Monday, January 30, 2012

ಐಕಲೇ........!!???

ಸಂಜೆ ಮಬ್ಬುಗತ್ತಲಾಗುತ್ತಲೇ ತಳಮಳ ಆರಂಭಗೊಂಡಿತ್ತು. ಇಡೀ ಊರೆಲ್ಲಾ ಹುಡುಕಿದರೂ ಮಲ್ಲಿಯ ಸುಳಿವಿಲ್ಲ. ''ಮಲ್ಲಿಯನ್ನು  ಹುಡುಕಿ ಹೊಡ್ಕೊಂಡ್ ಬರ್ಲಿಲ್ಲಾ ಅಂದ್ರೆ ಮನೆಯೊಳಗೆ ಜಾಗ ಇಲ್ಲ....,'' ಅಪ್ಪನ ಕಡಕ್ ಮಾತು ಹಾಗು ಬುಸುಗುಡುವ ವಧನದ ನೆನಪಾಗಿ ಮತ್ತಷ್ಡು ಆತಂಕ ಹೆಚ್ಚಾಯ್ತು. ಇಷ್ಟಕ್ಕೆಲ್ಲಾ ನಮ್ಮಣ್ಣನೇ ಕಾರಣ ಬೇಡಾ ಬೇಡಾ ಅಂದ್ರೂ ಚಂದ್ರೇಗೌಡ ಮತ್ತೆ ಅಶ್ವಥೀ ಜೊತೆ ನನ್ನನ್ನೂ ಸಿನೇಮಾಕ್ಕೆ ಕರೆದುಕೊಂಡು ಹೋಗಿದ್ದ. ಮ್ಯಾಟನೀ ಶೋ ಮುಗಿಸಿ ಮನೆಗೆ ಬಂದಿದ್ದ ನಮಗೆ ನಮ್ಮ ಮನೆಯ ಎಮ್ಮೆ ಮಲ್ಲಿ ಇನ್ನೂ ಬಂದಿಲ್ಲ ಅಂತ ಅಮ್ಮ ಹೇಳಿದಾಗಲೇ ಗಾಬರಿಯಾಗಿತ್ತು.  ಅವತ್ತು ಶನಿವಾರದ ರಜಾದಿನ. ಹೇಮಾವತಿ ಪಾರ್ಮ್ ನ ಒಳಗೆ ಎಮ್ಮೆಯನ್ನು ಮೇಯಿಸಿಕೊಂಡು ಬರ್ತೀವಿ ಅಂತಾ ರೀಲ್  ಬಿಟ್ಟು ಸಿನೇಮಾಕ್ಕೆ ಹೋಗಿದ್ದೆವು. ವಾಪಾಸ್ ಬಂದು ನೊಡಿದ್ರೆ  ಮಲ್ಲಿ ಇರಲ್ಲಿಲ್ಲ. ಸರಿ, ಮನೆಗೆ ಹೋಗಿರಬಹುದು ಅಂತಾ ಅಂತ ಮನೆಗೆ ಬಂದ್ರೆ ಅಲ್ಲೂ ಕೂಡ ಇಲ್ಲ....! ನಮ್ಮಣ್ಣ ಅದೇನೇನೋ ಸುಳ್ಳು ಹೇಳಿದ್ರೂ ಅದು ವರ್ಕೌಟ್ ಆಗಲೇ ಇಲ್ಲ.  ಕತ್ತಲು ಹೆಚ್ಚಾಗುತ್ತಿತ್ತು, ಗಲ್ಲಿ ಗಲ್ಲಿಯಲ್ಲೂ ಮಲ್ಲೇ ಏಗೋ......, ಮಲ್ಲೀ ಏಗೋ......, ಅಂತಾ ನಾವು ಕೂಗುತ್ತಿದ್ದ ಧ್ವನಿ ಪ್ರತಿಧ್ವನಿಸುತ್ತಿತ್ತು.
      ಅದು ಸವಿಯಾದ ಮುಂಜಾವು ಚೆಂಬು ಹಿಡಿದು ಹಾಲು ಕರೆಯಲು ಕೊಟ್ಟಿಗೆಗೆ ತೆರಳಿದ್ದ ನಮ್ಮಮ್ಮ ಐಕಲೇ....ಐಕಲೇ.......!!?? ( ಕೊಂಕಣಿ ಭಾಷೆಯಲ್ಲಿ ಹಾಗೆಂದರೆ ಕೇಳಿಸ್ತಾ...? ಅಂತಾ. ಸಾಮಾನ್ಯವಾಗಿ ಕೊಂಕಣಿ ಗೃಹಿಣಿಯರು ಗಂಡನನ್ನು ಹಾಗೇ ಕರೆಯುತ್ತಾರೆ)  ಅಂತಾ ಒಂದೇ ಸವನೆ ಅರಚಾಡಲಾರಂಭಿಸಿದರು. ಬೆಚ್ಚನೆ ಕೌದಿ ಹೊದ್ದು ಮಲಗಿದ್ದ ನಮ್ಮಣ್ಣ ಚಂಗನೆ ಒಂದೇ ಜಿಗಿತಕ್ಕೆ ಮುಂಬಾಗಿಲಿನಿಂದ ಅಂಗಳಕ್ಕೆ ಹಾರಿದ. ಬೆಳಗ್ಗಿನ ಛಳಿ ಮೈ ಮೇಲೆ ಬಿದ್ದ ಕೂಡಲೇ ಮುಂದಾಗುವ ಅನಾಹುತ ಅರಿತ ನಾನೂ ಕೂಡ ಅಷ್ಟೇ ವೇಗದಲ್ಲಿ ಅವನನ್ನು ಹಿಂಬಾಲಿಸಿದೆ.
        ಅದಕ್ಕೆ ಬಲವಾದ ಕಾರಣ ಇತ್ತು. ಹಿಂದಿನ ದಿನ ನಡುರಾತ್ರಿಯವರೆಗೂ ಹುಡುಕಾಡಿದರೂ ನಮಗೆ ಮಲ್ಲಿ ಸಿಕ್ಕಿರಲ್ಲಿಲ್ಲ. ಸ್ಟ್ರೀಟ್ ಲೈಟ್ ಗಳೇ ಇಲ್ಲದ ಕಾಲವದು. ಬೀದಿನಾಯಿಗಳು ನಮ್ಮ ಮೇಲೆ ಹಸಿದ ಹೆಬ್ಬುಲಿಗಳಂತೆ ಧಾಳಿ ಮಾಡುತ್ತಿದ್ದವು. ಹುಡುಕೀ ಹುಡುಕೀ ಸೋತ ನಮಗೆ ಅಮೀರ್ ಜಾನ್ ಸಾಹೇಬರ ಚಕ್ರ ಕಳಚಿದ ಎತ್ತಿನ ಬಂಡಿ ಬಳಿ ಮಲ್ಲಿಯಂತಹ ಆಕೃತಿಯೊಂದು ಕಂಡಿತು. ಕೂಡಲೇ ಅಲ್ಲಿಗೆ ಓಡಿದ ನಮ್ಮಣ್ಣ ಅದರ ಕೊರಳಿಗೆ ಹಗ್ಗ ಬಿಗಿದು ನನ್ನ ಕೈಗೆ ಕೊಟ್ಟ. ಕಡುಗತ್ತಲಾಗಿದ್ದರಿಂದ ನಾನೂ ಕೂಡ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲ್ಲಿಲ್ಲ. ಹಿಡ್ಕೊಳ್ಳೋ......., ನಾನು ಹೊಡಿತೀನಿ ಅಂತಾ ಮಲಗಿದ್ದ ಎಮ್ಮೆಯನ್ನು ಎಬ್ಬಿಸಿ ಬಾರು ಕೋಲಿನಿಂದ ಎರಡೇಟು ಭಾರಿಸಿದ. ಪಾಪ ಎಮ್ಮೆ, ದುಸುರಾ ಮಾತನಾಡದೇ ನನ್ನನ್ನು ಹಿಂಬಾಲಿಸತೊಡಗಿತು. ಮನೆ ತಲುಪಿದ ಕೂಡಲೇ ಅಪ್ಪನನ್ನು ಎಬ್ಬಿಸಿ '' ಅಪ್ಪಾ ಎಮ್ಮೆ ಅಟ್ಟಿಕೊಂಡು ಬಂದಿದ್ದೇವೆ ಅಂತಾ ಕೂಗಿ ಹೇಳಿದೆ. ನಿದ್ದೆಗಣ್ಣಿನಲ್ಲಿದ್ದ ಅವರು ಕಟ್ಟಾಕಿ ಬಿದ್ಕೊಳ್ಳಿ...., ಎಂದು ಮಗ್ಗಲು ಬದಲಾಯಿಸಿಕೊಂಡಿದ್ದರು. ಹಾಗೇ ಎಮ್ಮೆಯನ್ನು ಒಳಗಟ್ಟುವಾಗ ನಮ್ಮಣ್ಣ ಮುಸಿ ಮುಸಿ ನಗುತ್ತಿದ್ದ. ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನವೊಂದು ಆಗಲೇ ಹುಟ್ಟಿಕೊಂಡಿತ್ತು.
    ಅಮ್ಮನ ಕಿರುಚಾಟ ಕೇಳಿ ಅಪ್ಪ ಕೊಟ್ಟಿಗೆಯ ಒಳಗೋಡಿದರು. ಸ್ವಲ್ಪ ಸಮಯದ ನಂತರ ಜೋರಾಗಿ ನಗುತ್ತಲೇ ಹೊರಬಂದ್ರು. ನನಗೋ ಭಯವೇ ಭಯ........, ನಮ್ಮಣ್ಣನಿಗೆ ಸಂಪೂರ್ಣ ಗೊಂದಲ.  ಮುನ್ನೆಚ್ಚರಿಕೆ ಕ್ರಮವಾಗಿ ನಾವು ಮನೆಯಿಂದ ಸ್ವಲ್ಪಮುಂದೆ ಇದ್ದ ರಸ್ತೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ ಇದ್ದೆವು. ನಾನು ಅನುಮಾನ ಕ್ಲಿಯರ್ ಮಾಡಿಕೊಳ್ಳಲು ನಮ್ಮಣ್ಣನಿಗೆ  ''ಯಾಕೋ ಓಡ್ಬಂದೇ.....? ಅಂತಾ ಕೇಳಿದೆ. ಅದಕ್ಕವನು '' ಲೋ ರಾತ್ರಿ ಹೊಡ್ಕೊಂಡು ಬಂದಿರೋದು ನಮ್ಮ ಮಲ್ಲಿ ಅಲ್ಲಾ ಕಣೋ..., ಅಮೀರ್ ಜಾನ್ ಸಾಹೇಬ್ರ ವಯಸ್ಸಾಗಿರೋ ಕುರುಡ ಕೋಣ ಕಣೋ..., ತುಂಬಾ ತಡ ಆಗಿತ್ತಲ್ಲಾ...., ಅದ್ಕೇ ಅಪ್ಪನ್ನ ಯಾಮಾರಿಸೋಕೇ......., ಅಂತಾ ಮುಂದುವರೆಸುತ್ತಲೇ  ಇದ್ದ. ನಾನು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ. ಬೆಳ್ಳಂಬೆಳಗ್ಗೇ ಬೆಂಬು ಹಿಡಿದುಕೊಂಡು ಹಾಲು ಕರೆಯಲು ಹೋಗಿದ್ದ ಅಮ್ಮನಿಗೆ ಗಾಬರಿಯಾಗದೇ ಇನ್ನೇನಾಗುತ್ತೇ ಹೇಳಿ.....? ಪಾಪ ಅದು ಸಾಧು ಕೋಣವಾಗಿದ್ದರಿಂದ ಯಾರಿಗೂ ಏನೂ ತೊಂದರೆ ಮಾಡಲ್ಲಿಲ್ಲ. ಅಪ್ಪನಿಗೆ ಕೋಪ ಬಂದಿತ್ತಾದರೂ ನಮ್ಮಣ್ಣನ ಸಾಂದರ್ಭಿಕ ಬುದ್ದಿವಂತಿಕೆ ಕಾರಣ ಮಾಪೀ ಸಿಕ್ಕಿತ್ತು.

No comments: