನೆಯಿಂದ ತಂದಿದ್ದ ನೂರು ಗ್ರಾಂ ನಷ್ಟು ಡಿಟರ್ಜಂಟ್ ಪೌಡರ್ ಹಾಕಿ ಬಂದಿದ್ದೆ.
   ನನ್ನ ಪ್ಲಾನ್ ವರ್ಕ್ ಔಟ್ ಆಗಿತ್ತು. ನಾನು ಹೊರಟ ನಂತರ ಟಾಯ್ಲೆಟ್ ಗೆ ಹೋಗಿದ್ದ  ಅವನಿಗೆ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಯಾಕೆಂದ್ರೆ  ಮೂತ್ರ ಮಾಡುವಾಗ ಅಲ್ಲಿ ಇದ್ದಕ್ಕಿದ್ದಂತೆ ನೊರೆಯ ರಾಶಿಯೇ ಸೃಷ್ಟಿಯಾಗಿತ್ತು. ಗಾಬರಿ ಬಿದ್ದ ಅವನು ಪುನಃ ಫೋನ್ ಮಾಡಿ ನನ್ನನ್ನು ತನ್ನ ರೂಮಿಗೆ ಬರಲು ಕೋರಿಕೊಂಡಿದ್ದ. ಅಲ್ಲೂ ಕೂಡ ಬುದ್ದಿವಂತಿಕೆ ತೋರಿದ ಅವನು ನಾ ಬಿಟ್ಟ ರೀಲನ್ನು ನಿಜವೋ ಸುಳ್ಳೋ ಅಂತಾ ಕನ್ ಪರ್ಮ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ.  ಏನೂ ತಿಳಿಯದ ಅಮಾಯಕನ ರೀತಿ ನಟಿಸಿದ ನಾನು '' ಹೌದು ಕಣೋ ....., ಯಾಕೆ ಈ ಪ್ರಶ್ನೆ ಕೇಳ್ತಾ ಇದ್ದೀಯಾ ಅಂತಾ ಮರುಪ್ರಶ್ನೆ ಮಾಡಿದೆ. ಅದಕ್ಕೆ ಅವ ಸುಮ್ಮನೆ ಕೇಳಿದೆ..." ಎಂದಷ್ಡೇ ಹೇಳಿ ನನ್ನನ್ನು ಮೆಲ್ಲ ಹೊರಗೆ ಸಾಗಹಾಕಿದ್ದ.
   ಮರುದಿನ ನೋಡ್ತೀನಿ ನನ್ನ ಕಂಜೂಸ್ ಗೆಳೆಯ ಮಹಾಶಯ ಅದ್ಯಾವುದೋ ವೈಧ್ಯರ ಬಳಿ ಹೋಗಿ ಅವರ ಸಲಹೆಯಂತೆ ಡಯಾಗ್ನಾಸ್ಟಿಕ್ ಲ್ಯಾಬ್ ನಲ್ಲಿ ಕ್ಯೂ ನಿಂತಿದ್ದ. ಕನಿಷ್ಟ ಒಂದೈದು ಸಾವಿರನಾದ್ರೂ ಕೈ ಬಿಟ್ಟಿರುತ್ತೆ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡ ನಾನು ಅಂದು ಸಂಜೆ ಅವನ ರೂಮಿಗೆ ಹೋಗಿದ್ದೆ.
      ಅವ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಳಿತಿದ್ದ.  ನನ್ನನ್ನು ಬೈಯುತ್ತಾನೆ ಎಂದುಕೊಂಡೆ. ಊಹುಂ ಅದು ಹಾಗಾಗಲ್ಲಿಲ್ಲ. ಕಣ್ತುಂಬಾ ನೀರು ತುಂಬಿಕೊಂಡ ಅವನು ಲೋ ನನಗೆ ಶುಗರ್ ಇದೆ ಕಣೋ.., ಇವೊತ್ತು ಟೆಸ್ಟ್ ಮಾಡಿದೆ 290 ಇದೆ ಅಂತಾ ರಿಪೋರ್ಟ್ ಬಂತು. ನೀನು ಹೇಳಿದ್ದು ನಿಜ ಆಯ್ತು ಕಣೋ ಅಂದ.
       ಈಗ ಅಳುವ ಸರದಿ ನನ್ನದಾಗಿತ್ತು.
      

No comments: